ಕೂದಲು ಉದುರುವ ಸಮಸ್ಯೆ ಇರುವವರು ಕೆಲವೊಂದು ಸರಳ ಮನೆಮದ್ದಿನ ಪ್ರಯೋಗ ಮಾಡಿ ಒಳ್ಳೆಯ ಫಲಿತಾಂಶ ಪಡೆಯಬಹುದು. ತಲೆ ಹೊಟ್ಟಿನ ನಿವಾರಣೆ, ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಈರುಳ್ಳಿಯೂ ಪ್ರಮುಖ ಪಾತ್ರವಹಿಸುತ್ತದೆ.
ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲ ಎಲ್ಲ ಸಮಸ್ಯೆಗಳು ಬಹುಬೇಗ ಕಡಿಮೆಯಾಗುತ್ತದೆ.
ಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚ ಈರುಳ್ಳಿ ರಸ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ಈರುಳ್ಳಿಗೆ ಜೇನುತುಪ್ಪ ಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ.