ಗೋಡಂಬಿ ಒಣ ಹಣ್ಣುಗಳಲ್ಲಿ ಒಂದು ಪ್ರಮುಖ ಹಣ್ಣಾಗಿದೆ. ಇದು ಲೋ ಫ್ಯಾಟ್ ಹೊಂದಿದ್ದು, ಓಲಿಕ್ ಆ್ಯಸಿಡ್, ಫೈಬರ್, ಪ್ರೋಟೀನ್, ಮೆಗ್ನಿಶಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ. ಇನ್ನು ಇದರಲ್ಲಿರುವ ಫೈಟೋಸ್ಟಿರಾಲ್ಸ್ ಕೆಟ್ಟ ಕೊಬ್ಬನ್ನು ದೇಹ ಶೇಖರಿಸದಂತೆ ನೋಡಿಕೊಳ್ಳುತ್ತದೆ. ಗೋಡಂಬಿಯು ವಿಟಮಿನ್ ಎ, ಸಿ ಹಾಗೂ ಇ ಮತ್ತು ಝಿಂಕ್, ಕಾಪರ್‌ಗಳನ್ನು ಹೊಂದಿದ್ದು, ಇವು ಕೂದಲು ಹಾಗೂ ಚರ್ಮದ ಕಾಂತಿ ಹೆಚ್ಚಿಸುತ್ತವೆ.
ಕೊಬ್ಬಿಗೆ ಕರಗಿಸುತ್ತದೆ: ಗೋಡಂಬಿಯಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್ ಹೆಚ್ಚಾಗಿದ್ದು ಇದು ಮೆಟಾಬಾಲಿಸಂ ಹೆಚ್ಚಿಸಿ, ಅಧಿಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಆದರೆ, ನೀವು ಹಸಿಯಾದ, ಉಪ್ಪು ಖಾರ ಹಾಕಿಲ್ಲದ ಗೋಡಂಬಿ ತಿನ್ನಬೇಕು. ಕನಿಷ್ಠ ವಾರಕ್ಕೆ ಎರಡು ದಿನ ಗೋಡಂಬಿ ತಿನ್ನುವುದರಿಂದ ಫಿಟ್ ಹಾಗೂ ಆರೋಗ್ಯವಂತರಾಗಿ ಇರುವಿರಿ.
ಒತ್ತಡ ನಿವಾರಿಸುತ್ತದೆ: ಗೋಡಂಬಿಯಲ್ಲಿರುವ ಎಲ್- ಟ್ರಿಪ್ಟೋನ್ ಎಂಬ ಅಮೈನೋ ಆ್ಯಸಿಡ್ ದೇಹದಲ್ಲಿ ಸೆರಟೋನಿನ್ ಹಾಗೂ ನಿಯಾಸಿನ್ ಹಾರ್ಮೋನ್‌ಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದು ನಿಮ್ಮ ಒತ್ತಡಗೊಂಡ ನರಗಳನ್ನು ಶಾಂತಗೊಳಿಸಿ, ಮನಸ್ಸಿಗೆ ಸಂತೋಷ ನೀಡುತ್ತದೆ.
ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ: ನಮ್ಮ ಕಣ್ಣುಗಳು ಹೆಚ್ಚಿನ ಸಮಯ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಟಿವಿ ಸ್ಕ್ರೀನ್‌ಗಳ ಮೇಲೆ ನೆಟ್ಟಿರುತ್ತದೆ. ಹೀಗೆ ಇಡೀ ದಿನ ಸ್ಕ್ರೀನ್ ನೋಡುತ್ತಿದ್ದರೆ, ದೃಷ್ಟಿಗೆ ಪೆಟ್ಟು. ಆದರೆ, ಗೋಡಂಬಿಯಿಂದ ಈ ಸಮಸ್ಯೆಗೊಂದು ಪರಿಹಾರವಿದೆ. ಇವುಗಳಲ್ಲಿರುವ ಝಿಯಾಕ್ಸಾಂಥಿನ್ ಎಂಬ ಆ್ಯಂಟಿ ಆಕ್ಸಿಡೆಂಟ್ ರೆಟಿನಾ ಹಾಗೂ ರಕ್ತದಲ್ಲಿ ಸುಲಭವಾಗಿ ಸೇರಿಕೊಂಡು ಕಣ್ಣಿನೊಳಗೆ ರಕ್ಷಣಾ ಕವಚ ನಿರ್ಮಿಸಿ, ಕಣ್ಣುಗಳ ಆರೋಗ್ಯ ಕಾಪಾಡುತ್ತದೆ.
ಸುಲಭ ಜೀರ್ಣಕ್ರಿಯೆಗೆ ಸಹಕಾರಿ: ಗೋಡಂಬಿಯಲ್ಲಿರುವ ನಾರಿನಂಶವು ಪಚನಕ್ರಿಯೆಯನ್ನು ಸುಲಭವಾಗಿಸುತ್ತದೆ. ಇದು ನ್ಯೂಕ್ಲಿಕ್ ಆ್ಯಸಿಡ್ ಉತ್ಪಾದಿಸಿ, ಗ್ಯಾಸ್ ಆಗದಂತೆ ಆಹಾರ ಜೀರ್ಣವಾಗಲು ಸಹಕರಿಸುತ್ತದೆ.
ಮೂಳೆಗಳ ಅರೋಗ್ಯ ವೃದ್ಧಿಸುತ್ತದೆ:ಗೋಡಂಬಿಯಲ್ಲಿ ಅಧಿಕವಾಗಿ ದೊರೆಯುವ ಮೆಗ್ನೀಶಿಯಂ, ನಿಮ್ಮ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಇದು ಕ್ಯಾಲ್ಶಿಯಂ ಹೆಚ್ಚಾಗಿ ನರ ಕೋಶಗಳಿಗೆ ಬರುವುದನ್ನು ತಡೆಯುತ್ತದೆ. ಈ ಮೂಲಕ ನರಗಳು ಹಾಗೂ ಸ್ನಾಯುಗಳನ್ನು ಶಾಂತವಾಗಿರಿಸುತ್ತದೆ.