ಜೀವನದಲ್ಲಿ ಯಾವುದೋ ದೊಡ್ಡ ಸಂಕಷ್ಟ ಎದುರಾದಾಗ ಜನರು, ಅದು ಪರಿಹಾರವಾದ್ರೆ ತಿರುಪತಿಗೆ ಬಂದು ಕೂದಲು ಕೊಡೋ ಹರಕೆ ಕಟ್ಟಿಕೊಳ್ತಾರೆ. ಯಾರಾದ್ರೂ ತಲೆ ಬೋಳಿಸಿಕೊಂಡಿದ್ದು ನೋಡಿದರೂ, ತಿರುಪತಿಗೆ ಹೋಗಿ ಬಂದ್ರಾ ಕೇಳ್ತೀವಿ. ತಿರುಪತಿಯಲ್ಲಿ ಕೂದಲು ಕೊಡೋದು ಅಷ್ಟೊಂದು ಫೇಮಸ್. ಇಷ್ಟಕ್ಕೂ ದೇವರ ಕ್ಷೇತ್ರಕ್ಕೆ ಹೋಗಿ ಕೂದಲು ಕೊಡೋದೇಕೆ ದೇವರಿಗೆ ಕೂದಲೇಕೆ ಬೇಕು ಕೂದಲು ಕೊಡೋ ಈ ಅಭ್ಯಾಸ ತಿರುಪತಿಯಲ್ಲಿ ಆರಂಭವಾಗಿದ್ದಾದ್ರೂ ಹೇಗೆ ಪ್ರತಿ ದಿನ ದೊಡ್ಡ ಮಟ್ಟದಲ್ಲಿ ಸಂಗ್ರಹವಾಗೋ ಈ ಕೂದಲನ್ನು ದೇವಾಲಯದ ಆಡಳಿತ ಮಂಡಳಿ ಏನು ಮಾಡುತ್ತದೆ. ನಿಮ್ಮಲ್ಲೂ ಈ ಪ್ರಶ್ನೆಗಳೆಲ್ಲ ಎಂದಾದರೂ ಎದ್ದಿರಬಹುದು. ಅವುಗಳಿಗೆಲ್ಲ ಉತ್ತರ ನೋಡೋಣ. ಹೌದು, ತಿರುಪತಿ ಜತ್ಯಂತ ಜನಪ್ರಿಯ ಧಾರ್ಮಿಕ ಕ್ಷೇತ್ರ. ವರ್ಷದ ಎಲ್ಲ ದಿನವೂ ಇಲ್ಲಿ ಭಕ್ತ ಸಮೂಹ ಭಾರೀ ಸಂಖ್ಯೆಯಲ್ಲಿ ನೆರೆಯುತ್ತದೆ. ಜೀವನದಲ್ಲಿ ಏನೇ ಸಮಸ್ಯೆ ಬರಲಿ, ತಿಮ್ಮಪ್ಪನ ಮೇಲೆ ಬಾರ ಹಾಕಿ ಕೂದಲ ಹರಕೆ ಕಟ್ಟಿಕೊಳ್ಳುವವರೆಷ್ಟೋ, ಸನ್ನಿಧಾನಕ್ಕೆ ಬಂದು ಪೂಜೆ ಮಾಡಿಸುತ್ತೀವಿ ಎನ್ನುವವರೆಷ್ಟೋ! ತಿರುಪತಿಯಲ್ಲಿ ಪ್ರತಿದಿನ ಸಾವಿರಾರು ಭಕ್ತರು ಪುರುಷ ಮಹಿಳೆಯರೆನ್ನದೆ, ಹಿರಿಕಿರಿಯರೆನ್ನದೆ ತಮ್ಮ ತಲೆ ಕೂದಲನ್ನು ತಿಮ್ಮಪ್ಪನಿಗಾಗಿ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ತಮ್ಮ ಪಾಪ ಕರ್ಮಗಳಿಂದ ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ.
ಕೇಶದಾನದ ಹಿಂದಿನ ಕತೆಯೆಂದರೆ, ಈ ಮೂಲಕ ವೆಂಕಟೇಶ್ವರನು ಕುಬೇರನಿಂದ ಪಡೆದ ಸಾಲವನ್ನು ಮರುಪಾವತಿಸುತ್ತಾನೆ ಎಂಬುದು. ಅದೂ ಅಲ್ಲದೆ, ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಭಕ್ತರು ಕೂದಲು ದಾನ ಮಾಡಿದರೆ, ಅದರ 10 ಪಟ್ಟು ಹೆಚ್ಚು ಮೌಲ್ಯವನ್ನು ದೇವರು ನಿಮಗೆ ಹಣದ ರೂಪದಲ್ಲಿ ನೀಡುತ್ತಾನೆ ಎಂದು ನಂಬಲಾಗಿದೆ. ಯಾರು ತಮ್ಮ ಕೂದಲನ್ನು ದಾನ ಮಾಡುತ್ತಾರೋ ಅವರಿಗೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ದಕ್ಕುವುದು ಎಂದೂ ಹೇಳಲಾಗುತ್ತದೆ. ಮತ್ತೊಂದು ಜನಪ್ರಿಯ ನಂಬಿಕೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ, ಬಾಲಾಜಿ ದೇವರ ಮೇಲೆ ಇರುವೆಗಳ ಪರ್ವತವು ರೂಪುಗೊಂಡಿತು. ಹಸುವೊಂದು ಇಲ್ಲಿಗೆ ಪ್ರತಿ ದಿನ ಭೇಟಿ ನೀಡಿ ಇರುವೆಗಳ ಪರ್ವತಕ್ಕೆ ಮೇಲಿನಿಂದ ಹಾಲನ್ನು ಅಭಿಷೇಕ ಮಾಡುತ್ತಿತ್ತು. ಇದನ್ನು ನೋಡಿದ ಹಸುವಿನ ಮಾಲೀಕರು, ಹಾಲು ತಮಗೆ ಸೇರುತ್ತಿಲ್ಲ ಎಂದು ತೀವ್ರ ಕೋಪಗೊಂಡು ಹಸುವಿನ ತಲೆಗೆ ಕೊಡಲಿಯಿಂದ ಹೊಡೆಯುತ್ತಾರೆ. ಈ ಹೊಡೆತದಿಂದ ಬಾಲಾಜಿ ಗಾಯಗೊಂಡಿದ್ದು, ಅವರ ಕೆಲವು ಕೂದಲು ಕೂಡ ಉದುರುತ್ತದೆ. ಆಗ ತಾಯಿ ನೀಲಾದೇವಿಯು ತನ್ನ ಕೂದಲನ್ನು ಕತ್ತರಿಸಿ ಬಾಲಾಜಿಯ ಗಾಯದ ಮೇಲೆ ಇಡುತ್ತಾಳೆ. ನೀಲಾದೇವಿಯು ಗಾಯದ ಮೇಲೆ ಕೂದಲು ಇಟ್ಟ ತಕ್ಷಣ ಅವನ ಗಾಯ ವಾಸಿಯಾಗುತ್ತದೆ. ಇದರಿಂದ ಸಂತಸಗೊಂಡ ನಾರಾಯಣ, ಕೂದಲು ದೇಹದ ಸೌಂದರ್ಯದ ಪ್ರಮುಖ ಭಾಗವಾಗಿದೆ. ಯಾರು ಕೂದಲು ಕೊಡುತ್ತಾರೋ ಅವರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುತ್ತಾನೆ. ಈ ನಂಬಿಕೆಯ ಫಲವಾಗಿ ಬಾಲಾಜಿ ದೇವಸ್ಥಾನದಲ್ಲಿ ಕೂದಲು ದಾನ ಮಾಡುವ ಸಂಪ್ರದಾಯವಿದೆ.
ತಿರುಪತಿ ಬಾಲಾಜಿ ದೇಗುಲಕ್ಕೆ ಪ್ರತಿ ವರ್ಷ ಲಕ್ಷ ಲಕ್ಷ ಕೆ.ಜಿ ಕೂದಲನ್ನು ದಾನವಾಗಿ ದೊರೆಯುತ್ತದೆ. ತಿರುಪತಿ ದೇವಸ್ಥಾನದಲ್ಲಿ ಪ್ರತಿ ವರ್ಷ ಸರಿಸುಮಾರು 500ರಿಂದ 600 ಟನ್ ಮಾನವ ಕೂದಲನ್ನು ಪ್ರಪಂಚದಾದ್ಯಂತದಿಂದ ಬರುವ ಭಕ್ತರು ದಾನ ಮಾಡುತ್ತಾರೆ. ಪ್ರತಿ ದಿನ ಸಂಗ್ರಹವಾಗುವ ಕೂದಲನ್ನು, ಕುದಿಸಿ, ತೊಳೆದು, ಒಣಗಿಸಲಾಗುತ್ತದೆ. ನಂತರ ನಿಯಂತ್ರಿತ ತಾಪಮಾನದಲ್ಲಿ ವಿಶೇಷ ಗೋಡೌನ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಅವುಗಳನ್ನು ಗುಣಮಟ್ಟದ ಆಧಾರದಲ್ಲಿ ವರ್ಗಗಳಾಗಿ ವಿಂಗಡಿಸಿ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ತಿರುಮಲ ತಿರುಪತಿ ದೇವಸ್ತಾನಂ ಮಂಡಳಿಯು ಈ ಕೂದಲಿನ ಇ-ಹರಾಜನ್ನು ನಡೆಸುತ್ತದೆ. ಕೇವಲ ದಾನ ಮಾಡಿದ ಕೂದಲನ್ನು ಇ-ಹರಾಜು ಮಾಡಿಯೇ ಕೋಟ್ಯಂತರ ರೂಪಾಯಿ ಸಂಗ್ರಹಿಸಲಾಗುತ್ತದೆ. ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕಾಣಿಕೆಯಾಗಿ ಬಂದ ಕೂದಲನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಯುರೋಪ್, ಅಮೇರಿಕಾ, ಚೀನಾ, ಆಫ್ರಿಕಾ ಮತ್ತು ಇತರೆಡೆಗಳಲ್ಲಿ ಹೇರ್ ವಿಗ್‌ಗಳನ್ನು ತಯಾರಿಸಲು ಇವನ್ನು ಕೊಳ್ಳಲಾಗುತ್ತದೆ. ಮಾರುಕಟ್ಟೆಗಳಲ್ಲಿ ಹೇರ್ ವಿಗ್‌ಗಳಿಗೆ ಭಾರಿ ಬೇಡಿಕೆ ಇದೆ.