ನಮಸ್ತೆ ಪ್ರಿಯ ಓದುಗರೇ, ಆಸ್ಪತ್ರೆಗಳಿಗೆ ಭೇಟಿ ನೀಡುವ ಬಹುತೇಕ ಎಲ್ಲಾ ರೋಗಿಗಳ ಸಾಮಾನ್ಯ ಸಮಸ್ಯೆಗಳೆಂದರೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು ಹಾಗೂ ಮಲಬದ್ದತೆ. ಮಲಬದ್ಧತೆಯ ವಿಷಯದಲ್ಲಿ ತುಂಬಾ ಜನರ ಕಲ್ಪನೆ ಏನೆಂದರೆ ಮಲವು ಹೊರಬರದೇ ಉಳಿದುಬಿಡುವುದರಿಂದ ಸಮಸ್ಯೆಯಾಗುತ್ತಿದೆ ಎಂದು. ಆದರೆ ನಿಜವಾಗಿ ಸಮಸ್ಯೆ ಅದಕ್ಕಿಂತ ಆಳವಾದದ್ದು. ದೊಡ್ಡ ಕರುಳಿನಲ್ಲಿ ಚಲನವಲನವು ತುಂಬಾ ಹೊತ್ತಿನವರೆಗೆ ಆಗದೆ ಉಳಿಯುವುದರಿಂದ ನಮ್ಮ ಮಿದುಳು, ಲಿವರ್, ರೋಗ ನಿರೋಧಕ ಶಕ್ತಿ ಮುಂತಾದ ವ್ಯವಸ್ಥೆಗಳಲ್ಲಿ ಏರುಪೇರಾಗುತ್ತದೆ. ಹಾಗಾಗಿ ಇದನ್ನು ಸಣ್ಣ ಸಮಸ್ಯೆ ಎಂದುಕೊಳ್ಳುವಂತಿಲ್ಲ. ಇದಕ್ಕೆ ಪರಿಹಾರ ಹುಡುಕುವ ಮೊದಲು ಯಾವ ತಪ್ಪಿನಿಂದ ಮಲಬದ್ದತೆ ಆಗುತ್ತಿದೆ ಎಂಬುದನ್ನು ತಿಳಿದು ಅದನ್ನು ಬಿಡುವ ಬಗ್ಗೆ ಯೋಚಿಸಬೇಕು. ಇಲ್ಲದಿದ್ದರೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿಲ್ಲ. ರಾತ್ರಿ ತಡವಾಗಿ ಮಲಗುವುದು, ಬೆಳಿಗ್ಗೆ ಸೂರ್ಯೋದಯದ ಮೊದಲೇ ಏಳದಿರುವುದು, ನಾರಿನ ಪದಾರ್ಥಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದೇ ಇರುವುದು, ದೈಹಿಕ ವ್ಯಾಯಾಮವನ್ನು ಸಾಕಷ್ಟು ಪ್ರಮಾಣದಲ್ಲಿ ಮಾಡದೇ ಇರುವುದು, ಪಾರ್ಕಿ ನ್ಸನ್, ಪ್ಯಾರಲಿಸಿಸ್ ನಂತಹ ನರಕ್ಕೆ ಸಂಬಂದಿಸಿದ ಕಾಯಿಲೆಗಳು ಇರುವುದು, ದೊಡ್ಡ ಕರುಳಿನ ಕ್ಯಾನ್ಸರ್ ನಂತಹ ತೊಂದರೆಗಲಿರುವುದು, ಕರುಳಿನಲ್ಲಿ ಅಡೆತದೆಯಾಗಿರುವುದು ಡೆ ಹೀಗೆ ಚಿಕ್ಕಪುಟ್ಟ ಕಾರಣಗಳಿಂದ ಹಿಡಿದು ಗಂಭೀರವಾದ ಕಾರಣಗಳಿಂದಲೂ ಮಲಬದ್ದತೆ ಉಂಟಾಗಬಹುದು.

ತುಂಬಾ ಒಣ ಮತ್ತು ಲಘು ಗುಣಗಳನ್ನು ಹೊಂದಿರುವ, ಸ್ವಲ್ಪವೂ ಕೊಬ್ಬಿಲ್ಲದ ಆಹಾರವನ್ನೇ ಹೆಚ್ಚಾಗಿ ಸೇವಿಸುವುದರಿಂದ ಮಲಬದ್ದತೆ ಉಂಟಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಮಲವನ್ನು ತೆಳ್ಳಗೆ ಮಾಡುವ ಕೆಲವು ಔಷಧಿಗಳಿಗೆ ಅವಲಂಬಿತ ಆಗಿರುವುದರಿಂದ ಮಲಬದ್ಧತೆಯ ಮೂಲ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಅಡ್ಡ ಪರಿಣಾಮಗಳೂ ಆಗಬಹುದು. ಹಾಗಾಗಿ ನಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಹಣ್ಣುಗಳು, ತರಕಾರಿಗಳು, ಮೆಂತೆ, ಒಣದ್ರಾಕ್ಷಿ, ಸೊಪ್ಪುಗಳು ವಿಶೇಷವಾಗಿ ಬಸಳೆ ಸೊಪ್ಪು, ಅಂಜೂರ, ಅಗಸೆ ಬೀಜ ಇಂತಹ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಎಷ್ಟೋ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ, ತಂಬಾಕು, ಸಿಗರೇಟ್ ಸೇವಿಸಿದರೆ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ ಎನ್ನುತ್ತಾರೆ. ಆದರೆ ಇದರಿಂದ ದೀರ್ಘ ಕಾಲದಲ್ಲಿ ಹಲವು ರೀತಿಯ ಅಡ್ಡ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ. ಮತ್ತು ಇದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಇಂತಹ ಪದಾರ್ಥಗಳನ್ನು ತ್ಯಜಿಸಿದರೆ ಆರೋಗ್ಯ ವೃದ್ಧಿಯಾಗುವ ಜೊತೆಗೆ ಮಲಬದ್ಧತೆಯ ನಿವಾರಣೆಗೂ ಆಗುತ್ತದೆ. ಕೆಲವು ಔಷಧಗಳ ಕಾರಣದಿಂದಲೂ ಮಲಬದ್ದತೆ ಆಗಬಹುದು. ವೈದ್ಯರ ಹತ್ತಿರ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಈ ಸಮಸ್ಯೆಯಲ್ಲಿ ಹಿತಕಾರಿ. ದಿನದಲ್ಲಿ ಕನಿಷ್ಠ 2-4 ಲೀಟರ್ ನೀರು ಕುಡಿಯುತ್ತಿದ್ದರೆ ಆರೋಗ್ಯಕ್ಕೂ ಅನುಕೂಲ ಮಲಬದ್ಧತೆಯ ನಿವಾರಣೆ ಯು ಸಾಧ್ಯ. ಬೆಳಿಗ್ಗೆ ಎದ್ದು ಬೆಚ್ಚಗಿನ ನೀರು ಕುಡಿದರೆ ದೊಡ್ಡ ಕರುಳಿನಲ್ಲಿ ಚಲನಶೀಲತೆ ಹೆಚ್ಚಾಗಿ ಸುಲಭವಾಗಿ ಮಲ ವಿಸರ್ಜನೆ ಆಗುತ್ತದೆ. ದೈಹಿಕ ವ್ಯಾಯಾಮದ ಕೊರತೆಯೂ ಮಲಬದ್ಧತೆಯ ಅತಿ ಮುಖ್ಯ ಕಾರಣ. ಹಾಗಾಗಿ ಯೋಗಾಸನಗಳು ಆ ವಿಷಯದಲ್ಲಿ ತುಂಬಾ ಪ್ರಯೋಜನಕಾರಿ.

ಶಶಾಂಕಾಸನ, ಪಾವನ ಮುಕ್ತಾಸನ , ಉತ್ತಾನ ಪಾದಸನ, ಸೂರ್ಯ ನಮಸ್ಕಾರಗಳು ಹೆಚ್ಚು ಲಾಭದಾಯಕ. ಕಪಾಲಭಾತಿ, ಅನುಲೋಮ ವಿಲೋಮ, ಬಸ್ತ್ರಿಕಾ, ಮೂಲ ಬಂದದಂತ ಪ್ರಣಾಯಾಮಗಳು ಮಲಬದ್ಧತೆಯಲ್ಲಿ ತುಂಬಾ ಸಹಕಾರಿ. ಹತ್ತರಿಂದ ಹದಿನೈದು ಒಣ ದ್ರಾಕ್ಷಿಗಳನ್ನು ಬೆಳಿಗ್ಗೆ ನೆನೆಸಿ ಸಂಜೆಯ ಸಮಯದಲ್ಲಿ ಅದನ್ನು ತಿಂದು ಬಿಸಿನೀರು ಕುಡಿಯುವುದು ಒಳ್ಳೆಯದು. ಬೊಜ್ಜು, ಮಧುಮೇಹದ ಸಮಸ್ಯೆಗಳು ಇರುವವರು ಅರ್ಧದಿಂದ ಒಂದು ಚಮಚದಷ್ಟು ತ್ರಿಫಲಾ ಚೂರ್ಣವನ್ನು ರಾತ್ರಿ ಮಲಗುವಾಗ ಬಿಸಿನೀರಿನಲ್ಲಿ ಸೇವಿಸಬಹುದು. ಒಣ ಅಥವಾ ತೆಳ್ಳಗಿನ ದೇಹವನ್ನು ಹೊಂದಿರುವವರು ಸಂಜೆ, ಸೂರ್ಯೋದಯದ ಮೊದಲು ಒಂದು ಲೋಟ ಬಿಸಿನೀರಿಗೆ ಒಂದು ಚಮಚ ತುಪ್ಪ, ನಾಲ್ಕು ಚಿಟಿಕೆ ಜ್ಯೇಷ್ಠ ಮಧುವಿನ ಪುಡಿ ಹಾಕಿ ತೆಗೆದುಕೊಳ್ಳಬೇಕು. ಒಂದು ತಾಸಿನ ನಂತರ ಲಘು ಭೋಜನ ಮಾಡಬೇಕು. ಅತ್ಯಂತ ಗಟ್ಟಿಯಾದ, ಕಾಳು ಕಾಳಾದ ಮಲ ವಿಸರ್ಜನೆ ಆಗುತ್ತಿದ್ದರೆ ಸಂಜೆ ಒಂದು ಲೋಟ ಹಾಲಿಗೆ ಒಂದು ಚಮಚ ಗುಲ್ಕಂದ್ ಹಾಕಿ ಸೇವಿಸಬೇಕು. ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಲೋಳೆಸರ ಅಂದರೆ ಅಲೋವೆರಾವನ್ನ ಸೇವಿಸುವುದೂ ಈ ಸಮಸ್ಯೆಯಲ್ಲಿ ಹಿತಕಾರಿ. ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿಹಾಲು ಅಥವಾ ಬಿಸಿನೀರಿನ ಜೊತೆ ಇಪ್ಪತ್ತರಿಂದ ಇಪ್ಪತ್ತೈದು ಮಿಲಿ ಹರಳೆಣ್ಣೆಯನ್ನು ಹಾಕಿ ಕುಡಿದರೆ ( ಮಲಬದ್ದತೆ ಇರುವವರಿಗೆ) ಎರಡರಿಂದ ನಾಲ್ಕು ಬಾರಿ ತೆಳ್ಳಗಿನ ಮಲವಿಸರ್ಜನೆ ಆಗಿ ಕರುಳು ಶುದ್ಧವಾಗುತ್ತದೆ. ನಿತ್ಯ ಇದರ ಸೇವನೆ ಮಾಡುವುದಾದರೆ ವೈದ್ಯರ ಜೊತೆ ಸಮಾಲೋಚನೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಒಳ್ಳೆಯ ದಿನಚರಿ, ಅಗತ್ಯವಾದಾಗ ಸರಿಯಾದ ಔಷಧಿಗಳ ಸೇವನೆಯಿಂದ ಮಲಬದ್ಧತೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಶುಭದಿನ.

Leave a Reply

Your email address will not be published. Required fields are marked *