ಬೆಂಗಳೂರಿನಲ್ಲೊಂದು ಅಪರೂಪದ ಪ್ರಾಣ ದೇವರ ದೇವಾಲಯವಿದೆ. ಇಲ್ಲಿರುವ ಹನುಮನಿಗೆ ಕಾರ್ಯಸಿದ್ಧಿ ಹನುಮ ಎಂಬ ಹೆಸರು. ಕಾರ್ಯಸಿದ್ಧಿ ಪದವೇ ಹೇಳುವಂತೆ, ಮನದಲ್ಲಿ ಅಂದುಕೊಂಡ ಕಾರ್ಯ ಎಲ್ಲವೂ ಸಿದ್ಧಿಸುವ ಅಥವಾ ಈಡೇರುವ ಪವಿತ್ರ ತಾಣವೇ ಕಾರ್ಯಸಿದ್ಧಿ ಆಂಜನೇಯ ದೇಗುಲ.
ಈ ದೇವಾಲಯದ ವಿಶೇಷ: ಹನುಮನು ಚಿರಂಜೀವಿ ಎಂಬ ಪ್ರತೀತಿ ಇದೆ. ಅವನು ಧ್ಯಾನಾಸಕ್ತನಾಗಿದ್ದಾನೆ ಎಂಬುದೂ ಪ್ರತೀತಿ ಇದೆ. ಆದ್ದರಿಂದ ಹನುಮನ ದೇವಾಲಯದಲ್ಲಿ ಅತಿಯಾಗಿ ಗದ್ದಲ ಮಾಡಬಾರದು. ಅಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತು ಹನುಮನ ಸ್ಮರಣೆ ಮಾಡಬೇಕು.
ಗಂಡ-ಹೆಂಡತಿ ಜಗಳ, ಅನಾರೋಗ್ಯದ ತೊಂದರೆ, ಅಧೈರ್ಯವಂತರು, ಪ್ರೀತಿಗಾಗಿ ಹಾತೊರೆಯುವವರು ಐದು ಹನುಮನ ದರ್ಶನ ಪಡೆದುಕೊಳ್ಳಬೇಕು. ಯಾಕೆಂದರೆ ರಾಮ-ಸೀತೆಯರನ್ನು ಕೂಡಿಸಿದವನು, ಅತೀವ ಧೈರ್ಯ ಮತ್ತು ಬಲ ಹೊಂದಿದವನು ಹನುಮನೊಬ್ಬನೇ ಎಂಬುದು ಎಲ್ಲರಿಗೂ ಗೊತ್ತಿದ್ದೇ. ಹನುಮನ ದೇವಾಲಯದಲ್ಲಿ ಅನುಕೂಲವಿದ್ದರೆ ಅಥವಾ ಸಾಧ್ಯವಿದ್ದರೆ ಹನುಮನ ಪಾದಗಳಿಗೆ ಹಣೆ ಹಚ್ಚುವುದನ್ನು ಮರೆಯಬಾರದು.
ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಗಿರಿನಗರದಲ್ಲಿ ಸ್ಥಾಪಿಸಿರುವ ಅವಧೂತ ದತ್ತಪೀಠದ ಶಾಖೆಯಲ್ಲಿ 2002ರಲ್ಲಿ ಭವ್ಯ ಮಂದಿರ ನಿರ್ಮಿಸಿ, ಕಾರ್ಯಸಿದ್ಧಿ ಆಂಜನೇಯನನ್ನು ಪ್ರತಿಷ್ಠಾಪಿಸಿದ್ದಾರೆ.
ಗಿರಿನಗರದಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಕಷ್ಟ ಬಗೆಹರಿಯಬೇಕೆಂದು ಬೇಡಿಕೆ ಇಟ್ಟು ಹರಕೆ ಕಟ್ಟಿದರೆ ಅದು ಖಂಡಿತ ನೆರವೇರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಭಕ್ತಾದಿಗಳು ಒಂದು ತೆಂಗಿನಕಾಯಿಯನ್ನು ಹರಕೆ ರೂಪದಲ್ಲಿ ದೇವಾಲಯದ ಆವರಣದಲ್ಲಿ ಕಟ್ಟುತ್ತಾರೆ. ಈ ತೆಂಗಿನಕಾಯಿಯಿಂದ ಮಾಡಿದ ಪ್ರಸಾದವನ್ನು ಎಲ್ಲರಿಗೂ ಹಂಚಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.