ಪರಿಚಿತರೇ ಇರಲಿ, ಅಪರಿಚಿತರೇ ಇರಲಿ ದಾರಿಯಲ್ಲಿ ಭೇಟಿಯದವರನ್ನು ನೋಡಿದಾಗ ಮುಗುಳ್ನಗೆಯೊಂದನ್ನು ಬೀರಿದರೆ ನಾವು ಕಳೆದುಕೊಳ್ಳುವುದು ಏನಿಲ್ಲ. ಹತ್ತಡಿ ದೂರವಿದ್ದರೂ ಒಂದಡಿ ಹತ್ತಿರವಾಗುತ್ತಾರೆ. ಪರಸ್ಪರ ಮಾತುಕತೆಯ ವೇಳೆ, ಕಣ್ಣಿಗೆ ಕಣ್ಣು ಕೊಟ್ಟು ಮಾತಾಡೋದು ಒಂದು ಸಭ್ಯತೆ. ಇತರರಿಗೂ ಮಾತನಾಡುವ ಅವಕಾಶ ನೀಡಬೇಕು ಹಾಗೂ ಅವರ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳಬೇಕು. ಸ್ವಪ್ರಶಂಸೇ, ಪರ ನಿಂದನೆ ಎರೆಡೂ ಸಲ್ಲ. ಅವರ ಮನ ಚುಚ್ಚುವ ಮಾತುಗಳನ್ನು ಎಂದೂ ಆಡಬಾರದು. ಅಂತೆಯೇ ಅವರ ತೂಕ, ಬಣ್ಣ, ಹಾಗೂ ಎತ್ತರದ ಬಗ್ಗೆ ಕಮೆಂಟ್ ಮಾಡಬಾರದು. ಓಹ್ ನಿಮಗಿನ್ನೂ ಮದುವೆ ಆಗಿಲ್ಲವೇ? ಮಕ್ಕಳಾಗಿಲ್ಲ ವೆ? ಏಕೆ? ನಿಮ್ಮ ವಯಸ್ಸೆಷ್ಟು? ತಿಂಗಳ ಸಂಬಳ ಎಷ್ಟು? ನಿಮ್ಮ ಜಾತಿ ಯಾವುದೂ? ಎಂಬ ವಯಕ್ತಿಕ ವಿಷಯಗಳನ್ನು ಪ್ರಶ್ನಿಸುವುದು ಒಳ್ಳೆಯದಲ್ಲ; ಎಲ್ಲಾರ್ರನ್ನು ಬಹು ವಚನದಲ್ಲಿ ಸಂಬೋಧಿಸುವ ಕ್ರಮ ನಮ್ಮದಾಗಲಿ. ಅಂತೆಯೇ ಏರು ಧ್ವನಿಯಲ್ಲಿ ಇಲ್ಲವೇ ಸುತ್ತಿ ಬಳಸಿ ಮಾತನಾಡುವುದು ಸಭ್ಯತೆ ಅಲ್ಲ. ಅಭಿಪ್ರಾಯ ಬೇಧಗಳನ್ನು ಒಪ್ಪಲಾಗದಿದ್ದರೂ ಗೌರವಿಸಬೇಕು.
ನಮ್ಮ ಪಾಥ್ರಗಳಿಲ್ಲದ ವಿಚಾರಗಳಲ್ಲಿ ತಲೆ ತೂರಿಸುವುದು ಇಲ್ಲವೇ ಆಗಸದ ಉಪದೇಶಗಳನ್ನು ನೀಡುವುದು ಕೂಡ ಸಭ್ಯತೆ ಅಲ್ಲ. ದೂರವಾಣಿಯಲ್ಲಿ ಮಾತನಾಡಲು ಆರಂಭಿಸುವ ಮುನ್ನ ಒಂದೆರೆಡು ನಿಮಿಷ ಮಾತನಾಡಬಹುದೇ ಎಂದು ಕೇಳಿ ಅವರ ಅನುಮತಿ ಪಡೆದೇ ಮುಂದುವರಿಯಬೇಕು. ಯಾರಿಗೆ ಆದರೂ ಎರೆಡು ಬಾರಿ ಫೋನ್ ಮಾಡಿದರೂ ಅವರು ನಿಮ್ಮ ಕರೆಯನ್ನು ಸ್ವೀಕರಿಸಲಿಲ್ಲ ಎಂದರೆ ಅವರನ್ನು ತಪ್ಪಾಗಿ ತಿಳಿಯದೇ ಅವರಿಗೆ ಇನ್ಯಾವುದೂ ಬೇರೆ ಮುಖ್ಯ ಕೆಲ್ಸ ಇದೆ ಎಂದು ತಿಳಿಯಬೇಕು. ದೂರವಾಣಿ ಕರೆಗಳು ಬಂದಾಗ ಪದೇ ಪದೇ ಕಟ್ ಮಾಡುವುದು, ಕರೆಗಳಿಗೆ ಉತ್ತರಿಸದೇ ಇರುವುದು ಸಾರ್ವಜನಿಕ ಸ್ಥಳಗಳಲ್ಲಿ ಏರುದನಿಯಲ್ಲಿ ಇಲ್ಲ ತುಂಬಾ ಹೊತ್ತು ಮಾತನಾಡುವುದು ಸಭ್ಯತೆ ಅಲ್ಲ. ಇಬ್ಬರು ಮಾತನಾಡುತ್ತಿರುವಾಗ ಮಧ್ಯೆ ಮಾತನಾಡಿಸುವುದು ಸಭ್ಯೆತೆ ಎನಿಸುವುದಿಲ್ಲ. ಒಬ್ಬರು ಮಾತು ನಿಲ್ಲಿಸಿದ ನಂತರವೇ ಮಾತನಾಡಬೇಕು. ತುಂಬಾ ಅರ್ಜೆಂಟ್ ಇದ್ದರೆ ಕ್ಷಮಿಸಿ ಎಂದು ಹೇಳುತ್ತಾ ಅವರ ಒಪ್ಪಿಗೆ ಪಡೆದು ಮಾತನಾಡುವುದು ಸಭ್ಯತೆ. ಯಾವುದೇ ವ್ಯಕ್ತಿಯ ಪರಿಚಯ ಹೇಳುವಾಗ ಆ ಕುಳ್ಳ – ದಪ್ಪಗಿನ ಮನುಷ್ಯ ಎಂದೂ, ಆ ಕಿವುಡ – ಕೆಪ್ಪ – ಕುರುಡ ಎಂದೂ ಸಂಭೋದಿಸುವುದು ತರವಲ್ಲ. ಅಂಗ ವಿಕಲರನ್ನು, ಹಿರಿಯರನ್ನು, ಮಹಿಳೆಯರನ್ನು ಗೌರವದಿಂದ ಕಾಣಬೇಕಾದುದು ಸಭ್ಯತೆ. ಬಂದ ಅತಿಥಿಗಳು ಯಾರೇ ಇರಲಿ ಅವರನ್ನು ಪ್ರೀತಿಯಿಂದ ಗೌರವದಿಂದ ಸ್ವಾಗತಿಸುವುದು ಸಭ್ಯತೆ. ಅತಿಥಿಗಳು ಬಂದಾಗ ಕುಳಿತಲ್ಲಿಂದ ಎಳದಿರುವುದು, ಟಿವಿ ನೋಡುತ್ತಲೇ, ಪೇಪರ್ ಓದುತ್ತಲೂ ಇರುವುದು ಸಭ್ಯತೆ ಅಲ್ಲ. ಬಂದ ಅತಿಥಿಗಳು ಶ್ರೀಮಂತ ಆಗಿರಲಿ, ಬಡವರಾಗಿರಲಿ, ಎಲ್ಲರನ್ನೂ ಒಂದೇ ರೀತಿಯಲ್ಲಿ ಉಪಚರಿಸುವುದು, ಪಂಕ್ತಿ ಭೇದ ಮಾಡದಿರುವುದು, ಅತಿಥಿಗಳ ಮಡದಿ ಮಕ್ಕಳ ಜೊತೆ ಜಗಳ ಆಡದಿರುವುದು ಸಭ್ಯತೆ.
ಬಡವರ ಎದುರು ನಮ್ಮ ಸಿರಿವಂತಿಕೆಯ ಬಗ್ಗೆ, ನತದೃಷ್ಟರ ಎದುರು ನಮ್ಮ ಅದೃಷ್ಟದ ಬಗ್ಗೆ, ಮಕ್ಕಲಿಲ್ಲದವರ ಮುಂದೆ ಸಂತಾನ ಯೋಗದ ಕುರಿತು ಮಾತನಾಡಬಾರದು. ಸಹಾಯ ಕೇಳಲು ಬಂದವರನ್ನು ಉಪೆಕ್ಷಿಸಬಾರದು. ಗೌರವದಿಂದ ಕಾಣಬೇಕು. ಹಿರಿಯರ ಎದುರು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಇಲ್ಲವೇ ಕಾಲುಗಳನ್ನು ಅಲ್ಲಾಡಿಸುವುದು ಸಭ್ಯತೆ ಅಲ್ಲ. ಮನೆಯಿಂದ ಹೊರಗೆ ಹೋಗುವಾಗ ಮನೆಯಲ್ಲಿದ್ದವರಿಗೆ ಹೇಳಿ ಹೋಗಬೇಕು. ಹಾಗೂ ಹಿಂತಿರುಗಿದ ಮೇಲೆ ಎಲ್ಲರನ್ನೂ ಮಾತಾಡಿಸಬೇಕು. ಯಾರಿಂದಲಾದರೂ ಹಣ/ವಸ್ತು ಪಡೆದಿದ್ದರೆ ಅವರು ಕೇಳುವ ಮುನ್ನವೇ ಹಿಂತಿರುಗಿಸಬೇಕು. ಉಪಕರಿಸಿದವರಿಗೆ ಧನ್ಯವಾದ ಹಾಗೂ ನಮ್ಮಿಂದ ತೊಂದರೆಯಾಗುತ್ತಿದೆ ಎಂದರೆ ಕ್ಷಮಿಸಿ ಎಂಬ ಪದ ಪ್ರಯೋಗ ಇರಲಿ. ಎಲ್ಲೇ ಇರಲಿ ಶೌಚ ಗೃಹ ಬಳಸಿದ ನಂತರ ಫ್ಲಶ್ ಮಾಡುವ ಹಾಗೂ ಅನಗತ್ಯವಾಗಿ ಉರಿಯುತ್ತಿರುವ ಲೈಟುಗಳು, ತಿರುಗುತ್ತಿರುವ ಫ್ಯಾನ್ ಗಳನ್ನೂ, ಸುರಿಯುತ್ತಿರುವ ನಲ್ಲಿಗಳನ್ನು ನಿಲ್ಲಿಸುವುದು ಸಭ್ಯತೆ. ಜನರು ಕ್ಯೂ ನಲ್ಲಿ ನಿಂತಾಗ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಮಧ್ಯ ಸೇರುವುದು, ಸಾರ್ವಜನಿಕ ಊದ್ಯಾನಗಳಲ್ಲಿ ಹೂವು ಕೀಳುವುದು, ಉಗುಳುವುದು, ಕಸ ಎಸೆಯುವುದು, ಗ್ರಂಥಾಲಯಗಳಲ್ಲಿ ಪುಸ್ತಕಗಳ ಮೇಲೆ ಗೀಚುವುದು, ಹಾಳೆಗಳನ್ನು ಕದಿಯುವುದು ಸಭ್ಯತೆಯಲ್ಲ. ನೋಟುಗಳನ್ನು ಎಣಿಸುವಾಗ, ಪುಟ ತೆರೆಯುವಾಗ, ಟಿಕೆಟ್ ಹರಿಯುವಾಗ, ಎಂಜಲನ್ನು ಬಳಸಿಕೊಳ್ಳುವುದು ಹಾಗೂ ಊಟ ಮಾಡುವಾಗ ಸದ್ದು ಮಾಡುವುದು, ಸಭೆ ಸಮಾರಂಭಗಳ ಮಧ್ಯೆ ಎದ್ದು ಹೋಗುವುದು, ಆಕಳಿಸುವುದು, ತೂಕಡಿಸುವುದು, ಮಾತನಾಡುವುದು ಸಭ್ಯತೆಯಲ್ಲ. ಶುಭದಿನ.