ನಮಸ್ತೆ ಪ್ರಿಯ ಓದುಗರೇ, ಈ ಜಗ ತ್ತಿನ ಆದಿ ಅಂತ್ಯದ ಮೂಲ ಭಗವಂತ ಎಂದು ನಂಬಲಾಗಿದೆ. ಯಾವಾಗ ಭೂಮಿಯ ಮೇಲೆ ದುಷ್ಟರ ಪಾಪ ಕಾರ್ಯಗಳು ಅಧಿಕ ಆಗುತ್ತೋ ಆಗೆಲ್ಲ ಭಗವಂತನು ಅವತಾರ ಎತ್ತುತ್ತಾನೇ. ಅದ್ರಲ್ಲೂ ಪಡುಗಡಲ ಮೇಲೆ ವಾಸಿಸುವ ಶ್ರೀಮನ್ ನಾರಾಯಣನು ಅವತರಿಸಿದ ಅವತಾರಗಳಿಗೆ ಲೆಕ್ಕವೇ ಇಲ್ಲ. ಸಾಮಾನ್ಯವಾಗಿ ನಾವು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಉಗ್ರ ನರಸಿಂಹ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರೆ ಸ್ವಾಮಿಯ ವಿಗ್ರಹ ನೋಡ್ತೀವಿ. ಆದ್ರೆ ಈ ದೇಗುಲದಲ್ಲಿ ನರಸಿಂಹ ಸ್ವಾಮಿಯು ಕಂಬದ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಬನ್ನಿ ಹಾಗಾದರೆ ಆ ದೇವಾಲಯ ಎಲ್ಲಿದೆ? ಅಲ್ಲಿನ ವಿಶೇಷತೆಗಳು ಏನೇನು ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಕೋಟೆ ಬೆಟ್ಟ ಅಥವಾ ದೊಡ್ಡ ಬೆಟ್ಟ ಎಂದು ಕರೆಯುವ ಕಡಿದಾದ ಬೆಟ್ಟದ ತುತ್ತತುದಿಯಲ್ಲಿ ನರಸಿಂಹ ಸ್ವಾಮಿಯು ಕಂಬದ ರೂಪದಲ್ಲಿ ನೆಲೆ ನಿಂತಿದ್ದಾನೆ. ಈ ದೇವನನ್ನು ದರ್ಶನ ಮಾಡಬೇಕು ಎಂದ್ರೆ ನೂರಾರು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ಈ ದೇಗುಲದ ಪ್ರಮುಖ ಆಕರ್ಷಣೆ ಏನು ಅಂದ್ರೆ ಇಪ್ಪತ್ತು ಅಡಿ ಎತ್ತರವಿರುವ ನರಸಿಂಹ ಮೂರ್ತಿ. ಹಿರಣ್ಯ ಕಶ್ಯಪ ನನ್ನು ಸಂಹರಿಸುವ ಭಂಗಿಯಲ್ಲಿ ಉಗ್ರ ನರಸಿಂಹ ಮೂರ್ತಿಯನ್ನು ದೇಗುಲದ ಹೊರ ಪ್ರಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದು, ಈ ಮೂರ್ತಿಯನ್ನು ನೋಡ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ. ಪುಟ್ಟದಾದ ಗೋಪುರ, ಪ್ರದಕ್ಷಿಣಾ ಪಥ, ಬಂಗಾರದ ಕವಚಗಳಿಂದ ಕೂಡಿದ ಗರ್ಭಗೃಹ ಹೊಂದಿರುವ ಈ ಆಲಯವನ್ನು ಪ್ರಕೃತಿಯ ಅನನ್ಯ ಸೌಂದರ್ಯದ ನಡುವೆ ನಿರ್ಮಿಸಲಾಗಿದೆ.
ಈ ಸ್ಥಳದಲ್ಲಿ ನರಸಿಂಹ ಸ್ವಾಮಿಯು ಮೂರು ಅಡಿ ಎತ್ತರದ ಕಂಬದಲ್ಲಿ ನೆಲೆ ನಿಂತಿದ್ದು ಸ್ವಾಮಿ ಇರುವ ಕಂಬದಲ್ಲಿ ಶಂಖ, ಚಕ್ರ ಬಿಲ್ಲು, ತಿರು ನಾಮಗಳನ್ನು ಇರುವುದನ್ನು ಕಾಣಬಹುದು. ಇನ್ನೂ ಈ ಕ್ಷೇತ್ರದಲ್ಲಿ ಸ್ವಾಮಿ ನೆಲೆಸಿದ್ದರ ಬಗ್ಗೆ ಒಂದು ಕಥೆ ಕೂಡ ಪ್ರಚಲಿತವಾಗಿದೆ. ಬಹಳ ಹಿಂದೆ ವೆಂಕಟರಮಣ ನ ಭಕ್ತರಾಗಿದ್ದ ನರಸಿಂಹಯ್ಯ ಎನ್ನುವವರಿಗೆ ಶ್ರಾವಣ ಮಾಸದ ಭೀಮನ ಅಮಾವಾಸ್ಯೆ ದಿನ ರಾತ್ರಿ ಕನಸಿನಲ್ಲಿ ನರಸಿಂಹ ಸ್ವಾಮಿ ಕಾಣಿಸಿಕೊಂಡು ನಾನು ಪ್ರಕೃತಿ ಸೌಂದರ್ಯ ದಿಂದ ಕೂಡಿದ ಬೆಟ್ಟದಲ್ಲಿ ಕಂಬದ ರೂಪದಲ್ಲಿ ಉದ್ಭವಿಸುತ್ತೇನೆ. ನೀನು ನನ್ನನು ಭಕ್ತಿಯಿಂದ ಪೂಜಿಸಿ ನಿನಗೆ ಸಕಲವೂ ಒಳ್ಳೆಯದು ಆಗುತ್ತದೆ ಎಂದು ಹೇಳಿದನಂತೆ. ತನ್ನ ಭಕ್ತನಿಗೆ ದರ್ಶನ ನೀಡುವ ಸಲುವಾಗಿ ಸಾಕ್ಷಾತ್ ನರಸಿಂಹ ಸ್ವಾಮಿ ಈ ಕ್ಷೇತ್ರದಲ್ಲಿ ಬಂದು ನೆಲೆಸಿದ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಬದುಕಿನಲ್ಲಿ ಎಷ್ಟೇ ಕಷ್ಟಕರ ಸಮಸ್ಯೆ ಇದ್ರೂ ಈ ಕ್ಷೇತ್ರಕ್ಕೆ ಬಂದು ನರಸಿಂಹ ಸ್ವಾಮಿಗೆ ಹರಕೆ ಹೊತ್ತರೆ ಸಂಕಷ್ಟಗಳು ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ ಎನ್ನುವುದು ಭಕ್ತರ ಮನದ ಮಾತಾಗಿದೆ. ತನ್ನ ಬಳಿ ಯಾರೇ ಬಂದು ಏನೇ ಪ್ರಶ್ನೆಗಳನ್ನು ಕೇಳಿದರೂ ಇಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ ಪುಷ್ಪ ಪ್ರಸಾದ ನೀಡುವುದರ ಮೂಲಕ ಉತ್ತರವನ್ನು ನೀಡುತ್ತಾನೆ.
ಈ ದೇಗುಲಕ್ಕೆ ಬಂದವರು ಸ್ವಾಮಿಗೆ ತುಳಸಿ ಮಾಲೆ ಅಥವಾ ಧೂಪ ದೀಪಗಳನ್ನು ಅರ್ಪಿಸಿ ಹೋಗುವುದರಿಂದ ಸಕಲವೂ ಶುಭ ಆಗುತ್ತೆ ಎನ್ನುವ ಮಾತುಗಳು ಈ ಕ್ಷೇತ್ರಕ್ಕೆ ಬಂದು ಒಳಿತನ್ನು ಕಂಡ ಭಕ್ತರ ಮನದ ಮಾತಾಗಿದೆ. ಇಲ್ಲಿರುವ ಸ್ವಾಮಿಗೆ ಅಭಿಷೇಕ ಸೇವೆ ಅಂದ್ರೆ ಬಲು ಇಷ್ಟವಾದ ಸೇವೆ ಆಗಿದೆ. ಅತ್ಯಂತ ಪುರಾತನವಾದ ದೇವಾಲಯವನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಕಡಿದಾದ ಕಲ್ಲು ಬಂಡೆಗಳ ಇದ್ದ ಜಾಗದಲ್ಲಿ ಭಕ್ತಾದಿಗಳು ಅನುಕೂಲಕ್ಕಾಗಿ ಉತ್ತಮವಾದ ಮೆಟ್ಟಿಲು, ಶೆಡ್ ಗಳನ್ನು ನಿರ್ಮಿಸಲಾಗಿದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವನಿಗೆ ನರಸಿಂಹ ಜಯಂತಿ ಅಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಮೇ ತಿಂಗಳಲ್ಲಿ ಈ ಕ್ಷೇತ್ರದಲ್ಲಿ ಒಂದು ತಿಂಗಳ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಪ್ರತಿ ಶನಿವಾರ ದೇವರಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ನಿತ್ಯ ದೇವರಿಗೆ ಅಭಿಷೇಕ ಸಹಿತ ಪೂಜೆಯನ್ನು ನೆರೇರಿಸಲಾಗುತ್ತದೆ. ಕಂಬದ ರೂಪದಲ್ಲಿ ನೆಲೆಸಿರುವ ಈ ಸ್ವಾಮಿಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಭಕ್ತಾದಿಗಳು ತಮ್ಮ ಇಷ್ಟಾನುಸಾರ ಪೂಜೆಯನ್ನು ಮಾಡಿಸುತ್ತಾರೆ. ಕಂಬದ ನರಸಿಂಹ ಸ್ವಾಮಿ ನೆಲೆ ನಿಂತಿರುವ ಈ ಪುಣ್ಯ ಕ್ಷೇತ್ರವೂ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೋಟೆ ಬೆಟ್ಟ ಎಂಬ ಹಳ್ಳಿಯಲ್ಲಿ ಇದ್ದು, ಈ ಕ್ಷೇತ್ರವು ಬೆಂಗಳೂರಿನಿಂದ 124 ಕಿಮೀ, ಮಂಡ್ಯದಿಂದ 38 ಕಿಮೀ, ನಾಗಮಂಗಳದಿಂದ 6 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಅತ್ಯಂತ ಸುಂದರವಾದ ಪ್ರಕೃತಿ ಹೊಂದಿರುವ ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ. ಶುಭದಿನ.