ನಮಸ್ತೆ ಪ್ರಿಯ ಓದುಗರೇ, ಮಹಾಲಕ್ಷ್ಮಿಯು ಕೊಲ್ಲಾಪುರದಲ್ಲಿ ನೆಲೆನಿಂತು ದೇಶದ ಜನರನ್ನು ಉದ್ಧರಿಸುತ್ತಿರುವ ಹಾಗೆಯೇ, ಕೊಲ್ಲಾಪುರ ದೇವಿಯ ಪ್ರತಿರೂಪ ಆದ ಈ ದೇವಿಯು ಉತ್ತರ ಕರ್ನಾಟಕ ಭಾಗದಲ್ಲಿ ನೆಲೆ ನಿಂತು ಲಕ್ಷಾಂತರ ಜನರ ಆರಾಧ್ಯ ದೈವ ಆಗಿದ್ದಾಳೆ. ದುಡ್ಡಿನ ದೇವತೆ ಎಂದು ಖ್ಯಾತವಾದ ಈ ದೇವಿಯ ಮಹಿಮೆ ಅಪಾರವಾದದ್ದು. ಬನ್ನಿ ಇವತ್ತಿನ ಲೇಖನದಲ್ಲಿ ಗಾಣಗಟ್ಟೆ ಯ ಮಾಯಮ್ಮ ದೇವಿಯ ದರ್ಶನ ಮಾಡಿ ಪುನೀತರಾಗೋಣ. ನೂರಾರು ವರ್ಷಗಳಷ್ಟು ಪುರಾತನವಾದ ಈ ದೇವಾಲಯದಲ್ಲಿ ನೆಲೆ ನಿಂತಿದ್ದು ಈಕೆಯನ್ನು ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯು ಪ್ರತಿರೂಪ ಎಂದು ಹೇಳಲಾಗುತ್ತದೆ. ಎತ್ತರವಾದ ಗೋಪುರವನ್ನು ಹೊಂದಿದ ಈ ಆಲಯದ ಗರ್ಭ ಗುಡಿಯಲ್ಲಿ ದೇವಿಯು ಅರಿಶಿನ ಬಣ್ಣದಿಂದ ಕಂಗೊಳಿಸುತ್ತಿದ್ದಾಳೆ. ಕೊಲ್ಲಾಪುರದಿಂದ ಗಾಣಗಟ್ಟೆಗೆ ಬರುತ್ತಿದ್ದ ಎಮ್ಮೆ ವ್ಯಾಪಾರಿಗಳ ಜೊತೆ ದೇವಿಯು ಇಲ್ಲಿಗೆ ಬಂದು ನೆಲೆಸಿದಳು ಎಂದು ಪ್ರತೀತಿ ಇದೆ. ಸಾಮಾನ್ಯವಾಗಿ ಎಲ್ಲ ದೇಗುಲಗಳಲ್ಲಿ ಹರಕೆ ರೂಪದಲ್ಲಿ ಅಕ್ಕಿ, ಕಾಯಿ, ಅಭಿಷೇಕ ಮಾಡುವುದನ್ನು ನೋಡಿರ್ತೀರಿ, ಆದ್ರೆ ಈ ತಾಯಿಗೆ ಹಣ ಎಂದರೆ ಬಲು ಪ್ರಿಯವಾಗಿದ್ದು, ಮಕ್ಕಳು ಆಗದವರು, ಉದ್ಯೋಗ ಸಮಸ್ಯೆ ಇರುವವರು, ಅನಾರೋಗ್ಯ ಸಮಸ್ಯೆ ಇರುವವರು ಹೀಗೆ ನಾನಾ ಸಮಸ್ಯೆ ಇರುವವರು ದೇವಿಯ ಬಳಿ ಬಂದು ತಮ್ಮ ಶಕ್ತಿ ಅನುಸಾರ ನೋಟಿನ ಹಾರವನ್ನು ಹಾಕಿ ಕೊಡುತ್ತೇವೆ ಎಂದು ಹರಕೆ ಹೊತ್ತರೆ ಆ ದೇವಿ ಎಲ್ಲಾ ಸಮಸ್ಯೆಗಳನ್ನೂ ದೂರ ಮಾಡುತ್ತಾಳೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾದಿಗಳ ಮನಸಲ್ಲಿ ಮನೆ ಮಾಡಿದೆ.
ವಿಶೇಷವಾಗಿ ಈ ದೇವಿಯ ಬಳಿ ಸಂತಾನ ಪ್ರಾಪ್ತಿಗಾಗಿ ಬೇಡಿಕೊಂಡರೆ ಆ ದೇವಿ ಹರಕೆ ಹೊತ್ತ ಒಂದು ವರ್ಷದಲ್ಲಿ ಉತ್ತಮವಾದ ಮಗುವನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ. ಮಗುವನ್ನು ಪಡೆದವರು ಮಗುವಿನ ತೂಕದಷ್ಟು ವಸ್ತುವನ್ನು ನೀಡಬೇಕು. ಪ್ರತಿ ಹುಣ್ಣಿಮೆ ಅಮಾವಾಸ್ಯೆ ಅಂದು ಮೈ ಮೇಲೆ ದೆವ್ವ ಪಿಶಾಚಿ ಬಂದವರು ಇಲ್ಲಿಗೆ ಬಂದು ದೇವಿಯ ಮುಂದೆ ಮಂತ್ರಿಸಿದ ನೀರನ್ನು ಪ್ರೋಕ್ಷಿಸಿಕೊಂಡರೆ ಅತಿಮಾನುಷ ಶಕ್ತಿಗಳ ಕಾಟ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಈ ದೇವಿಯನ್ನು ಯಾವಾಗಲೂ ದುಡ್ಡಿನಿಂದಲೆ ಅಲಂಕಾರ ಮಾಡಲಾಗುತ್ತದೆ. ಹತ್ತು ರೂಪಾಯಿ ನೋಟಿನಿಂದ ಹಿಡಿದು 2000 ರೋ ನೋಟಿನವರೆಗೊ ಈ ತಾಯಿಗೆ ಹಣದ ಹಾರವನ್ನು ಹಾಕಲಾಗುತ್ತದೆ. ಸರ್ವಲಂಕ್ರುತ ಆದ ದೇವಿಯನ್ನು ನೋಡೋದು ಕಣ್ಣಿಗೆ ಹಬ್ಬ. ಈ ಕ್ಷೇತ್ರಕ್ಕೆ ಬಂದವರು ತಮ್ಮ ಕೆಲಸ ಆಗುತ್ತೋ ಇಲ್ಲವೋ ಎಂದು ತಿಳಿದುಕೊಳ್ಳಲು ಚೀಟಿ ಪ್ರಸಾದವನ್ನು ನೋಡಬಹುದು. ಪ್ರತಿ ದಿನ 6.30 ಕ್ಕೆ ದೇವಿಯನ್ನು ಗದ್ದುಗೆ ಇಂದ ಎಬ್ಬಿಸಿ ಊರು ಸುತ್ತಿಸಿ ಪುನಃ ರಾತ್ರಿ ಎಂಟು ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಕರೆ ತರಲಾಗುತ್ತದೆ. ಈ ಸಮಯದಲ್ಲಿ ಭಕ್ತರು ತಮ್ಮ ಕೋರಿಕೆಗಳು ನೆರವೇರುತ್ತೋ ಇಲ್ಲವೋ ಎಂಬುದನ್ನು ಪ್ರತ್ಯಕ್ಷವಾಗಿ ಎರಡು ಚೀಟಿಗಳಲ್ಲಿ ಬರೆದು ದೇವಸ್ಥಾನದ ಯಾವುದಾದ್ರೂ ಒಂದು ಮೂಲೆಯಲ್ಲಿ ಬಚ್ಚಿ ಇಡಬೇಕು. ದೇವಿಯ ಪಲ್ಲಕ್ಕಿ ಈ ಚೀಟಿಯ ಸಮೀಪ ಬಂದ್ರೆ ಕೋರಿಕೆಗಳು ಸಿದ್ಧಿಸುತ್ತದೆ ಎಂದು ದೇವಿಯ ಪಲ್ಲಕ್ಕಿ ಚೀಟಿಯನ್ನು ಮುಟ್ಟದೇ ಹೋದ್ರೆ ಅಂದುಕೊಂಡ ಕೆಲಸ ಆಗೋದಿಲ್ಲ ಎಂದು ಹೇಳಲಾಗುತ್ತದೆ.
ನವರಾತ್ರಿ ಯನ್ನ ವಿಜೃಂಭಣೆ ಇಂದ ಆಚರಿಸುವ ಈ ದೇವಾಲಯದಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ದೇವಿಯ ರಥೋತ್ಸವ ನಡೆಯುತ್ತದೆ. ರಥೋತ್ಸವ ಸಮಯದಲ್ಲಿ ಬಲಿ ಸೇವೆ ನಡೆಯುತ್ತದೆ. ಈ ಸಮಯದಲ್ಲಿ ಭಕ್ತರು ದೇವಸ್ಥಾನದ ಬಯಲಿನಲ್ಲಿ ಅಡುಗೆ ಮಾಡಿ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ. ಈ ಕ್ಷೇತ್ರಕ್ಕೆ ಬಂದು ಒಂದು ರಾತ್ರಿ ಇಲ್ಲಿಯೇ ಇದ್ದು ದೇವಿಯ ದರ್ಶನ ಮಾಡಿದರೆ ಸಕಲವೂ ಒಳ್ಳೆಯದಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಮಂಗಳವಾರ ಶುಕ್ರವಾರ ಹುಣ್ಣಿಮೆ ಅಮಾವಾಸ್ಯೆ ಗಳು ಈ ದೇವಿಗೆ ಪ್ರಿಯವಾದ ದಿನಗಳು ಆಗಿದ್ದು, ಈ ದಿನಗಳಲ್ಲಿ ಮಾಯಮ್ಮ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಪ್ರತಿ ಅಮಾವಾಸ್ಯೆಯಂದು ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ದೇವಿಯ ದರ್ಶನ ಮಾಡಬಹುದು. ದೇವಸ್ಥಾನಕ್ಕೆ ಬಂದವರು ತಮ್ಮ ಇಷ್ಟಾನುಸಾರ ದೇವಿಗೆ ಕಾಣಿಕೆಯನ್ನು ಸಲ್ಲಿಸಬಹುದು. ಅತ್ಯಂತ ಶಕ್ತಿಶಾಲಿ ಆದ ಮಾಯಮ್ಮ ದೇವಿ ದೇವಾಲಯವು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಾಣಗ ಟ್ಟೆ ಎಂಬ ಪ್ರದೇಶದಲ್ಲಿದೆ. ಈ ದೇವಾಲಯವು ಬೆಂಗಳೂರಿನಿಂದ 269 ಕಿಮೀ, ಹುಬ್ಬಳ್ಳಿಯಿಂದ 189 ಕಿಮೀ, ಶಿವಮೊಗ್ಗದಿಂದ 174 ಕಿಮೀ, ಹಾವೇರಿಯಿಂದ 126 ಕಿಮೀ, ಬಳ್ಳಾರಿ ಇಂದ 94 ಕಿಮೀ, ಕೂಡ್ಲಿಗಿ ಇಂದ 38 ಕಿಮೀ ದೂರದಲ್ಲಿದೆ. ಬಳ್ಳಾರಿ ಹಾಗೂ ಕೂಡ್ಲಿಗಿ ಇಂದ ದೇಗುಲಕ್ಕೆ ಸಾಕಷ್ಟು ಬಸ್ ಸೌಲಭ್ಯ ಇದ್ದು ಬಳ್ಳಾರಿಗೆ ರಾಜ್ಯದ ಎಲ್ಲಾ ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಇದೆ. ಸಾಧ್ಯವಾದರೆ ದುಡ್ಡಿನ ದೇವತೆ ಆದ ಮಾಯಮ್ಮ ದೇವಿಯನ್ನು ನೀವು ಒಮ್ಮೆ ದರ್ಶನ ಮಾಡಿ ಅದ ದೇವಿಯ ಕೃಪೆಗೆ ಪಾತ್ರರಾಗಿ. ಶುಭದಿನ.