ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ನಲ್ಲಿ ಮಧ್ಯಮವರ್ಗದವರಿಗೆ ಬಂಪರ್ ಆಫರ್ ಘೋಷಿಸಿದ್ದು, ನೀವೇನಾದರೂ ಸ್ವಂತ ಮನೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರೆ, ಅಥವಾ 2020ರ ಮಾರ್ಚ್ ಒಳಗೆ ಮನೆ ಕಟ್ಟುವ ಅಥವಾ ಖರೀದಿಸುವ ಯೋಚನೆ ನಿಮಗಿದ್ದರೆ, ನಿಮ್ಮ ಬಜೆಟ್ 45 ಲಕ್ಷ ರೂ. ಒಳಗಿದ್ದರೆ ಕೇಂದ್ರ ಸರ್ಕಾರ ಉತ್ತಮ ಆಫರ್ ನೀಡುತ್ತಿದೆ. 45 ಲಕ್ಷದವರೆಗೆ ಪಡೆಯುವ ಸಾಲದ ಬಡ್ಡಿಯ ಮೇಲೆ ಮೂರೂವರೆ ಲಕ್ಷ ರೂ. ವಿನಾಯಿತಿ ಘೋಷಿಸಲಾಗಿದೆ. ಈ ಮೊದಲು 2 ಲಕ್ಷ ರೂ. ವಿನಾಯಿತಿ ನೀಡಲಾಗುತ್ತಿತ್ತು. ಇದೀಗ ಒಂದೂವರೆ ಲಕ್ಷ ರೂ. ಹೆಚ್ಚುವರಿಯಾಗಿ ವಿನಾಯಿತಿ ನೀಡಲಾಗುತ್ತಿದೆ.
ಎಷ್ಟಿದೆ ವಿನಾಯತಿ ಗೊತ್ತಾ: ಮನೆಯ ಬೆಲೆ 45 ಲಕ್ಷ ತನಕ ಇದ್ದಲ್ಲಿ, ಅಂಥದ್ದರ ಖರೀದಿಗೆ ಗೃಹ ಸಾಲ ಪಡೆದುಕೊಂಡಿದ್ದರೆ/ಕೊಂಡರೆ, ಈ ಹಿಂದೆ ಇದ್ದ ತೆರಿಗೆ ವಿನಾಯಿತಿಗಿಂತ 1.5 ಲಕ್ಷ ರುಪಾಯಿ ಹೆಚ್ಚುವರಿಯಾಗಿ ಅಂದರೆ 3.5 ಲಕ್ಷಕ್ಕೆ ಏರಿಕೆ ಆಗಿದೆ. ಈ ಹಿಂದೆ 2 ಲಕ್ಷ ರುಪಾಯಿ ತೆರಿಗೆ ವಿನಾಯಿತಿ ದೊರೆಯುತ್ತಿತ್ತು. ಮಾರ್ಚ್ 31ನೇ ತಾರೀಕು 2020ರೊಳಗೆ ಮನೆ ಖರೀದಿ ಮಾಡಿದರೆ, 15 ವರ್ಷಗಳ ಕಾಲ 7 ಲಕ್ಷ ರುಪಾಯಿ ತೆರಿಗೆ ಅನುಕೂಲ ದೊರೆಯಲಿದೆ. ಅಂದರೆ ಗೃಹ ಸಾಲದ ಅವಧಿಯು ಹದಿನೈದು ವರ್ಷದ್ದಾಗಿದ್ದು, ಮನೆಯ ಖರೀದಿ ಮೌಲ್ಯ ನಲವತ್ತೈದು ಲಕ್ಷದೊಳಗೆ ಇರಬೇಕು. ಇದರಿಂದ ಮಧ್ಯಮ ವರ್ಗದ ಮನೆ ಖರೀದಿದಾರರಿಗೆ ಅನುಕೂಲ ಆಗಲಿದೆ. ಆದರೆ ಈಗಾಗಲೇ ತಿಳಿಸಿದ ನಿಯಮಗಳೆಲ್ಲವೂ ಅನ್ವಯ ಆದರೆ ಮಾತ್ರ ಅನುಕೂಲ ಆಗಿದೆ.
1.95 ಕೋಟಿ ಮನೆಗಳ ನಿರ್ಮಾಣ: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ 2019-20 ರಿಂದ 2021-22ರ ಅವಧಿಯಲ್ಲಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು, ಈಗಾಗಲೇ 26 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ ಒದಗಿಸಲಾಗುವುದು, ನೂತನ ತಂತ್ರಜ್ಞಾನದಿಂದ ಆಧುನಿಕ ಮನೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು. 2022ರೊಳಗೆ ಎಲ್ಲರಿಗೂ ಪ್ರತಿಯೊಬ್ಬರಿಗೂ ಮನೆ ಒದಗಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಪ್ರತಿ ಮನೆಗೂ ಶೌಚಾಲಯ, ವಿದ್ಯುತ್, ಎಲ್ ಪಿಜಿ ಸೌಕರ್ಯ ಕಲ್ಪಿಸಲಾಗುವುದು, ಮನೆಗಳ ನಿರ್ಮಾಣದ ಅವಧಿಯನ್ನು 314 ದಿನಗಳಿಂದ 114 ದಿನಗಳಿಗೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಗ್ರಹ ಮಾಹಿತಿ.