ನಮಸ್ತೆ ನಮ್ಮ ಆತ್ಮೀಯ ಓದುಗರೇ, ನೆಲ್ಲಿಕಾಯಿಯನ್ನು ಬೆಟ್ಟನೆಲ್ಲಿ, ಆಮ್ಲ ಹಾಗೂ ಆಂಗ್ಲ ಭಾಷೆಯಲ್ಲಿ ಎಮ್ಮಲಿಕ ಒಪಿಶಿಯಸ್ ಎಂದು ಕರೆಯಲಾಗುತ್ತಿದೆ. ಇದನ್ನು ಭಾರತದ ಪವಿತ್ರ ವಾದ ಮರವೆಂದು ಭಾವಿಸಲಾಗಿದೆ. ಈ ನೆಲ್ಲಿಕಾಯಿ ಸ್ವಲ್ಪ ಕಹಿ ಹಾಗೂ ಹುಳಿ ಯಾಗಿರುತ್ತದೆ. ತಿನ್ನಲು ಕಹಿಯೇ ಆದರೂ ಆರೋಗ್ಯಕ್ಕೆ, ಹಲವು ರೋಗಗಳಿಗೆ ಸಿಹಿಯಾಗಿ ಪರಿಣಮಿಸಿದೆ. ಇದು ಬಹಳಷ್ಟು ರೋಗಗಳಿಗೆ ಅತ್ಯುನ್ನತ ಮದ್ದಾಗಿದೆ. ಆದುದರಿಂದ ಆಯುರ್ವೇದದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪಾಸ್ಪರಸ್, ಕಬ್ಬಿಣ, ಕರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಖನಿಜಗಳನ್ನು ಮತ್ತು ಜೀವಸತ್ವಗಳನ್ನು ಹೊಂದಿದೆ. ಕೂದಲು ಸಮೃದ್ಧವಾಗಿ ಬೆಳೆಯಲು ಇದು ಅತ್ಯಂತ ಸಹಾಯಕಾರಿ. ಇದರಲ್ಲಿನ ಸಾಕಷ್ಟು ಉಪಯೋಗಗಳನ್ನು ನೋಡೋಣ ಇಂದಿನ ಅಂಕಣದಲ್ಲಿ.
1. ನೆಲ್ಲಿಕಾಯಿಯಲ್ಲಿ ಸಿ ಜೀವಸತ್ವ ಹೇರಳವಾಗಿರುತ್ತದೆ. ಇದಕ್ಕೆ ರಕ್ತ ಶೋಧಕ ಗುಣವಿದೆ. ಇದನ್ನು ಉಪಯೋಗಿಸುವುದರಿಂದ ಆರೋಗ್ಯ ವರ್ಧಿಸುವುದು. ಮೆದುಳಿಗೆ ಸಂಬಂಧಿಸಿದ ರೋಗಗಳಲ್ಲಿ ನೆಲ್ಲಿಕಾಯಿಯ ಬಳಕೆಯಿಂದ ನಮಗೆ ಬಹಳ ಉಪಯೋಗವಾಗುತ್ತದೆ. 2. ಒಂದು ಊಟದ ಚಮಚ ನೆಲ್ಲಿಕಾಯಿ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಪ್ರತಿದಿನ ಬೆಳಿಗ್ಗೆ ತೆಗೆದುಕೊಳ್ಳುತ್ತಿದ್ದರೆ ಸಿ ಜೀವಸತ್ವದ ಕೊರತೆಯಿಂದ ಬರುವ ಯಾವ ರೋಗವದರೂ ಸಂಪೂರ್ಣವಾಗಿ ಗುಣವಾಗುತ್ತದೆ. 3. ನೆಲ್ಲಿಕಾಯಿಯನ್ನು ಉಪಯೋಗಿಸುವುದರಿಂದ ನೆಗಡಿ, ಉಬ್ಬಸ, ಕ್ಷಯ, ಜ್ಞಾಪಕ ಶಕ್ತಿ ಇಲ್ಲದಿರುವುದು, ಮಧುಮೇಹ, ಕೂದಲು ಉದುರುವುದು, ನೆರೆಯುವುದು, ಅಕಾಲ ಮುಪ್ಪು ಮುಂತಾದ ಶಾರೀರಿಕ ದೋಷಗಳಲ್ಲಿ ಗುಣ ಕಂಡುಬರುತ್ತದೆ. 4. ನೆಲ್ಲಿಕಾಯಿ ರಸದ ಸೇವನೆಯಿಂದ ಅನೇಕ ದೃಷ್ಟಿ ದೋಷಗಳು ನಿವಾರಣೆ ಆಗುತ್ತವೆ. 5. ನೆಲ್ಲಿಕಾಯಿಯನ್ನು ನುಣ್ಣಗೆ ಅರೆದು ನೀರಿನಲ್ಲಿ ಕದಡಿ ಶೋಧಿಸಿ ಅದಕ್ಕೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಮೂತ್ರದೊಂದಿಗೆ ರಕ್ತ ಬೀಳುತ್ತಿದ್ದರೆ ಗುಣ ಕಂಡುಬರುತ್ತದೆ. 6. ಅತಿಯಾಗಿ ಬೆವರುತ್ತಿದ್ದರೆ ನೆಲ್ಲಿಕಾಯಿ ರಸವನ್ನು ಅಂಗೈಗೆ ಹಚ್ಚಿ ತೊಳೆಯದೆ ಇದ್ದರೆ ಬೆವರುವುದು ನಿಲ್ಲುತ್ತದೆ. 7. ನೆಲ್ಲಿಕಾಯಿ ರಸವನ್ನು ಸ್ವಲ್ಪ ಸಕ್ಕರೆಯೊಂದಿಗೆ ತೆಗೆದುಕೊಂಡರೆ ಪಿತ್ತ ಅಧಿಕವಾಗಿ ಹೊಟ್ಟೆನೋವು ಬಂದಿದ್ದರೆ ಗುಣವಾಗುತ್ತದೆ. 8. ಒಂದು ಚಮಚ ನೆಲ್ಲಿಕಾಯಿ ಚೂರ್ಣವನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಕದಡಿ ದಿನಕ್ಕೆ ಒಂದು ಸಾರಿ ಕುಡಿದರೆ ಅಂಗಾಲು ಅಂಗೈ ಉರಿ ಆಸನಾಗ್ರದಲ್ಲಾಗುವ ಉರಿ ನಿಂತುಹೋಗುತ್ತದೆ.
9. ನೆಲ್ಲಿಕಾಯಿಯಿಂದ ಉಪ್ಪಿನಕಾಯಿ, ಮೊರಬ್ಬ, ಚಟ್ಟು ಮುಂತಾದವುಗಳನ್ನು ತಯಾರಿಸಬಹುದು. ನೆಲ್ಲಿಕಾಯಿಯನ್ನು ಬೇಯಿಸದೆ ಬಳಸಬೇಕು. ಬೇಯಿಸಿದರೆ ಇದರಲ್ಲಿರುವ ಜೀವಸತ್ವ ನಾಶವಾಗುತ್ತದೆ. 10. ನೆಲ್ಲಿಯ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು. 11. ನೆಲ್ಲಿಕಾಯಿಯಲ್ಲಿ ಕಿರುನೆಲ್ಲಿ ಎಂಬ ಇನ್ನೊಂದು ಜಾತಿ ನೆಲ್ಲಿಕಾಯಿ ಇದೆ. ಇದು ಬೆಟ್ಟದ ನೆಲ್ಲಿಕಾಯಿ ಅಷ್ಟು ಒಳ್ಳೆಯದಲ್ಲ. ಇದನ್ನು ಉಪ್ಪಿನೊಂದಿಗೆ ತಿನ್ನುವುದರಿಂದ ತಲೆ ಸುತ್ತುವುದು, ವಾಕರಿಕೆ, ಅಜೀರ್ಣ, ರಕ್ತ ಹೀನತೆ, ಸಂಧಿವಾತ ಮುಂತಾದ ರೋಗಗಳಲ್ಲಿ ಗುಣ ಕಂಡುಬರುತ್ತದೆ. ಇದರಿಂದ ಉಪ್ಪಿನಕಾಯಿಯನ್ನು ತಯಾರಿಸಬಹುದು. 12. ಒಣಗಿದ ನೆಲ್ಲಿಕಾಯಿ ಚಟ್ಟನ್ನು ಎರೆಡು ಮೂರು ಗಂಟೆಗಳ ಕಾಲ ಬಿಸಿನೀರಿನಲ್ಲಿ ನೆನೆಹಾಕಿ ನಂತರ ಛಟ್ಟನ್ನು ಚೆನ್ನಾಗಿ ಕಿವುಚಿ ಶೋಧಿಸಿ, ಆ ನೀರಿಗೆ ಸಕ್ಕರೆ ಹಾಕಿ ಕುಡಿಯುವುದರಿಂದ ಆಮಶಂಕೆ ನಿಲ್ಲುವುದು ಮತ್ತು ಬಾಯಿ, ಮೂಗು, ಗುದದ್ವಾರದ ಮೂಲಕ ರಕ್ತ ಬೀಳುತ್ತಿದ್ದರೆ ಬೇಗ ಗುಣವಾಗುತ್ತದೆ. ಶುಭದಿನ.