ನೆಲಬೇವು ಅಕೇಂಥೇಸಿಯೆ ಕುಟುಂಬಕ್ಕೆ ಸೇರಿದ ಮುಖ್ಯ ಔಷಧಿ ಬೆಳೆ.ಇದು ನೇರವಾಗಿ ಬೆಳೆಯುವ ಗಿಡ. ಪೂರ್ಣ ಬೆಳೆದ ಗಿಡಗಳು ೩೦-೧೦೦ ಸೆಂ.ಮೀ. ಎತ್ತರವಿರುತ್ತದೆ. ಕೊಂಬೆಗಳು ತೀಕ್ಷ್ಣವಾದ ಚೌಕಾಕಾರ ಹೊಂದಿ ಕೆಲವೊಮ್ಮೆ ಕೆರಿದಾದ ರೆಕ್ಕೆಗಳಂತೆ ಗಿಡದ ತುದಿಯ ಕಡೆಗೆ ಚುಚ್ಚಿರುತ್ತದೆ. ಎಲೆಗಳಿಗೆ ತೊಟ್ಟಿರುತ್ತದೆ. ಹೂಗಳು ಚಿಕ್ಕದಾಗೆದ್ದು ಅವು ಹೂಗೊಂಚಲಿನಲ್ಲಿ ಏಕಾಂತವಾಗಿರುತ್ತವೆ. ಹೂದಳಗಳು ಗುಲಾಬಿ ಬಣ್ಣವಿದ್ದು ಹೊರಭಾಗದಲ್ಲಿ ರೋಮಭರಿತವಾಗಿರುತ್ತದೆ. ಹಣ್ಣಿನ ಎರಡೂ ತುದಿಗಳು ಚೂಪಾಗಿ ಇರುತ್ತವೆ. ಬೀಜಗಳು ಬಹಳವಾಗಿದ್ದು ಅವುಗಳ ಬಣ್ಣ ಹಳದಿಯಿದ್ದು ಮೃದುವಾಗಿರುತ್ತದೆ.
ಜ್ವರ: ಮಲೇರಿಯಾ, ಟೈಫಾಯ್ಡ್ ಮತ್ತು ಯವುದೇ ದೀರ್ಘಕಾಲೀನ ಜ್ವರದಲ್ಲಿಯೂ ನೆಲಬೇವು ತುಂಬಾ ಉಪಯುಕ್ತವಾದುದು.
ಜಂತುಹುಳುವಿನ ತೊಂದರೆಯಿದ್ದಲ್ಲಿ ಪ್ರತಿದಿನ ರಾತ್ರಿಮಲಗುವ ಮುಂಚೆ ಏಳುದಿನಗಳ ಕಾಲ ನೆಲಬೇವಿನ ಕಷಾಯ ಕುಡಿಯಬೇಕು. ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ ಕುಡಿಸಬೇಕು. ನೆಲಬೇವಿನ ಕಷಾಯಕ್ಕೆ ಜೇನು ಬೆರೆಸಿ ಕುಡಿಸಬಹುದು.
ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರು ನೆಲಬೇವಿನ ಕಾಂಡವನ್ನು ಒಂದು ರಾತ್ರಿ ಮಜ್ಜಿಗೆಯಲ್ಲಿ ನೆನೆಯಿಟ್ಟು ನಂತರ ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಚಮಚೆಯಷ್ಟುತೆಗೆದುಕೊಂಡು ತುಪ್ಪದಲ್ಲಿ ಹುರಿದು ಊಟ ಮಾಡುವಾಗ ಅನ್ನದೊಂದಿಗೆ ಬೆರೆಸಿ ತಿನ್ನಬೇಕು.
ಕಾಮಾಲೆ ಮತ್ತು ಇತರ ಯಕೃತ್ತಿನತೊಂದರೆಗಳಿಂದ ಬಳಲುವವರಿಗೆ ನೆಲಬೇವಿನ ಇಡೀ ಗಿಡದ ಕಷಾಯ ತುಂಬ ಉಪಯುಕ್ತ. ಹಾವುಕಡಿತದಲ್ಲಿಯೂನೆಲಬೇವಿನ ಕಷಾಯ ತುಂಬ ಉಪಯುಕ್ತ.ಇದು ವಿಷಹರವಾಗಿ ಕೆಲಸ ಮಾಡುತ್ತದೆ.
ಅತಿರಕ್ತಸ್ರಾವ: ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಅಧಿಕವಾಗುತ್ತಿದ್ದಲ್ಲಿ ನೆಲಬೇವಿನ ಕಷಾಯ ಮತ್ತು ಶ್ರೀಗಂಧದ ಕಷಾಯವನ್ನು ದಿನಕ್ಕೆ ೩ಬಾರಿ ಕುಡಿಯಬೇಕು.
ಸಕ್ಕರೆ ಕಾಯಿಲೆಂದ ಬಳಲುವವರು: ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೇ ನೆಲಬೇವಿನ ರಸ ಅಥವಾ ಕಷಾಯ ಸೇವನೆ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.
ಅರ್ಧ ತಲೆನೋವು: ನೆಲಬೇವು, ಅಮೃತಬಳ್ಳಿ, ಬೇವಿನ ತೊಗಟೆ,ಅರಶಿನ ಸಮವಾಗಿ ಬೆರಸಿ ಕುಟ್ಟಿಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಎದೆಯುರಿ ತಲೆಸುತ್ತುಇದ್ದಲ್ಲಿ ಕಾಲು ಚಮಚೆ ಒಣಗಿದ ನೆಲಬೇವಿನ ನಯವಾದ ಪುಡಿಗೆ ಸಕ್ಕರೆ ಇಲ್ಲವೇ ಜೇನುತುಪ್ಪ ಬೆರೆಸಿ ಸೇವಿಸಬೇಕು.