ದೇವಸ್ಥಾನದ ನಿರ್ಮಾಣ, ನಿರ್ಮಾಣದ ಸ್ಥಳ, ವಾಸ್ತು ಹಾಗೂ ದೇವಸ್ಥಾನಕ್ಕೆ ಮಾಡಲಾಗುವ ಪೀಠೋಪಕರಣಗಳು ಸೇರಿದಂತೆ ಇನ್ನಿತರ ಆಯಾಮಗಳು ಎಲ್ಲವೂ ಧಾರ್ಮಿಕ ರೀತಿ-ನೀತಿಗೆ ಅನುಗುಣವಾಗಿಯೇ ಇರಬೇಕು. ಇಲ್ಲವಾದರೆ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೂಕ್ತವಾದ ವಾಸ್ತು, ಪ್ರಾಂಗಣ, ಒಳಾಂಗಣ, ಗರ್ಭಗುಡಿ, ಮಹಾ ದ್ವಾರ ಹಾಗೂ ಕಿಟಕಿಗಳು ಇರುತ್ತವೆ. ಇಲ್ಲವಾದರೆ ಅಲ್ಲಿ ದೈವ ಶಕ್ತಿಯ ಪ್ರಭಾವ ಇರುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ದೇವಸ್ಥಾನ ಎಂದಾಗ ದೇವರು, ಸಾನಿಧ್ಯ ಎನ್ನುವ ಸಂಗತಿಯೊಂದಿಗೆ ಅಲ್ಲಿ ತೂಗಿ ಬಿಟ್ಟಿರುವ ಘಂಟೆಯ ಸಂಗತಿಗಳು ಮನಸ್ಸಿಗೆ ಮೊದಲು ಬರುತ್ತವೆ.
ದೇವಸ್ಥಾನಕ್ಕೆ ಪ್ರವೇಶಿಸುತ್ತಿದ್ದಂತೆ ಆ ಘಂಟೆಯನ್ನು ಒಮ್ಮೆ ಬಡಿದು, ನಮಸ್ಕರಿಸುತ್ತೇವೆ. ನಂತರ ದೇವರ ಸುತ್ತ ಪ್ರದಕ್ಷಿಣೆಯನ್ನು ಹಾಕುವುದು ಸಹಜ. ಈ ಕ್ರಮವನ್ನು ಏಕೆ ಅನುಸರಿಸುತ್ತೇವೆ? ದೇವರ ದರ್ಶನ ಪಡೆಯುವಾಗ ದೇವರಿಗೆ ಏಕೆ ಘಂಟೆಯನ್ನು ಬಾರಿಸುತ್ತೇವೆ? ದೇವರ ಪೂಜೆಯ ವೇಳೆಯಲ್ಲಿ ಏಕೆ ಘಂಟೆಗಳ ನಾದವನ್ನು ಮಾಡಬೇಕು ಎನ್ನುವುದರ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲ. ನಂಬಿಕೆ ಹಾಗೂ ಪದ್ಧತಿಯ ಆಧಾರದ ಮೇಲೆ ಘಂಟೆಯನ್ನು ಬಾರಿಸುವ ಕೆಲಸವನ್ನು ಮಾಡುತ್ತೇವೆ. ಘಂಟೆಯನ್ನು ಬಾರಿಸುವುದು ಒಂದು ಶುಭ ಸೂಚಕ ಎನ್ನುವುದಷ್ಟೇ ನಮಗೆ ತಿಳಿದಿದೆ.ಹೌದು, ದೇವರ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಲೋಹದ ಘಂಟೆಯನ್ನು ಕಟ್ಟುತ್ತೇವೆ. ಅದನ್ನು ಬಡಿದು ನಂತರ ದೇವರಿಗೆ ನಮಸ್ಕಾರ ಮಾಡುತ್ತೇವೆ. ಇದರ ಹಿಂದೆ ಸಾಕಷ್ಟು ಧಾರ್ಮಿಕ ಹಾಗೂ ವೈಜ್ಞಾನಿಕ ವಿಷಯಗಳು ಅಡಗಿವೆ. ಅವುಗಳ ಸೂಕ್ತ ವಿವರ ಇಲ್ಲಿದೆ ನೋಡಿ.
ದೇವಾಲಯದಲ್ಲಿ ವಿಶೇಷ ದೈವ ಶಕ್ತಿ ಹಾಗೂ ಧನಾತ್ಮಕ ಶಕ್ತಿಗಳ ಹರಿವು ನಿರಂತರವಾಗಿ ಇರುತ್ತದೆ. ಇಂತಹ ಒಂದು ಶಕ್ತಿಯ ದರ್ಶನ ಪಡೆಯಲು ಬರುವ ಭಕ್ತಾದಿಗಳು ಎಲ್ಲರೂ ದೇವರಿಗೆ ಘಂಟೆಯನ್ನು ಬಾರಿಸುತ್ತಾರೆ. ಹಾಗಾಗಿ ಪ್ರಾಂಗಣದಲ್ಲಿ ಹಾಗೂ ಪ್ರವೇಶ ದ್ವಾರದಲ್ಲಿ ಸಾಕಷ್ಟು ಘಂಟೆಯನ್ನು ನೇತಾಕುವುದನ್ನು ನಾವು ಕಾಣುತ್ತೇವೆ. ಘಂಟೆ ಬಡಿಯಲು ಮಕ್ಕಳು ಸಹ ಜಿಗಿದು ಬಾರಿಸುವ ಪ್ರಯತ್ನ ಮಾಡುತ್ತಾರೆ. ಘಂಟೆಯ ನಾದ ನಮ್ಮ ಕಿವಿಗೆ ಹಾಗೂ ಮಾನಸಿಕ ಚಿಂತನೆಗಳ ಮೇಲೆ ಸಾಕಷ್ಟು ಉತ್ತಮ ಪರಿಣಾಮವನ್ನು ಬೀರುತ್ತದೆ.ಲೋಹದಲ್ಲಿ ಉದ್ಭವಿಸುವ ಘಂಟೆಯ ನಾದವು ಅತ್ಯಂತ ಶುಭ ಸೂಚಕ. ಈ ಶಬ್ದವು ನಮ್ಮ ಸೂಪ್ತ ಮನಸ್ಸಿನಲ್ಲಿ ಕೇಂದ್ರೀಕರಿಸುವ ಶಕ್ತಿಯನ್ನು ಜಾಗ್ರತಗೊಳಿಸುತ್ತವೆ. ಜೊತೆಗೆ ನಮ್ಮ ಚಂಚಲ ಹಾಗೂ ಕ್ರಿಯಾಶೀಲ ಮನಸ್ಸನ್ನು ಒಮ್ಮೆ ಕೇಂದ್ರೀಕರಿಸಲು ಸಹಾಯ ಮಾಡುವುದು. ಮುಂಜಾನೆಯ ವೇಳೆ ಘಂಟೆಯ ಶಬ್ದವು ಆಧ್ಯಾತ್ಮಿಕವಾಗಿ ಹೆಚ್ಚಿನ ಶಕ್ತಿಯನ್ನು ನೀಡುವುದು. ಜೊತೆಗೆ ಸಂಜೆಯ ತನಕ ನಮ್ಮಲ್ಲಿ ಉಂಟಾಗುವ ಒತ್ತಡ ಹಾಗೂ ಭಾವನಾತ್ಮಕ ಹಿಡಿತವನ್ನು ಸಾಧಿಸುವ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು ಎಂದು ಹೇಳಲಾಗುವುದು.