ಹೌದು ಇವತ್ತಿನ ದಿನಗಲ್ಲಿ ಕೂದಲು ಸಮಸ್ಯೆ ಅನ್ನೋದು ತುಂಬ ಕಾಡುತ್ತಿದೆ. ಕೆಲವರಿಗೆ ದಿನೇ ದಿನೇ ಕೂದಲು ಉದುರಿ ಬೋಳು ತಲೆ ಹಾಗಿರುತ್ತೆ. ಕೂದಲು ಉದುರಲು ನಿರ್ದಿಷ್ಟ ಕಾರಣಗಳಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುತ್ತದೆ. ಬಿಸಿಲು, ಮಾಲಿನ್ಯ, ರಾಸಾಯನಿಕ ಪದಾರ್ಥಗಳ ಕಲಬೆರೆಕೆ ಇತ್ಯಾದಿಗಳು ಕಾರಣವಾಗಬಹುದು. ಆದರೆ, ನಾವು ತಿನ್ನುವ ಆಹಾರದಲ್ಲೇ ಬಹುತೇಕ ಕೂದಲ ಆರೋಗ್ಯ ಅಥವಾ ಅನಾರೋಗ್ಯ ಅಡಗಿರುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಕೂದಲ ಆರೋಗ್ಯಕ್ಕೆ ನಾವು ಯಾವ್ಯಾವ ಆಹಾರ ಸೇವಿಸಬಹುದು ಎಂಬ ಪಟ್ಟಿ ಇಲ್ಲಿದೆ.
ಪಾಲಾಕ್ ಸೊಪ್ಪು: ಕೂದಲಿನ ಬೆಳವಣಿಗೆಗೆ ಈ ಸೊಪ್ಪು ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿವೆ. ಕೂದಲು ಉದುರಲು ಇರುವ ಪ್ರಮುಖ ಕಾರಣಗಳಲ್ಲಿ ಐರನ್ ಅಂಶದ ಕೊರತೆ ಕೂಡ ಒಂದು. ಪಾಲಾಕ್ ಸೊಪ್ಪಿನಲ್ಲಿ ಕಬ್ಬಿಣದ ಪೋಷಕಾಂಶಗಳು ಸಾಕಷ್ಟಿವೆ. ಜೊತೆಗೆ ಸೆಬಮ್, ಒಮೇಗಾ-3 ಆ್ಯಸಿಡ್, ಮ್ಯಾಗ್ನೀಷಿಯಮ್, ಪೊಟ್ಯಾಷಿಯಮ್, ಕ್ಯಾಲ್ಷಿಯಮ್ ಅಂಶಗಳೂ ಪಾಲಾಕ್ ಸೊಪ್ಪಿನಲ್ಲಿವೆ. ಸೆಬಮ್ ಅಂಶವು ನಮ್ಮ ಕೂದಲಿಗೆ ಒಂದು ರೀತಿಯಲ್ಲಿ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.
ಹಾಲು ಮೊಸರು ಮೊಟ್ಟೆ: ಹಾಲು, ಮೊಸರು, ಯೋಗರ್ಟ್, ಮೊಟ್ಟೆಗಳಲ್ಲಿ ಪ್ರೊಟೀನ್, ವಿಟಮಿನ್ ಬಿ12, ಐರನ್, ಜಿಂಕ್ ಮತ್ತು ಒಮೇಗಾ 6 ಫ್ಯಾಟಿ ಆ್ಯಸಿಡ್’ಗಳಂತಹ ಅಗತ್ಯ ಪೋಷಕಾಂಶಗಳು ಇರುತ್ತವೆ. ಕೂದಲು ಉದುರುವುದನ್ನು ತಡೆಯಬಲ್ಲ ಬಯೋಟಿನ್ ಎಂಬ ಪೋಷಕಾಂಶವು ಈ ಆಹಾರಗಳಲ್ಲಿರುತ್ತವೆ.
ಸೀಬೆ ಹಣ್ಣು: ಸೀಬೆ ಹಣ್ಣುಗಳಲ್ಲಿ ವಿಟಮಿನ್ ಬಿ ಮತ್ತು ಸಿ ಅಂಶಗಳು ಸಾಕಷ್ಟು ಇರುತ್ತವೆ. ಕೂದಲು ಬೆಳೆಯಲು ಈ ಪೋಷಕಾಂಶಗಳು ಬಹಳ ಸಹಕಾರಿ.
ಬೇಳೆಕಾಳುಗಳು: ಹೆಸರು ಕಾಳು, ಹುರುಳಿಕಾಳು ಮೊದಲಾದವುಗಳಲ್ಲಿ ಕೂದಲ ಆರೋಗ್ಯಕ್ಕೆ ಅಗತ್ಯವಾದ ಪ್ರೊಟೀನ್, ಜಿಂಕ್ ಮತ್ತು ಬಯೋಟಿನ್’ಗಳಿರುತ್ತವೆ. ತಲೆಯ ಚರ್ಮಕ್ಕೆ ಆಮ್ಲಜನಕ ಪೂರೈಸುವ ಕೆಂಪು ರಕ್ತ ಕಣಗಳ ಆರೋಗ್ಯಕ್ಕೆ ಫೋಲಿಕ್ ಆ್ಯಸಿಡ್ ಬಹಳ ಉಪಯುಕ್ತ. ಬೇಳೆಕಾಳುಗಳಲ್ಲಿ ಈ ಫೋಲಿಕ್ ಆ್ಯಸಿಡ್ ಸಾಕಷ್ಟಿರುತ್ತದೆ.
ಬಾರ್ಲೀ ಅಕ್ಕಿ: ಬಾರ್ಲೀ ಅಕ್ಕಿಯಲ್ಲಿ ವಿಟಮಿನ್ ಇ, ಐರನ್ ಮತ್ತು ಕಾಪರ್ ಅಂಶಗಳು ಬಹಳಷ್ಟಿರುತ್ತವೆ. ಇವು ಕೆಂಪು ರಕ್ತ ಕಣಗಳನ್ನು ಗಟ್ಟಿಗೊಳಿಸಿ ಆ ಮೂಲಕ ಕೂದಲ ಆರೋಗ್ಯ ಕಾಪಾಡುತ್ತವೆ.
ಕೋಳಿ ಮಾಂಸ: ಮಾಂಸಾಹಾರ ಪ್ರಿಯರು ಚಿಕನ್ ಸೇವಿಸಬಹುದು. ಕೋಳಿಮಾಂಸದಲ್ಲಿ ಪ್ರೊಟೀನ್ ಅಂಶ ಸಾಕಷ್ಟು ಇರುತ್ತದೆ.
ಕ್ಯಾರಟ್ ಗೆಣಸು: ಕ್ಯಾರೆಟ್ ಮತ್ತು ಗೆಣಸಿನಲ್ಲಿ ವಿಟಮಿನ್ ಎ ಅಂಶ ಹೇರಳವಾಗಿರುತ್ತದೆ. ಇವು ಕೂದಲನ್ನು ಗಟ್ಟಿಗೊಳಿಸಿ ಫ್ರೆಷ್ ಆಗಿರುವಂತೆ ನೋಡಿಕೊಳ್ಳುತ್ತದೆ.