ತಾರುಣ್ಯದಲ್ಲಿ ಭಿನ್ನಲಿಂಗಿಗಳ ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ. ಆದರೆ ವಿವಾಹಕ್ಕೂ ಮುನ್ನ ದೈಹಿಕ ಸಂಪರ್ಕಕ್ಕೆ ಒಳಗಾಗುವುದನ್ನು ಯಾವುದೇ ಧರ್ಮ ಅಥವಾ ಕಾನೂನು ಒಪ್ಪುವುದಿಲ್ಲ.
ಇದರಿಂದ ಕೆಲವು ಅಡ್ಡಪರಿಣಾಮಗಳು ಇಲ್ಲಿವೆ ನೋಡಿ: ದೈಹಿಕ ಸಂಪರ್ಕ ಯಾವುದೇ ಸಂಬಂಧವನ್ನು ಬಲಪಡಿಸಬಹುದು ಅಥವಾ ಶಿಥಿಲಗೊಳಿಸಬಹುದು. ಹೌದು, ಒಂದು ಉತ್ತಮ ಸಂಬಂಧವನ್ನೇ ಕೆಡಿಸಬಹುದು. ನಿಶ್ಚಿತಾರ್ಥದ ಬಳಿಕ ಕೆಲವು ಜೋಡಿಗಳು ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕಕ್ಕೆ ಮುಂದಾಗುತ್ತಾರೆ. ಹೇಗೂ ವಿವಾಹವಾಗುತ್ತೇವಲ್ಲಾ, ಇದರಲ್ಲೇನು ತಪ್ಪು ಎಂಬುದು ಇವರ ವಾದ. ಇಬ್ಬರ ಲೈಂಗಿಕ ಆಸಕ್ತಿ ಮತ್ತು ಬಯಕೆಗಳು ಅವರಿಗನ್ನಿಸಿದಂತೆಯೇ ಪೂರ್ಣಗೊಂಡರೆ ಸರಿ, ಇಲ್ಲದಿದ್ದರೆ?
ಇಬ್ಬರಲ್ಲೊಬ್ಬರಿಗಾದರೂ ತಮ್ಮ ಸಂಗಾತಿಯಿಂದ ಸಿಗಬೇಕಿದ್ದ ಯಾವುದೋ ಒಂದು ಬಯಕೆ ಅವರು ಬಯಸಿದಂತೆ ಇರದೇ ಇದ್ದರೆ? ವಾಸ್ತವವೆಂದರೆ ಯಾವುದೇ ವ್ಯಕ್ತಿಗೆ ತನ್ನ ಕಲ್ಪನೆಯ ಲೈಂಗಿಕ ಸುಖ ನಿಜರೂಪದಲ್ಲಿ ಸಿಗಲು ಸಾಧ್ಯವೇ ಇಲ್ಲ. ಈ ಕೊರತೆ ನಿಶ್ಚಿತಾರ್ಥವಾಗಿ ಇನ್ನೇನು ನಾಳೆ ಮದುವೆ ಎಂದಾಗ ಇದೇ ಕಾರಣವಿದ್ದರೂ ಇದೇ ಕಾರಣವೆಂದು ಹೇಳದೇ ಮುರಿದುಬಿದ್ದಿವೆ.
ಯಾವುದೇ ಪ್ರಾಣಿಯ ಲೈಂಗಿಕ ಬಯಕೆ ಸ್ಖಲನದ ಬಳಿಕ ತಣಿಯುತ್ತದೆ. ದೈಹಿಕ ಸಂಪರ್ಕಕ್ಕೂ ಮುನ್ನ ಈ ಬಗ್ಗೆ ಇದ್ದ ಕುತೂಹಲ ಒಂದು ಬಾರಿಯ ಅನುಭವದ ಬಳಿಕ ‘ಇಷ್ಟೇನೇ’ ಎಂಬ ತೀರ್ಮಾನಕ್ಕೆ ಬರಲು ಕಾರಣವಾಗಬಹುದು. ಇವರು ತಕ್ಷಣವೇ ಈ ಮದುವೆಯಿಂದ ನುಣುಚಿಕೊಳ್ಳಲು ನೆವಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಕೆಲವರು ತಮ್ಮ ಬಯಕೆಗಳನ್ನು ತೀರಿಸಿಕೊಳ್ಳಲು ತಮ್ಮ ಅಕ್ಕಪಕ್ಕದಲ್ಲಿರುವವರೊಂದಿಗೆ ಗುಟ್ಟಾಗಿ ಸಂಬಂಧ ಬೆಳೆಸಿಕೊಂಡಿರುತ್ತಾರೆ. ನೆರೆಹೊರೆ, ಶಾಲೆಯ, ಉದ್ಯೋಗದ ಪರಿಚಯಸ್ಥರು, ಸ್ನೇಹಿತ ಅಥವಾ ಈಗಾಗಲೇ ವಿವಾಹವಾಗಿರುವವರೊಂದಿಗೂ ಸಂಬಂಧ ಇರಬಹುದು. ಈ ಸಂಬಂಧ ನಿಧಾನವಾಗಿ ಮಾನಸಿಕವಾಗಿಯೂ ಆ ವ್ಯಕ್ತಿಯೆಡೆ ವಾಲುವಂತೆ ಮಾಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಹೀಗೇ ಆಗುತ್ತದೆ. ಈಗ ವಿವಾಹವಾದರೆ ವಿವಾಹದ ಬಳಿಕವೂ ಈ ಮೊದಲ ಸಂಬಂಧದ ವ್ಯಕ್ತಿ ಮನಸ್ಸಿನಲ್ಲಿದ್ದು ಈಗಿನ ಸಂಗಾತಿಗೆ ಮೋಸ ಮಾಡಿದಂತಾಗುತ್ತದೆ.
ವಿವಾಹಪೂರ್ವ ಸಂಬಂಧದಿಂದ ಅನೈಚ್ಛಿಕ ಗರ್ಭಧಾರಣೆ ಅಥವಾ ಲೈಂಗಿಕರೋಗಗಳು ಹಬ್ಬುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕೆಲವು ಜೋಡಿಗಳು ವರ್ಷಗಳ ವರೆಗೆ ಡೇಟಿಂಗ್, ಅದೂ ಇದೂ ಎಂದು ಜೊತೆಯಾಗಿಯೇ ಇರುತ್ತಾರೆ. ಇವರಲ್ಲಿ ಕೆಲವರು ಮದುವೆಗೂ ಮುನ್ನವೇ ಲೈಂಗಿಕ ಸಂಪರ್ಕವನ್ನೂ ಬೆಳೆಸುತ್ತಾರೆ. ಕೆಲವೇ ದಿನಗಳಲ್ಲಿ ಇದು ಬೇಸರವನ್ನೂ ತರಿಸುತ್ತದೆ. ಆದರೆ ಈ ನಡುವೆ ಇಬ್ಬರಲ್ಲೊಬ್ಬರಿಗಾದರೂ ಮೂರನೆಯ ವ್ಯಕ್ತಿಯೊಬ್ಬರು ಇನ್ನೂ ಆಕರ್ಷಕರಾಗಿ ಕಂಡುಬಂದರೆ ಇವರಿಗೆ ಹೊಸ ಸಂಬಂಧವೇ ಹೆಚ್ಚು ಆಕರ್ಷಕವಾಗಿ ಕಾಣುವ ಮೂಲಕ ಇಷ್ಟು ವರ್ಷಗಳ ಡೇಟಿಂಗಿಗೂ ತಿಲಾಂಜಲಿ ನೀಡಿ ಮದುವೆಯನ್ನೂ ರದ್ದುಪಡಿಸುತ್ತಾರೆ.