ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದಿಗೂ ಜನರಿಗೆ ಹೆಚ್ಚು ಪರಿಚಿತವಾಗದ ತಾಣಗಳು ಬಹಳಷ್ಟಿವೆ. ಕೆಲವೊಂದಿಷ್ಟು ದೇಗುಲಗಳು ಶಿಲ್ಪ ಕಲಾಕೃತಿಗಳ ದೃಶ್ಯಗಳನ್ನು ಒಳಗೊಂಡಿದ್ದರೆ, ಮತ್ತೊಂದಿಷ್ಟು ದೇಗುಲಗಳು ಭಕ್ತಿಯ ತಾಣಗಳಾಗಿವೆ. ಬನ್ನಿ ಇವತ್ತಿನ ಲೇಖನದಲ್ಲಿ ೨೫೦೦ ವರ್ಷಗಳಷ್ಟು ಪುರಾತನವಾದ ದೆಗುಲವೊಂದರ ಬಗ್ಗೆ ಮಾಹಿತಿ ತಿಳಿದುಕೊಂಡು ಕೃತಾರ್ಥರಾಗೋಣ. ಕಬಿನಿ ಜಲಾಶಯದ ಹಿನ್ನೀರಿನ ಭಾಗದಲ್ಲಿ ಸುಮಾರು ೨೫೦೦ ವರ್ಷಗಳಷ್ಟು ಪುರಾತನವಾದ ಇತಿಹಾಸವನ್ನು ಹೊಂದಿರುವ ರವಿ ರಾಮೇಶ್ವರ ದೆಗುವವಿದ್ದು, ಪೋನ್ನಟದ ಅರಸನಾದ ರಾಮವರ್ಮನ ಕಾಲದಲ್ಲಿ ಈ ಆಲಯವನ್ನು ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಕಬಿನಿ ಜಲಾಶಯದ ನಿರ್ಮಾಣದಿಂದಗಿ ಸುತ್ತಲಿನ ೩೩ ಹಳ್ಳಿಗಳು ಜಲಾವೃತ ವಾದರೂ ಈ ದೇಗುಲ ಮಾತ್ರ ಮುಳುಗಡೆ ಆಗದೆ ಹಾಗೆಯೇ ಉಳಿದುಕೊಂಡಿತು ಎನ್ನುವುದು ಈ ಕ್ಷೇತ್ರದ ಪ್ರಖ್ಯಾತಿಗೆ ಕಾರಣ ಆಗಿದೆ. ಸುತ್ತಲೂ ನೀರಿನಿಂದ ಆವೃತವಾದ ಈ ಪ್ರದೇಶವು ಹಲವು ವರ್ಷಗಳ ಹಿಂದೆ ಕಿತ್ತೂರು ಬಳಗದವರು ಜೀರ್ಣೋದ್ಧಾರ ಮಾಡಿದ್ದಾರೆ. ಪುರಾಣದ ಕಾಲದಲ್ಲಿ ಕಪಿಲ ಮಹರ್ಷಿಗಳು ಈ ಸ್ಥಳದಲ್ಲಿ ವಾಸ ಮಾಡಿ ತಪಸ್ಸು ಆಚರಿಸಿ, ಇಲ್ಲಿ ಶಿವ ಲಿಂಗವನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ದೇಗುಲದ ಗರ್ಭ ಗುಡಿಯಲ್ಲಿ ಇರುವ ಶಿವಲಿಂಗವು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿತವಾದ ಶಿಲೆ ಆಗಿದ್ದು, ಚತುಷ್ಪಣಿ ಪೀಠದ ಮೇಲೆ ಶಿವನ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.
ತ್ರೇತಾಯಗದಲ್ಲಿ ಶ್ರೀ ರಾಮಚಂದ್ರನು ಕೂಡ ಈ ದೇವನನ್ನು ಪೂಜಿಸಿ ದಕ್ಷಿಣಕ್ಕೆ ಪ್ರಯಾಣ ಮಾಡಿದನು ಎಂದು ಇಲ್ಲಿನ ಸ್ಥಳ ಮಹಾತ್ಮೆಯಲ್ಲಿ ತಿಳಿಸಲಾಗಿದೆ. ಸೂರ್ಯ ವಂಶದವನಾದ ರಾಮಚಂದ್ರನು ಈ ದೇವನನ್ನು ಪೂಜಿಸಿದ ಕಾರಣ ಈ ಕ್ಷೇತ್ರಕ್ಕೆ ರವಿ ರಾಮೇಶ್ವರ ಎಂದು ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರದಲ್ಲಿ ಇರುವ ನಂದಿಯ ಕಿವಿಯಲ್ಲಿ ಮನಸ್ಸಿನಲ್ಲಿ ಅಂದುಕೊಂಡ ಕೋರಿಕೆಗಳನ್ನು ಹೇಳಿಕೊಂಡರೆ ಮನದ ಅಭೀಷ್ಟೆಗಳೆಲ್ಲ ಸಿದ್ಧಿ ಆಗತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಂತಾನ ಸಮಸ್ಯೆ ಇಂದ ಬಳಲುವವರು ಇಲ್ಲಿ ನೀಡುವ ಬಿಲ್ವಪತ್ರೆ ಪ್ರಸಾದವನ್ನು ಸ್ವೀಕರಿಸಿದರೆ ಅವರಿಗೆ ಉತ್ತಮ ಸಂತಾನವನ್ನು ರವಿ ರಾಮೇಶ್ವರ ಸ್ವಾಮಿ ನೀಡ್ತಾರೆ ಎಂದು ಹೇಳಲಾಗುತ್ತದೆ. ಈ ದೇವನ ಬಳಿ ಏನೇ ಸಮಸ್ಯೆಗಳನ್ನು ಹೊತ್ತು ತಂದರೂ ಆ ಸಮಸ್ಯೆಗಳನ್ನು ಕರುಣಾ ಪೂರಿತನಾದ ರವಿ ರಾಮೇಶ್ವರ ಸ್ವಾಮಿಯು ದೂರ ಮಾಡ್ತಾನೆ ಎನ್ನುವುದು ಈ ದೇವನನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕಂಡ ಭಕ್ತ ಜನರ ಮನದ ಮಾತಾಗಿದೆ. ಇನ್ನೂ ಕಪಿಲ ನದಿಗೆ ಜಲಾಶಯವನ್ನು ಕಟ್ಟಬೇಕು ಎಂದು ತೀರ್ಮಾನಿಸಿದಾಗ ದೇಗುಲದಲ್ಲಿ ಇದ್ದ ಹಲವಾರು ವಿಗ್ರಹಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು, ಆದರೆ ದೇವರ ಮೂಲ ವಿಗ್ರಹ ಹಾಗೂ ನಂದಿಯ ವಿಗ್ರಹ ವನ್ನಾ ಬೃಹದಾಕಾರದ ಸರ್ಪವೊಂದು ಕಾವಲು ಕಾಯ್ತಾ ಇದ್ದ ಕಾರಣ ಯಾರಿಂದಲೂ ಕೂಡ ದೇವಸ್ಥಾನದ ಮೂಲ ವಿಗ್ರಹವನ್ನು ಸ್ಥಳಾಂತರ ಮಾಡಲು ಸಾಧ್ಯ ಆಗಲಿಲ್ಲ ಅನ್ನುವುದು ಈ ದೇಗುಲದ ಕುರಿತಾದ ರೋಚಕದ ಸಂಗತಿಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ರವಿ ರಾಮೇಶ್ವರನ ಜೊತೆಗೆ ನೂತನ ವಾಗಿ ಬಲಮುರಿ ಗಣಪತಿ, ಸೂರ್ಯ ನಾರಾಯಣ, ಕಾರ್ತಿಕೇಯ, ರಂಗನಾಥ ಸ್ವಾಮಿ, ಆಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ, ದಕ್ಷಿಣ ಮೂರ್ತಿ, ಚಂದಿಕೇಶ್ವರ, ನಾಗದೇವತೆ ಅಮ್ಮನವರು ಹಾಗೂ ನವಗ್ರಹಗಳ ವಿಗ್ರಹಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ನಿತ್ಯ ಪೂಜೆಗೊಳ್ಳುತ್ತಿರುವ ರವಿ ರಾಮೇಶ್ವರ ದೇವರಿಗೆ ಪ್ರತಿ ತಿಂಗಳಲ್ಲಿ ಬರುವ ಹುಣ್ಣಿಮೆಯಂದು ರುದ್ರಾಭಿಷೇಕವನ್ನಾ ನೆರವೇರಿಸಲಾಗುತ್ತದೆ.
ಕಾರ್ತಿಕ ಮಾಸದಲ್ಲಿ ದೀಪೋತ್ಸವ ಹಾಗೂ ಶಿವರಾತ್ರಿಯಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶಿವರಾತ್ರಿಯ ಸಮಯದಂದು ಮೂರು ದಿನಗಳ ಕಾಲ ಜಾಗರಣಾ ಜಾತ್ರಾ ಮಹೋತ್ಸವ ಹಾಗೂ ತೆಪ್ಪೋತ್ಸವಗಳನ್ನಾ ನಡೆಸಲಾಗುತ್ತದೆ. ಅನುದಿನವೂ ಅಭಿಷೇಕ ಸಹಿತ ಪೂಜೆಗೊಳ್ಳುತ್ತಿರುವ ಇಲ್ಲಿನ ರವಿ ರಾಮೇಶ್ವರ ನನ್ನು ನೋಡ್ತಾ ಇದ್ರೆ ಬದುಕಿನ ಜಂಜಾಟಗಳು ಎಲ್ಲವೂ ಕ್ಷಣ ಕಾಲ ದೂರವಾಗಿ ಮನಸ್ಸಿನಲ್ಲಿ ಸ್ವಾಮಿಯ ಮಂದಸ್ಮಿತವಾದ ಆಕೃತಿ ಮಾತ್ರ ಸ್ಥಿರವಾಗಿ ಉಳಿಯುತ್ತೆ ಎನ್ನುವುದು ಈ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯನ್ನು ಕಣ್ಣು ತುಂಬಿಕೊಂಡ ಭಕ್ತ ಜನರ ಮನದ ಮಾತಾಗಿದೆ. ಇಲ್ಲಿ ನೆಲೆಸಿರುವ ರವಿ ರಾಮೇಶ್ವರ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಸಾಯಂಕಾರ ೫.೩೦ ರಿಂದ ರಾತ್ರಿ ೮ ಗಂಟೆ ವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಗ್ರಹದೋಷ ಪೂಜೆ, ಸತ್ಯನಾರಾಯಣ ಪೂಜೆ, ಬಿಲ್ವಾರ್ಚನೆ, ಸೂರ್ಯ ನಮಸ್ಕಾರ ಪೂಜೆ, ಮಂಟಪೋತ್ಸವ, ಪುಷ್ಪಾಲಂಕಾರ, ಶಾಶ್ವತ ಸೇವಾ ನಿಧಿ ಸೇವೆಗಳನ್ನು ಮಾಡಿಸಬಹುದಾಗಿದ್ದು , ಇಲ್ಲಿಗೆ ಬರುವ ಪ್ರತಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಇರುತ್ತದೆ. ದೇಗುಲದ ಬಗ್ಗೆ ಹೆಚ್ಚಿನ ಮಾಹಿತಿಗಳು ಬೇಕಾದಲ್ಲಿ 9945616044 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ರವಿ ರಾಮೇಶ್ವರ ಸ್ವಾಮಿ ನೆಲೆ ನಿಂತಿರುವ ಈ ಪುಣ್ಯ ಕ್ಷೇತ್ರವೂ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕಿತ್ತೂರು ಎಂಬ ಗ್ರಾಮದಲ್ಲಿದೆ. ಈ ದೇಗುಲವು ಮೈಸೂರಿನಿಂದ 66 ಕಿಮೀ, ಹೆಚ್ ಡೀ ಕೋಟೆಯಿಂದ 24 ಕಿಮೀ, ಸರಗೂರಿನಿಂದ 15 ಕಿಮೀ ದೂರದಲ್ಲಿದೆ. ಬೆಳಿಗ್ಗೆ 7.30 ಹಾಗೂ ಸಾಯಂಕಾಲ 3 ಗಂಟೆಗೆ ಮೈಸೂರಿನಿಂದ ಈ ಕ್ಷೇತ್ರಕ್ಕೆ ತಲುಪಲು ಸರ್ಕಾರಿ ಬಸ್ ಸೌಲಭ್ಯ ಇದ್ದು, ಕಪಿಲ ಲೇಕ್ ದೋಣಿ ಮುಖಾಂತರವಾಗಿ ಈ ದೇಗುಲಕ್ಕೆ ತಲುಪ ಬಹುದಾಗಿದೆ. ಸಾಧ್ಯವಾದರೆ ನೀವು ಒಮ್ಮೆ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ. ಶುಭದಿನ.