ಮುತ್ತುಗದ ಹೂವು ಇದು ಸಾಹಿತಿಗಳ ಲೇಖನಿಯಲ್ಲಿ ನಲಿದಾಡಿ ಎಲ್ಲರ ಗಮನ ಸೆಳೆದುಕೊಂಡಿದೆ. ಮುತ್ತುಗದ ಹೂವಿಗೆ ಸುಗಂಧವಿಲ್ಲ. ಮುತ್ತುಗದ ಮರ ಫೆಬ್ರವರಿ ಮಾರ್ಚ್ ತಿಂಗಳುಗಳಲ್ಲಿ ಹೂಗಳಿಂದ ಆವೃತವಾದಾಗ ಕಣ್ಣನಿಗೆ ಹಬ್ಬ. ಕೆಂಪು, ಹಳದಿ, ನೀಲಿ ಮತ್ತು ಬಿಳಿಯ ಮುತ್ತುಗವೆಂಬ ನಾಲ್ಕು ಜಾತಿಗಳಿವೆ. ಮುತ್ತುಗಡಲೆಯಿಂದ ಊಟದ ಎಲೆಯನ್ನು ತಯಾರಿಸುವರು. ಹೋಮ ಹವನಗಳಿಗೆ ಕಡ್ಡಿಯನ್ನು ಸಮಿಥೆಯಾಗಿ ಬಳಸುವವರು. ಅದಕ್ಕೆ ಈ ಮರಕ್ಕೆ ಬ್ರಹ್ಮವೃಕ್ಷ ಎಂಬ ಹೆಸರು ಇದೆ. ಈ ಮರದ ಚಿಗುರೆಲೆ, ಹೂವು, ಬೀಜ, ಬೇರು ಮತ್ತು ಅಂಟು ಉಪಯುಕ್ತ ಭಾಗಗಳಾಗಿವೆ.
ಮೂಲವ್ಯಾಧಿಯ ತೊಂದರೆಯಿಂದ ಬಳಲುವವರು ಎಳೆ ಎಲೆಯನ್ನು ಮಜ್ಜಿಗೆಯಲ್ಲಿ ಅರೆದು ಕುಡಿಯಬೇಕು. ಗರ್ಭಿಣಿಯರು ಪ್ರತಿ ದಿನ ಒಂದು ಮುತ್ತುಗದ ಚಿಗುರೆಲೆಯನ್ನು ಹಾಲಿನಲ್ಲಿ ಅರೆದು ಕುಡಿಯುವುದರಿಂದ ಹುಟ್ಟುವ ಮಗುವು ಶಕ್ತಿವಂತವಾಗಿರುತ್ತದೆ. ಬೇಡಿಯಿಂದ ಬಳಲುವವರು ತೊಗಟೆಯ ಕಷಾಯ ಕುಡಿಯಬೇಕು.
ಚಿಗುರು ಎಲೆಯು ಊತ ರೋಗ, ಹೊಟ್ಟೆನೋವು, ಚರ್ಮರೋಗಗಳಿಗೂ ಉಪಯುಕ್ತವಾಗಿ ಕೆಲಸ ನಿರ್ವಹಿಸುತ್ತದೆ. ಮುತ್ತುಗದ ಕಾಂಡದಿಂದ ಬರುವ ಅಂಟು, ಕೆಮ್ಮು, ಬಾಯಿ ಹುಣ್ಣಿನಿಂದ ಬಳಲುವವರಿಗೆ ಉಪಯುಕ್ತ. ಕಣ್ಣಿನ ರೋಗದಲ್ಲಿ ಮುತ್ತುಗದ ಬೇರಿನ ರಸವನ್ನು ಕಣ್ಣಿಗೆ ಹನಿಯ ರೂಪದಲ್ಲಿ ಹಾಕಬೇಕು.
ಚೇಳು ಕಚ್ಚದಾಗ ಮುತ್ತುಗದ ಬೀಜವನ್ನು ಎಕ್ಕದ ಹಾಲಿನಲ್ಲಿ ಅರೆದು ಹಚ್ಚಿದರೆ ವಿಷದ ಬಾಧೆ ಕಡಿಮೆಯಾಗುತ್ತದೆ. ಜಂತುಹುಳುಗಳಾದಾಗ ಮುತ್ತುಗದ ಬಲಿತ ಬೀಜದ ಪುಡಿ ಸೇವನೆ ಮಾಡಬೇಕು. ಕ್ರಿಮಿ ಕೀಟಗಳು ಕಚ್ಚಿದಾಗ ಉಂಟಾಗುವ ಗುಳ್ಳೆಗೆ ಬೀಜವನ್ನು ನಿಂಬೆಯ ರಸದಲ್ಲಿ ತೇಯ್ದು ಲೇಪಿಸಬೇಕು. ಮೂತ್ರಸ್ರಾವದಲ್ಲಿ ತಡೆಯುಂಟಾದಾಗ ಮತ್ತು ಉರಿಮೂತ್ರವಿರುವಾಗ ಮುತ್ತುಗದ ಹೂವಿನ ದಳಗಳನ್ನು ಕುಡಿಯುವ ನೀರಿಗೆ ಹಾಕಿ ಆರಿಸಿ ಕುಡಿಯಬೇಕು.