ಹೌದು ಸ್ಮಾರ್ಟ್ ಫೋನ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಮೊದಲ ಮಾಡುವ ಕೆಲಸ ಎಂದರೆ ಫೋನ್ನಲ್ಲಿ ಕಣ್ಣಾಡಿಸುವುದು. ಸಮಯ ಸಿಕ್ಕಾಗೆಲ್ಲಾ ಸಮಯ ಪೋಲಾಗದಂತೆ ಸ್ಮಾರ್ಟ್ ಫೋನ್ನ್ನು ಬಳಸುವಷ್ಟು ನಾವಿಂದು ಮೊಬೈಲ್ನ ದಾಸರಾಗಿದ್ದೇವೆ. ಆಹಾರ ಸೇವಿಸುವ ವೇಳೆ ಸ್ಮಾರ್ಟ್ಫೋನ್ ನೋಡದಿದ್ದರೆ ತಿನ್ನುವ ಆಹಾರ ಗಂಟಲಿನಿಂದ ಕೆಳಗಿಳಿಯುವುದಿಲ್ಲ ಎನ್ನುವ ಮಟ್ಟಿಗೆ ತಲುಪಿದ್ದೇವೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚೆಗೆ ಸ್ಮಾರ್ಟ್ಫೋನ್ ಮೇಲೆ ನಡೆಸಲಾದ ಸಂಶೋಧನೆಯಿಂದ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಟಾಯ್ಲೆಟ್ ಸೀಟ್ನಲ್ಲಿ ಕಂಡು ಬರುವ ಕೀಟಾಣುಗಳಿಗಿಂತ ಮೂರು ಪಟ್ಟು ಕೀಟಾಣುಗಳು ಸ್ಮಾರ್ಟ್ ಫೋನ್ ಸ್ಕ್ರೀನ್ಗಳಲ್ಲಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸ್ಮಾರ್ಟ್ ಫೋನ್ ಬಳಸುವ ಶೇ.35 ರಷ್ಟು ಜನರು ತಮ್ಮ ಮೊಬೈಲ್ನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ. ವೈಪ್, ಫ್ಲುಯೆಡ್ ಗಳನ್ನು ಬಳಸಿ ಮೊಬೈಲ್ ಸ್ಕ್ರೀನ್ಗಳನ್ನು ಕ್ಲೀನ್ ಮಾಡಬೇಕಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರತಿ 20 ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಒಬ್ಬರು ಮಾತ್ರ 6 ತಿಂಗಳಿಗೊಮ್ಮೆ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುತ್ತಾರೆ ಎಂದು ಇಂಗ್ಲೆಂಡ್ನ 2ಗೋ ಮೊಬೈಲ್ ಇನ್ಶುರೆನ್ಸ್ ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.
ಎರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್, ವೌಲ್ಡ್ ಪ್ರಮಾಣವನ್ನು ಪರೀಕ್ಷಿಸಲು ಅಧ್ಯಯನ ತಂಡವು ಐಫೊನ್ 6, ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ಗ್ಯಾಲೆಕ್ಸಿ 8 ಮೊಬೈಲ್ಗಳನ್ನು ಆಯ್ದುಕೊಂಡಿದ್ದರು. ಹಾಗೆಯೇ ಎಲ್ಲ ಮೊಬೈಲ್ಗಳಲ್ಲೂ ಎರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್ ಮತ್ತು ವೌಲ್ಡ್ ಕೀಟಾಣುಗಳು ಕಂಡು ಬಂದಿದ್ದು, ಅದರಲ್ಲೂ ಸ್ಕ್ರೀನ್ನಲ್ಲಿ ಅಧಿಕ ಪ್ರಮಾಣದಲ್ಲಿ ಕೀಟಾಣುಗಳು ಕಂಡು ಬಂದಿದೆ. ಇದರಿಂದ ಚರ್ಮ ಮತ್ತು ಇತರೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.
ನಾವು ಸ್ಮಾರ್ಟ್ ಫೊನ್ಗಳಿಂದ ದೂರವಿರುವುದಿಲ್ಲ. ಸದಾ ಮೊಬೈಲ್ಗಳನ್ನು ಎಲ್ಲೆಡೆ ಕೊಂಡೊಯ್ಯುತ್ತೇವೆ. ಇದರಿಂದ ಕೆಲವು ಸೂಕ್ಷ್ಮಜೀವಿಗಳು ಮೊಬೈಲ್ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು 2ಗೊ ಸಂಸ್ಥೆಯ ಅಧಿಕಾರಿ ಗ್ಯಾರಿ ಬೀಸ್ಟನ್ ತಿಳಿಸಿದ್ದಾರೆ. ಆದ್ದರಿಂದ ಇನ್ನು ಮುಂದಾದರು ಸುರಕ್ಷಿತವಾಗಿ ಮತ್ತು ಎಚ್ಚರವಾಗಿರಿ.