ಮಲಬದ್ಧತೆ ಇದ್ದರೆ ಅಳಲೆಕಾಯಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ನಂತರ ಉಪ್ಪನ್ನು ಸೇರಿಸಿ ಪುಡಿ ಮಾಡಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಚಿಟಿಕೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಕುಡಿದರೆ ಬೆಳಗ್ಗೆ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
ಚರ್ಮದ ಅಲರ್ಜಿಯಾಗಿ ತುರಿಕೆ, ನೋವು, ಊತ ಇದ್ದರೆ ಅಳಲೆಕಾಯಿಯನ್ನು ಬಿಸಿ ನೀರಲ್ಲಿ ತೇದು ಚರ್ಮಕ್ಕೆ ಹಚ್ಚಿದರೆ ಪ್ರಯೋಜನವಿದೆ. ಅಳಲೆಕಾಯಿ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣು ನೋವು ಶಮನವಾಗುತ್ತದೆ. ಫಂಗಲ್ ಇನ್ಫೆಕ್ಷನ್ ಇದ್ದ ಜಾಗಕ್ಕೆ ಅಳಲೆಕಾಯಿಯನ್ನು ವಿನಿಗರ್ನಲ್ಲಿ ತೇದು ಹಚ್ಚಿದರೆ ಇನ್ಫೆಕ್ಷನ್ ಕಡಿಮೆಯಾಗುತ್ತದೆ.
ಅಳಲೆಕಾಯಿ ಮತ್ತು ನೀರು ಸೇರಿಸಿ ತಯಾರಿಸಿದ ಕಷಾಯದಿಂದ ಪ್ರತಿ ದಿನ ಬಾಯಿ ಮುಕ್ಕಳಿಸಿದರೆ ಬಾಯಿ ಮತ್ತು ಗಂಟಲು ಸಮಸ್ಯೆ ಗುಣವಾಗುತ್ತದೆ. ಅಜೀರ್ಣ ಸಮಸ್ಯೆ ಇದ್ದರೆ ಅಳಲೆಕಾಯಿ ಪುಡಿಗೆ ಶುಂಠಿ ಪುಡಿಯನ್ನು ಸಮಪ್ರಮಾಣದಲ್ಲಿ ಸೇರಿಸಿ ಅದಕ್ಕೆ ಬೆಲ್ಲ ಬೆರೆಸಿ ಸೇವಿಸಿಬೇಕು.
ಕೂದಲು ಉದುರುತ್ತಿದ್ದು, ಹೊಟ್ಟು , ಹೇನುಗಳು ಇದ್ದರೆ ಒಂದು ಕಪ್ ಕೊಬ್ಬರಿ ಎಣ್ಣೆಗೆ 3 ರಿಂದ 5 ಅಳಲೆಕಾಯಿ ಹಾಕಿ ಕಾಯಿ ಒಡೆಯುವ ತನಕ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ಡಬ್ಬಿಗೆ ಹಾಕಿ. ಪ್ರತಿ ದಿನ ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಹೊಟ್ಟು , ಹೇನು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
ಕಫ ಹೆಚ್ಚಾಗಿ ದೇಹದಲ್ಲಿ ಊತವಿದ್ದರೆ ಅಳಲೆಕಾಯಿಯನ್ನು ಗೋ ಮೂತ್ರದ ಜತೆ ನಿಯಮಿತವಾಗಿ ಸೇವಿಸಿದರೆ ಕಫ ಕಡಿಮೆಯಾಗಿ ಊತ ನಿವಾರಣೆಯಾಗುತ್ತದೆ. ಅಳಲೆಕಾಯಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ದೇಹದ ತೂಕ ಬೇಗ ಕಡಿಮೆಯಾಗುತ್ತದೆ.