ಬೇಸಿಗೆ ಕಾಲ ಬಂದಿದೆ ರಜಾದಿನದಲ್ಲಿ ಎಲ್ಲರು ಮನೆಯಲ್ಲಿ ಇರುತ್ತಾರೆ. ಆಗ ನಿಮ್ಮ ಮಕ್ಕಳಿಗೆ ರುಚಿಯಾದ ಏನಾದರು ಅಡುಗೆ ಮಾಡಬೇಕು ಅನ್ನಿಸಿದರೆ ಮಶ್ರುಮ್ ಮಸಾಲಾ ಮಾಡಬಹುದು ನೋಡಿ. ನೀವೇ ಸುಲಭವಾಗಿ ಈ ಮಸಾಲವನ್ನು ತಯಾರಿಯಸಬಹುದು.
ಮಶ್ರುಮ್ ಮಸಾಲವನ್ನು ತಯಾರಿಸಲು ಬೇಕಾಗುವ ಪದಾರ್ಥಗಳು: ದನಿಯಾ- 2 ಚಮಚ, ಕಾಳು ಮೆಣಸು- 1 ಚಮಚ, ಲವಂಗ-3-4 ,ಚಕ್ಕೆ-1-2 ,ಎಲಕ್ಕಿ-1 ಜೀರಿಗೆ- 1 ಚಮಚ ಎಣ್ಣೆ- 3 ಚಮಚ ಮಶ್ರೂಮ್ – 250 ಗ್ರಾಂ ಈರುಳ್ಳಿ ಹೆಚ್ಚಿಕೊಂಡಿದ್ದು 1 ಬಟ್ಟಲು, ಹಸಿಮೆಣಸಿನ ಕಾಯಿ- 2-3 ಶುಂಠಿ,ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು 2 ಚಮಚ, ಅಚ್ಚ ಖಾರದ ಪುಡಿ- 1 ಚಮಚ, ಅರಿಶಿನಪುಡಿ- ಅರ್ಧ ಚಮಚ, ಟೊಮೆಟೋ ರಸ- 1 ಬಟ್ಟಲು, ಉಪ್ಪು- ರುಚಿಗೆ ತಕ್ಕಷ್ಟು, ಬೆಲ್ಲ- ಸ್ವಲ್ಪ, ಗೋಡಂಬಿ ಪೇಸ್ಟ್- 2 ಚಮಚ, ಕಸೂರಿ ಮೇಥಿ- 1 ಚಮಚ,ಫ್ರೆಶ್ ಕ್ರೀಮ್- 1 ಚಮಚ, ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ.
ಮಾಡುವ ವಿಧಾನ: ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ಅದಕ್ಕೆ ದನಿಯಾ, ಕಾಳು ಮೆಣಸು, ಲವಂಗ, ಚಕ್ಕೆ, ಎಲಕ್ಕಿ, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಮಿಕ್ಸಿ ಜಾರ್’ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
ನಂತರ ಇದೇ ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಮಶ್ರೂಮ್ ಗಳನ್ನು ಹಾಕಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಇದೇ ಎಣ್ಣೆಯಲ್ಲಿಯೇ ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ,ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದು ಮಿಕ್ಸಿ ಜಾರ್’ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ಬಾಣಲೆಗೆ ಎಣ್ಣೆ ಹಾಕಿ ರುಬ್ಬಿಕೊಂಡ ಈರುಳ್ಳಿ ಮಿಶ್ರಣ, ಟೊಮೆಟೋ ರಸವನ್ನು ಹಾಕಿ 5 ನಿಮಿಷ ಕುದಿಯಲು ಬಿಡಬೇಕು. ನಂತರ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು, ಬೆಲ್ಲ, ಈ ಹಿಂದೆ ಮಾಡಿಕೊಂಡ ಮಸಾಲೆ ಪುಡಿ, ಬಾದಾಮಿ ಪೇಸ್ಟ್, ಫ್ರೆಶ್ ಕ್ರೀಮ್, ಮಶ್ರೂಮ್ ಗಳನ್ನು ಹಾಕಿ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಮಶ್ರೂಮ್ ಮಸಾಲಾ ತಿನ್ನಲು ಸಿದ್ದವಾಗಿರುತ್ತದೆ.