ಇದೊಂದು ಏಕದಳ ಸಸ್ಯ. ಕರ್ನಾಟಕದ ಅನೇಕ ಭಾಗಗಳಲ್ಲಿ ಇದನ್ನು ಸಾಗುವಳಿ ಮಾಡಲಾಗುತ್ತದೆ. ಬಜೆಗಿಡದಲ್ಲಿ ನೆಲದೊಳಗಿರುವ ಸುವಾಸನೆಯಿಂದ ಕೂಡಿದ ಶಿಘಾವೃಂತ ಅಥವಾ ಕಂದು ಇರುತ್ತದೆ. ಈ ಕಂದು ಸಾಮಾನ್ಯವಾಗಿ ೧-೨ ಮೀ. ಉದ್ದವಿರುತ್ತದೆ. ಕಂದಿನ ಮೇಲಿನ ಎಲೆಗಳು ೦.೭೫ – ೧.೫ಮೀ. ಉದ್ದ ಹಾಗೂ ೨ – ೪ಸೆಂ. ಮೀ. ಅಗಲವಿದ್ದು ಐರಿಸ್ ಗಿಡದ ಎಲೆಯನ್ನು ಹೋಲುತ್ತದೆ. ಹೂತನೆಯು ೬-೩೦ಸೆಂ. ಮೀ. ಉದ್ದವಿರುತ್ತದೆ. ಹಣ್ಣು ಹಳದಿ ಹಸಿರು ಬಣ್ಣವಿದ್ದು ೧-೩ ಬೀಜಗಳಿರುತ್ತವೆ. ಈ ಗಿಡದ ವಾಣಿಜ್ಯ ಭಾಗ ಗುಪ್ತಕಾಂಡ. ಇದು ೧.೫-೨.೫ಸೆಂ. ಮೀ. ದಪ್ಪವಾಗಿರುತ್ತದೆ.
ಔಷಧೀಯ ಗುಣಗಳು: ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ ೨-೩ ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.
ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ ೧೦ಗ್ರಾಂನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು ೪೦ ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ.
ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ. ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ. ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.
ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ. ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.
ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ. ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ. ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು.