ನಮಸ್ತೆ ಪ್ರಿಯ ಓದುಗರೇ, ಭಗವಂತನನ್ನು ಒಲಿಸಿಕೊಳ್ಳಲು ಶುದ್ಧವಾದ ಭಕ್ತಿ ಒಂದಿದ್ದರೆ ಸಾಕು, ಆ ದೇವ ನಮ್ಮಿಂದ ನಿರೀಕ್ಷಿಸುವುದು ಒಡವೆ, ವಸ್ತ್ರಗಳನ್ನು, ಧನ ಕನಗಳನ್ನು ಅಲ್ಲ. ಕೆಲವು ಶುದ್ಧವಾದ ಭಕ್ತಿ ಮಾತ್ರ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಭಕ್ತಿಗೆ ಒಲಿದು ಮಲೆನಾಡಿನ ಹಚ್ಚ ಹಸುರಿನ ವನಸಿರಿಯ ನಡುವೆ ಉದ್ಭವ ಮೂರ್ತಿಯಾಗಿ ನೆಲೆ ನಿಂತ ದೊಡ್ನಳ್ಳಿಯ ಶಂಭುಲಿಂಗೇಶ್ವರ ನ ದರ್ಶನ ಮಾಡಿ ಇವತ್ತಿನ ಶುಭದಿನವನ್ನಾ ಪ್ರಾರಂಭ ಮಾಡೋಣ. ಶಿರಸಿ ಊರಿನ ಹೆಸರನ್ನು ಕೇಳುತ್ತಿದ್ದ ಹಾಗೆ ತಾಯಿ ಮಾರಿಕಾಂಬೆ ನೆನಪಾಗುತ್ತಾಳೆ. ತನ್ನನ್ನು ನಂಬಿ ಬಂದ ಭಕ್ತರನ್ನು ಪೊರೆಯುತ್ತಿರುವಾ ಮಾರಿಕಾಂಬೆಯ ಊರಿನ ಸಮೀಪದಲ್ಲಿ ಶ್ರೀ ಶಂಭುಲಿಂಗೇಶ್ವರ ದೇವರು ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಈ ದೇವನು ಸಿದ್ಧಿ ಪ್ರದಾಯಕ ಆಗಿದ್ದು ಈ ಕ್ಷೇತ್ರಕ್ಕೆ ಬಂದು ಹರಕೆ ಹೊತ್ತರೆ ಅದೆಷ್ಟೇ ಕಷ್ಟಕರ ಸಮಸ್ಯೆ ಇದ್ದರೂ ಅವು ದೂರಾಗುತ್ತದೆ ಎಂದು ಹೇಳಲಾಗುತ್ತದೆ. ದೊಡ್ನಳ್ಳಿ ಹಾಗೂ ಸುತ್ತಮುತ್ತಲಿನ ಊರಿನವರು ಮದುವೆ ಮುಂಜಿಯಂತಹ ಶುಭ ಸಮಾರಂಭ ನಿಶ್ಚಯವಾದ ಕೂಡಲೇ ಈ ದೇವನಲ್ಲಿ ಬಂದು ತೆಂಗಿನ ಕಾಯಿ ಸಲ್ಲಿಸಿ ಮಾಡುವ ಶುಭಕಾರ್ಯ ನಿರ್ವಿಘ್ನವಾಗಿ ನಡೆಯುವಂತೆ ದೇವನಲ್ಲಿ ಬೇಡಿಕೊಳ್ಳುತ್ತಾರೆ. ಇನ್ನೂ ಹಲವಾರು ಮಂದಿ ಶುಭಕಾರ್ಯ ಮುಗಿದ ನಂತರ ದೇವರಿಗೆ ತೆಂಗಿನ ಕಾಯಿ ಅರ್ಪಿಸಿ ಭಗವಂತನಿಗೆ ನಮಿಸಿ ಹೋಗುತ್ತಾರೆ.
ಈ ಶಂಭುಲಿಂಗೇಶ್ವರನನ್ನು ಮನದಲ್ಲಿ ನೆನೆದು ಯಾವುದೇ ಕಾರ್ಯಗಳನ್ನು ಮಾಡಿದರೂ ಅವು ವಿಗ್ನವಿಲ್ಲದೆ ಸಾಗುತ್ತೆ ಅನ್ನುವುದು ಈ ದೇವನನ್ನು ನಂಬಿದ ಭಕ್ತರ ಮನದ ಮಾತಾಗಿದೆ. ಇನ್ನೂ ಈ ಕ್ಷೇತ್ರದಲ್ಲಿ ಶಂಭುಲಿಂಗೇಶ್ವರ ನೆಲೆ ನಿಲ್ಲುವುದರ ಹಿಂದೆ ಒಂದು ಸ್ವಾರಸ್ಯವಾದ ಕಥೆ ಇದೆ. ಬಹಳ ಹಿಂದೆ ದೋಡ್ನಲ್ಲಿಯಲ್ಲಿ ವಾಸವಾಗಿದ್ದ ತಿರುಮಲ ಹೆಗಡೆ ಹಾಗೂ ಗೌರಮ್ಮ ದಂಪತಿಗಳಿಗೆ ಶಂಭು ಎನ್ನುವ ಮಗ ಇರುತ್ತಾನೆ. ಶಂಭು ಸದಾ ಕಾಲ ಭಗವಂತನ ಧ್ಯಾನ ಮಾಡುತ್ತಾ ಕಾಲ ಕಳೆಯುತ್ತಾ ಇರುತ್ತಾರೆ. ಒಂದು ಬಾರಿ ಅವರು ದೇವರನ್ನು ಸ್ಮರಿಸುತ್ತಾ ಸಂಚರಿಸುವಾಗ ಅವರಿಗೆ ಒಂದು ಸ್ಥಳದಲ್ಲಿ ಗುಡ್ಡೆ ಹಾಕಿರುವ ಹೂವುಗಳ ರಾಶಿ ಕಾಣಿಸುತ್ತೆ. ಆ ರಾಶಿಯನ್ನು ಸ್ವಚ್ಛಗೊಳಿಸಿ ಅವರು ಮನೆಗೆ ಹೋಗುತ್ತಾರೆ. ಮರುದಿನ ಬಂದು ನೋಡಿದಾಗ ಹಿಂದಿನ ದಿನದಂತೆ ಹೂಗಳ ರಾಶಿ ಕಾಣಿಸುತ್ತೆ. ಎಷ್ಟೇ ಬಾರಿ ಸ್ವಚ್ಛ ಮಾಡಿ ಬಂದರೂ ಆ ಸ್ಥಳದಲ್ಲಿ ಹಿಂದಿನ ದಿನದಂತೆ ಹೂಗಳ ರಾಶಿ ಹಾಸಿರುತ್ತೆ. ಹೀಗೆ ಹಲವಾರು ದಿನಗಳು ಕಳೆದ ಮೇಲೆ ಶಂಭು ಹೆಗಡೆ ಅವರ ಕನಸಿನಲ್ಲಿ ಈಶ್ವರ ಕಾಣಿಸಿಕೊಂಡು ”ಭಕ್ತ ನಾನು ಇನ್ನೂ ಮುಂದೆ ಹೂಗಳ ರಾಶಿ ಬೀಳುವ ಜಾಗದಲ್ಲಿ ಉದ್ಭವಿಸುವೆ. ನಾನು ಉದ್ಭವಿಸುವ ಪೂರ್ವಕ್ಕೆ ಒಂದು ಹೊಂಡ ಇದೆ, ಆ ಹೊಂಡದ ನೀರಿನಿಂದ ನನಗೆ ಅಭಿಷೇಕ ಮಾಡು” ಎಂದು ಹೇಳಿದನಂತೆ. ಈ ರೀತಿಯಾಗಿ ಶಂಭು ಹೆಗಡೆಯವರ ಕನಸಿನಲ್ಲಿ ಕಾಣಿಸಿಕೊಂಡ ಪರಮೇಶ್ವರನು ಇಲ್ಲಿ ಶಂಭುಲಿಂಗೇಶ್ವರ ಆಗಿ ನೆಲೆಸಿದ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ. ಇಲ್ಲಿ ಶಂಭುಲಿಂಗೇಶ್ವರ ಜೊತೆ ನಂದಿ ಹಾಗೂ ನಾಗ ದೇವತೆ ಕೂಡ ನೆಲೆ ನಿಂತಿದ್ದಾರೆ.
ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಇಲ್ಲಿನ ದೇವನಿಗೆ ದೇವಸ್ಥಾನದ ಸಮೀಪ ಇರುವ ನೀರಿನ ಹೊಂಡದಿಂದ ನೀರನ್ನು ಹೊತ್ತು ತಂದು ಅಭಿಷೇಕ ಮಾಡಬೇಕು. ಅಭಿಷೇಕ ಮಾಡಲು ಈ ಹೊಂಡದ ನೀರನ್ನು ಬಿಟ್ಟು ಬೇರೆ ನೀರನ್ನು ಬಳಸಿದರೆ ಅಂಥವರಿಗೆ ಬುದ್ಧಿ ಬ್ರಮನೆ ಆಗುತ್ತೆ ಎಂದು ಪ್ರತೀತಿ ಇದೆ. ಅಲ್ಲದೆ ಈ ಹೊಂಡದ ನೀರಿನಿಂದ ಸ್ನಾನ ಮಾಡಿದರೆ ಚರ್ಮ ರೋಗ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಹೊಂಡದಲ್ಲಿ ಸದಾ ಕಾಲ ನೀರು ತುಂಬಿಕೊಂಡು ಇರುತ್ತದೆ. ಹೀಗಾಗಿ ಈ ಹೊಂಡಕ್ಕೆ ಕಟ್ಟೆಯನ್ನು ಕಟ್ಟಿ ನಿತ್ಯ ಸಾಕಷ್ಟು ಮಂದಿ ಈ ದೇಗುಲಕ್ಕೆ ಭೇಟಿ ನೀಡಿ ಭಗವಂತನ ಅನುಗ್ರಹ ಪಡೆಯುತ್ತಿದ್ದಾರೆ. ಶಿವರಾತ್ರಿಯಂದು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ವಾರ್ಷಿಕ ಜಾತ್ರೆ, ಹೋಮ ಹವನಗಳು ಮತ್ತು ಮದುವೆ ಮಂಗಳ ಕಾರ್ಯಗಳು ಈ ದೇವನ ಸನ್ನಿಧಿಯಲ್ಲಿ ಪ್ರತಿ ವರ್ಷ ನಡೆಯುತ್ತದೆ. ಭಕ್ತ ವತ್ಸಲನಾದ ಈ ದೇವನನ್ನು ಬೆಳಿಗ್ಗೆ 6 ರಿಂದ ಸಂಜೆ 7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸರ್ವಲಂಕೃಥ ಸೇವೆ, ಅಭಿಷೇಕ , ಅಷ್ಟೋತ್ತರ ಶತನಾಮ ಪೂಜೆ, ಹಣ್ಣು ಕಾಯಿ ಸೇವೆ ಮಾಡಿಸಬಹುದು. ಸಾಕ್ಷಾತ್ ಪರಮೇಶ್ವರ ಇಷ್ಟ ಪಟ್ಟು ಬಂದು ನೆಲೆಸಿದ ಈ ಪುಣ್ಯ ಕ್ಷೇತ್ರವೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಎಂಬ ಊರಿನಲ್ಲಿದೇ. ಈ ದೇವಾಲಯ ಶಿರಸಿಯಿಂದ 8 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಶಿರಸಿಗೆ ಹೋದಾಗ ಈ ದೇವಾಲಯವನ್ನು ದರ್ಶನ ಮಾಡಿ ಬನ್ನಿ.