ನಿಫಾ ವೈರಸ್ ಪುನಃ ಸುದ್ದಿಯಲ್ಲಿದ್ದು, ಈಗಾಗಲೇ ಕೇರಳದಲ್ಲಿ ಈ ಸೋಂಕು ತಗುಲಿರುವ ಬಗ್ಗೆ ಸುದ್ದಿಯಾಗಿದೆ. ಕಳೆದ ವರ್ಷ ಕೂಡ ಇದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದರು.
ಬಾವಲಿ ಕುಕ್ಕಿದ ಅಥವಾ ಅದು ಹಣ್ಣುಗಳನ್ನು ಸ್ಪರ್ಶಿಸಿದರೆ ಅಂದರೆ ಸೋಂಕು ತಗುಲಿದ ಅಥವಾ ಮಲಿನವಾಗುವ ತಾಜಾ ಹಣ್ಣುಗಳಿಂದ ಹಾಗೂ ಸೋಂಕಿತ ವ್ಯಕ್ತಿಯ ಜತೆಗಿನ ನೇರ ಸಂಪರ್ಕದಿಂದ ಈ ವೈರಸ್ ಹರಡುತ್ತದೆ ಎನ್ನುತ್ತಾರೆ ವೈದ್ಯರು. ಈ ಸೋಂಕು ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸಾಮಾನ್ಯವಾಗಿ ಇದರಲ್ಲಿ ಸೋಂಕು ತಗುಲಿದ ತಕ್ಷಣ ಕಂಡು ಬರುವುದಿಲ್ಲ.
ಲಕ್ಷಣ: ಸಾಮಾನ್ಯವಾಗಿ ಇದರ ಲಕ್ಷ ಣಗಳು ಸೋಂಕು ತಗಲಿದ 3 ರಿಂದ 10 ದಿನಗಳಲ್ಲಿ ಪ್ರಾರಂಭವಾಗುತ್ತವೆ. ತಲೆನೋವು, ಜ್ವರ, ತಲೆಸುತ್ತು, ವಾಂತಿ, ಮಿದುಳಿನಲ್ಲಿ ತೀವ್ರ ಉರಿಯೂತ ಕಾಣಿಸಿಕೊಳ್ಳುವುದು. ಕಫದ ಸಮಸ್ಯೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಉಸಿರಾಟಕ್ಕೆ ಕಷ್ಟವಾಗುವುದು. ಅಷ್ಟೇ ಅಷ್ಟೇ ಅಲ್ಲ, ಶ್ವಾಸಕೋಶ ವೈಫಲ್ಯ, ಪ್ರಜ್ಞೆ ತಪ್ಪಲು ಕಾರಣವಾಗಬಹುದು. ರೋಗ ಉಲ್ಬಣಗೊಂಡು ವ್ಯಕ್ತಿ ಕೋಮಾಕ್ಕೆ ಜಾರುವ ಸಂಭವ ಇರುತ್ತದೆ.
ಎಚ್ಚರವಹಿಸಿಬೇಕಾದ ಕ್ರಮಗಳು: ಹಣ್ಣುಗಳನ್ನು ಸೇವಿಸುವ ಮುನ್ನ ಪರೀಕ್ಷಿಸಿ. ಸಾಧ್ಯವಾದಷ್ಟು ತಾಜಾ ಜ್ಯೂಸ್ ಸೇವನೆಯನ್ನು ತಪ್ಪಿಸಿ. ಸೋಂಕು ತಗಲಿದ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಿ. ಆಹಾರ ಸೇವನೆಗೆ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ರೋಗ ಲಕ್ಷಣ ಕಂಡಾಕ್ಷಣ ತಕ್ಷ ಣದ ವೈದ್ಯರ ಜತೆ ಸಮಾಲೋಚನೆ ನಡೆಸಿ ಚಿಕಿತ್ಸೆ ಪಡೆಯಿರಿ. ಗುಂಪಿನಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಡಿ.
ನಿಫಾ ವೈರಸ್ ತಗುಲಿದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳನ್ನು ಆಧರಿಸಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
ನಿಫಾ ವೈರಸ್ ಗುಣಲಕ್ಷ ಣಗಳನ್ನು ನಿಯಂತ್ರಿಸಲು ಇರುವ ಏಕೈಕ ಔಷಧವೆಂದರೆ ರಿಬವಿರಿನ್. ಆದರೆ ಇದು ಕೂಡಾ ನಿರ್ದಿಷ್ಟ ಮಟ್ಟದವರೆಗೆ ಮಾತ್ರ ಪರಿಣಾಮಕಾರಿ. ಆರಂಭಿಕ ಹಂತದಲ್ಲೇ ಇದನ್ನು ಸೇವಿಸಿದಲ್ಲಿ ಪರಿಣಾಮಕಾರಿ.
ರಕ್ತ, ಮೂತ್ರ ಹಾಗೂ ಕಫ ಪರೀಕ್ಷೆ ಮೂಲಕ ಇದನ್ನು ಪತ್ತೆ ಹಚ್ಚಬಹುದಾಗಿದ್ದು, ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದು. ಕೃಪೆ ವಿಕೆ