ನಮಸ್ತೆ ಪ್ರಿಯ ಓದುಗರೇ, ನೆಲ್ಲಿಕಾಯಿಯಷ್ಟೂ ಪ್ರಯೋಜನಗಳು ಇರುವ ಇನ್ನೊಂದು ಹಣ್ಣು ಈ ಭೂಲೋಕದಲ್ಲೇ ಇಲ್ಲ ಅಂದರೆ ತಪ್ಪಾಗಲಾರದು. ನೆಲ್ಲಿಕಾಯಿ ವರ್ಷಕ್ಕೆ ಒಮ್ಮೆ ಬಿಟ್ಟರೂ ಇದನ್ನು ತಿಂದ ಪ್ರಣಿ, ಪಕ್ಷಿ ಮತ್ತು ಮನುಷ್ಯರು ವರ್ಷವಿಡೀ ಆರೋಗ್ಯವಂತರಾಗಿ ಉಳಿಯುವಷ್ಟು ತಾಕತ್ತು ಇದರಲ್ಲಿದೆ. ಅಯ್ಯೋ ಇದೇನಿದು ನೆಲ್ಲಿಕಾಯಿ ಗೂ ಸೀಸನ್ ಇದೀಯಾ ಎಂದು ಕೇಳಬಹುದು. ಹಾಗು ವರ್ಷವಿಡೀ ನೆಲ್ಲಿಕಾಯಿ ರಸ ಕುಡಿದರೂ ಆಗಾಗ ಕಾಯಿಲೆ ಬೀಳುತ್ತೇವೆ. ಇದಕ್ಕೆ ಕಾರಣವೇನು? ಎಂದು ಹಲವರಲ್ಲಿ ಪ್ರಶ್ನೆ ಮೂಡಬಹುದು. ಹೌದು! ಚಳಿಗಾಲ ಪ್ರಾರಂಭವಾಗುವಾಗ ನೆಲ್ಲಿಕಾಯಿ ಬಿಡಲು ಶುರು ಆಗುವುದು. ಪ್ರಕೃತಿಯು ಋತುಮಾನಕ್ಕೆ ತಕ್ಕಂತೆ ಜೀವಿಗಳಿಗೆ ಆರೋಗ್ಯವಂತರಾಗಿರಲು ಒಂದಲ್ಲಾ ಒಂದು ಉಪಾಯವನ್ನು ನೀಡುತ್ತಾ ಬಂದಿದೆ. ವಿಪರ್ಯಾಸ ಎಂದರೆ ಯಾವ ಋತುವಿನಲ್ಲಿ ಏನನ್ನು ತಿನ್ನಬೇಕು ಎಂಬುದರ ಅರಿವು ನಮಗೆ ಇರುವುದಿಲ್ಲ. ಇಷ್ಟೇ ಯಾಕೆ, ಯಾವ ಋತುವಿನಲ್ಲಿ ಯಾವ ತರಕಾರಿ, ಹಣ್ಣು, ಬೇಳೆ ಕಾಳುಗಳು ಬೆಳೆಯುತ್ತವೆ ಎನ್ನುವುದು ಕೂಡ ನಮಗೆ ತಿಳಿಯದು. ಹಾಗಾಗಿ ವರ್ಷವಿಡೀ ಅದೇ ತರಕಾರಿ, ಹಣ್ಣು ಗಳನ್ನು ತಿಂದು ಅಯ್ಯೋ ನಾನು ಎಷ್ಟು ಪೌಷ್ಟಿಕ ಆಹಾರ ತಿಂದರೂ ನಮಗೆ ಆರೋಗ್ಯ ದಕ್ಕುತ್ತಿಲ್ಲ ಎಂದು ಅಳುತ್ತೇವೆ. ನೆನಪಿಡಿ ಆರೋಗ್ಯವನ್ನು ಕಾಪಾಡಲು ಪೌಷ್ಟಿಕ ಆಹಾರ ಕ್ಕಿಂತಲೂ ಪ್ರಕೃತಿ ಸಹಜವಾದ ಮತ್ತು ಋತುಮಾನಕ್ಕೆ ಅನುಗುಣವಾದ ಆಹಾರ ಸೇವಿಸುವುದು ಮುಖ್ಯ ಋತುಮಾನಕ್ಕೆ ಅನುಗುಣವಾಗಿ ನಮ್ಮ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ. ಈ ವ್ಯತ್ಯಾಸಕ್ಕೆ ತಕ್ಕಂತೆ ಆಯಾ ಋತುವಿನಲ್ಲಿ ಬೆಳೆಯುವ ಆಹಾರವನ್ನು ತಿಂದಲ್ಲಿ ದೇಹವು ಆರೋಗ್ಯವಂತ ಆಗುತ್ತದೆ.
ಚಳಿಗಾಲದಲ್ಲಿ ನೆಲ್ಲಿಕಾಯಿಯನ್ನು ದಿನನಿತ್ಯ ತಿನ್ನುವುದು ಉತ್ತಮ. ನೆಲ್ಲಿಕಾಯಿಯನ್ನು ತಾಜಾ ರೀತಿಯಲ್ಲೇ ಉಪಯೋಗಿಸಬೇಕು. ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಶೀತ, ನೆಗಡಿ, ಕೆಮ್ಮು ದಮ್ಮುಗಳು ಮನುಷ್ಯನನ್ನು ಕಾಡತೊಡಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ನಮಗೆ ಕೊಡುವ ಕೊಡುಗೆ ನೆಲ್ಲಿಕಾಯಿ. ಜಿಂಕೆಯು ಕಾಡಿನಲ್ಲಿ ಈ ನೆಲ್ಲಿಕಾಯಿಯನ್ನು ತಿಂದು ವರ್ಷವಿಡೀ ಏನೂ ಕಾಯಿಲೆ ಇರದೇ ಜಿಗಿಯುತ್ತಾ ಓಡುತ್ತಾ ಇರುತ್ತದೆ. ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಗೊಳಿಸುವ ಶಕ್ತಿ ಈ ನೆಲ್ಲಿಕಾಯಿಯಲ್ಲಿ ಇದೆ. ಸಾಧಾರಣವಾಗಿ ನವೆಂಬರ್ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ಈ ಹಣ್ಣು ವರ್ಷದ ಮೂರೂ ತಿಂಗಳು ಲಭ್ಯವಿರುತ್ತದೆ. ಈ ಸಮಯದಲ್ಲಿ ದಿನಕ್ಕೆ ಒಂದರಂತೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿಂದರೆ ದೇಹವು ಪುಷ್ಟಿಯುತವಾಗಿ ಇರುತ್ತದೆ. ಇದನ್ನು ತಿನ್ನುವುದರಿಂದ ಇಡೀ ವರ್ಷಕ್ಕೆ ಬೇಕಾಗುವಷ್ಟು ರೋಗ ನಿರೋಧಕ ಶಕ್ತಿಯು ನಮ್ಮ ದೇಹಕ್ಕೆ ಪ್ರಾಪ್ತಿಯಾಗುತ್ತದೆ. ಇದಲ್ಲದೇ ಇದ್ದ ಸಮಸ್ಯೆಗಳ ತೀವ್ರತೆಯೂ ಕಡಿಮೆಯಾಗಿ ರೋಗಗಳು ಶೀಘ್ರವಾಗಿ ಪರಿಹಾರವಾಗುತ್ತವೆ.
ಈ ನೆಲ್ಲಿಕಾಯಿಯ ಗುಣಗಳನ್ನು ಕಂಡ ಚ್ಯವನ ಮಹರ್ಷಿಗಳು ತಾವು ಸೃಷ್ಟಿಸಿದ ಚ್ಯವನಪ್ರಾಶ ಅಂಬುವ ಪ್ರಖ್ಯಾತ ಔಷಧೀಯ ಮೂಲ ದ್ರವ್ಯವನ್ನಾಗಿಸಿದರು. ಇದಲ್ಲದೇ ಚಳಿಗಾಲದಲ್ಲಿ ನೆಲ್ಲಿಕಾಯಿಯ ಸೇವನೆಯಿಂದ ಹೃದಯಕ್ಕೆ ಬಲ ಬರುತ್ತದೆ, ಹೃದಯದ ಗತಿ ಮತ್ತು ಒತ್ತಡ ಕಡಿಮೆಯಾಗುತ್ತದೆ. ರಕ್ತ ಶುದ್ಧವಾಗುತ್ತದೆ. ರಕ್ತದಲ್ಲಿನ ಕೊಬ್ಬು, ಯೂರಿಕ್ ಆಮ್ಲ ಕಡಿಮೆ ಆಗುತ್ತದೆ. ರಕ್ತದಲ್ಲಿನ ಕಬ್ಬಿಣದ ಅಂಶ ಹೆಚ್ಚುತ್ತದೆ. ಬುದ್ಧಿ ಚುರುಕಾಗುತ್ತದೆ, ಗ್ರಹಣ ಶಕ್ತಿಯೂ ಹೆಚ್ಚುತ್ತದೆ. ಜೀರ್ಣ ಶಕ್ತಿಯೂ ವೃದ್ಧಿಸುತ್ತದೆ. ಮಲಗಳ ಶೋಧನೆ ಚೆನ್ನಾಗಿ ಆಗುತ್ತದೆ. ನಮ್ಮ ಮೂತ್ರಕೋಶ ಶುದ್ಧವಾಗುತ್ತದೆ. ಮೂತ್ರಕೋಶದ ಸೋಂಕು, ಉರಿಮೂತ್ರ, ಮೂತ್ರಕೋಶದಲ್ಲಿ ಕಲ್ಲುಗಳ ನಿವಾರಣೆ ಮಾಡುತ್ತದೆ. ಮಧುಮೇಹ ನಿಯಂತ್ರಿಸುವಲ್ಲಿ ನೆಲ್ಲಿಕಾಯಿ ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ ರಕ್ತದ ಕ್ಯಾನ್ಸರ್ ನಿಯಂತ್ರಿಸಲು ನೆಲ್ಲಿಕಾಯಿ ತುಂಬಾ ಉಪಯುಕ್ತ. ಮೂಳೆಗಳ ಸವೆಯುವಿಕೆಯನ್ನು ನಿಯಂತ್ರಿಸುತ್ತದೆ. ದೇಹದ ಬೊಜ್ಜನ್ನು ಕರಗಿಸುತ್ತದೆ. ಇದರ ಲೇಪನದಿಂದ ತಲೆಯ ಹೊಟ್ಟು ನಿವಾರಣಯಾಗುತ್ತದೆ. ಕೂದಲುಗಳು ಧೃಢ, ಕಾಂತಿಯುಕ್ತವಾಗುತ್ತದೆ, ನಿದ್ರೆಯು ಚೆನ್ನಾಗಿ ಬರುತ್ತದೆ. ಕಣ್ಣಿನ ದೋಷಗಳೂ ನಿವಾರಣೆ ಆಗುತ್ತದೆ. ನೆಲ್ಲಿಕಾಯಿಯನ್ನು ಉಪಯೋಗಿಸುವಾಗ ಹಸಿಯಾಗಿ ಉಪಯೋಗಿಸುವುದು ಅತ್ಯಂತ ಪರಿಣಾಮಕಾರಿ. ಶುಭದಿನ.