ಕೆಲವರಿಗೆ ಹಸಿವಾದಾಗ ಇಲ್ಲವೇ ಆಹಾರ ಸೇವಿಸಿ ಎರಡು ಮೂರು ಗಂಟೆಗಳ ನಂತರ ವಾಕರಿಕೆ, ಎದೆಯುರಿ ಆಗಬಹುದು. ಇದರ ನಿವಾರಣೆಗೆ ನೆಲ್ಲಿಕಾಯಿ ಬೆಸ್ಟ್. ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ನಾಲ್ಕು ಗಂಟೆಗಳಿಗೊಮ್ಮೆ ಸೇವಿಸಬೇಕು.
ಹಸಿ ನೆಲ್ಲಿಕಾಯಿ ಸಿಗದೇ ಇದ್ದಾಗ ಒಣ ನೆಲ್ಲಿಕಾಯಿ ಕಷಾಯ ಮಾಡಿ ನಿಯಮಿತವಾಗಿ ಕುಡಿಯಬಹುದು. ವಾಕರಿಕೆ ಬರುತ್ತಿದ್ದರೆ ಆಹಾರ ಸೇವಿಸಬಾರದು. ಎರಡು ಚಮಚ ನಿಂಬೆ ರಸಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಎರಡೆರಡು ಗಂಟೆಗೊಮ್ಮೆ ಸೇವಿಸಬೇಕು.
ಕ್ಯಾರೆಟ್ ರುಬ್ಬಿ ರಸ ತೆಗೆದು, ಅದಕ್ಕೆ ನಾಲ್ಕು ಗ್ಲಾಸ್ ನೀರು ಬೆರೆಸಿ, ಮೂರು ಗಂಟೆಗೊಮ್ಮೆ ಈ ರಸವನ್ನೇ ಕುಡಿಯುತ್ತಿದ್ದರೆ, ಆಮ್ಲಪಿತ್ತದ ಬಾಧೆ ಕಡಿಮೆಯಾಗುವುದು. ಇದನ್ನು ವಾರಕ್ಕೊಮ್ಮೆ ಮಾಡಿದರೂ ಸಾಕು.
ಕ್ಯಾರೆಟ್ ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗಲು ಒಳ್ಳೆಯದು. ದಾಳಿಂಬೆ ಹೂವಿನ ಮೊಗ್ಗುಗಳನ್ನು ಅರೆದು ದಿನಕ್ಕೆ ಎರಡು ಸಾರಿ ಕುಡಿದರೆ ತಲೆ ತಿರುಗುವುದು, ವಾಕರಿಕೆ ಕಡಿಮೆಯಾಗುತ್ತದೆ.
ಆಹಾರದಲ್ಲಿ ಹೆಚ್ಚಾಗಿ ಕ್ಯಾರೆಟ್, ಪಾಲಕ್ ಸೊಪ್ಪು, ಬಾದಾಮಿ, ಗೋಡಂಬಿ, ಪಿಸ್ತಾ, ಕೆಂಪು ಬಣ್ಣದ ದೊಡ್ಡ ಮೆಣಸಿನಕಾಯಿ, ಹಾಲು, ತುಪ್ಪ, ಬೆಣ್ಣೆ ಮತ್ತು ಮೊಸರು ಬಳಸಿದರೆ ಕಣ್ಣಿನ ಆರೋಗ್ಯಕ್ಕೆ ಬೆಸ್ಟ್. ಕಣ್ಣಿನ ದೃಷ್ಟಿ ಹೆಚ್ಚಿಸಲು ಪ್ರತಿದಿನ ಐದರಿಂದ ಆರು ಸೂರ್ಯಕಾಂತಿ ಬೀಜಗಳನ್ನು ಸೇವಿಸಿ.
ಸಮ ಪ್ರಮಾಣದ ಬಾದಾಮಿ ಮತ್ತು ಸೊಂಪು ಕಾಳನ್ನು ಸಕ್ಕರೆ ಜೊತೆ ಪುಡಿ ಮಾಡಿಡಿ. ಪ್ರತಿದಿನ ರಾತ್ರಿ ಮಲಗುವ ಮೊದಲು ಅರ್ಧ ಚಮಚ ಪುಡಿಯನ್ನು ಬಿಸಿ ಹಾಲಿನ ಜೊತೆ ಸೇರಿಸಿ ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.