ಈ ಕ್ಷೇತ್ರವು ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾಗಿದೆ. ಸೂರ್ಯ ಶ್ರೀ ಸದಾಶಿವ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಕೃತಿ ರಮಣೀಯವಾದ ಸಣ್ಣ ಹಳ್ಳಿ ಸುರ್ಯ ಎಂಬಲ್ಲಿ ಶತಮಾನಗಳಿಂದ ನೆಲೆ ನಿಂತಿದೆ. ಈ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳದ ಸಮೀಪವಿರುವ ಉಜಿರೆಯಿಂದ 4ಕಿ.ಮೀ ಹಾಗೂ ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಪೂರ್ವಕ್ಕೆ8 ಕಿ.ಮೀ ದೂರದಲ್ಲಿದೆ.
ಈ ಕ್ಷೇತ್ರದ ಬಗ್ಗೆ ಒಂದಿಷ್ಟು ಪರಿಚಯ: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸೂರ್ಯ ಶ್ರೀ ಸದಾಶಿವ ದೇವಸ್ಥಾನವು ಸೂರ್ಯ ಎಂಬ ಹಳ್ಳಿಯಲ್ಲಿರುವ ಕಾರಣ ಇದಕ್ಕೆ ‘ಸೂರ್ಯ ದೇವಸ್ಥಾನ’ ವೆಂಬ ಹೆಸರು ಬಂದಿದೆ.
ಈ ಕ್ಷೇತ್ರದಲ್ಲಿ ಮಣ್ಣಿನ ಹರಕೆಯ ಸಂಪ್ರದಾಯ: ಭಕ್ತ ಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವ ರುದ್ರ ದೇವರಿಗೆ ಅರ್ಪಿಸುವುದು ಸೂರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ.ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆ ಗೊಂಬೆಗಳ ರಾಶಿಯೇ ಸಾಕ್ಷಿ.
ಹರಕೆ ಒಪ್ಪಿಸುವ ಪದ್ಧತಿ: ಭಕ್ತರು ತಮ್ಮ ಬಯಕೆ/ಸಂಕಲ್ಪಗಳನ್ನು ದೇವರಲ್ಲಿ ನಿವೇದಿಸಿಕೊಂಡು ಪ್ರಾರ್ಥಿಸಿ ಅದು ಈಡೇರಿದ ಮೇಲಷ್ಟೇ ಹರಕೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಬಯಸಿದರೆ ಅದು ನಿರ್ವಿಘ್ನವಾಗಿ ನೆರವೇರಿಸಿದರೆ ಸೂರ್ಯ ಸದಾಶಿವ ರುದ್ರ ದೇವರಿಗೆ ಹರಕೆ ಒಪ್ಪಿಸುತ್ತೇನೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಮನೆ ನಿರ್ಮಾಣ ಆದ ನಂತರ ಮನೆಯ ಮಣ್ಣಿನ ಆಕೃತಿಯನ್ನು ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಹಾಗೂ ಐದು ರುಪಾಯಿ ಕಾಣಿಕೆಯ ಜೊತೆಗೆ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಒಪ್ಪಿಸಬಹುದು. ಹೀಗೆ ಬೇರೆ ಬೇರೆ ರೀತಿಯಲ್ಲಿ ನಿಮ್ಮ ಹರಕೆಗಳನ್ನು ಇಲ್ಲಿ ಒಪ್ಪಿಸಬಹುದು.