ಕಫ ಹೆಚ್ಚಾಗಿ ಕೆಮ್ಮು, ನೆಗಡಿ ಇದ್ದರೆ ಲವಂಗವನ್ನು ನೀರಲ್ಲಿ ಚೆನ್ನಾಗಿ ಕುದಿಸಿ ಆವಿಯನ್ನು ತೆಗೆದುಕೊಂಡರೆ ಕಫ ಕರಗಿ ಕೆಮ್ಮು ಶಮನವಾಗುತ್ತದೆ.
ಲವಂಗದ ಪುಡಿಯನ್ನು ಜೇನುತುಪ್ಪದ ಜತೆ ಕಲಸಿ ಸೇವಿಸಿದರೆ ವಾಂತಿ ನಿಲ್ಲುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಿದ್ದರೆ ಲವಂಗದ ಟೀ ಮಾಡಿ ಸೇವಿಸಿದರೆ ಗ್ಯಾಸ್ ಕಡಿಮೆಯಾಗುತ್ತದೆ. ಲವಂಗದ ಎಣ್ಣೆಯನ್ನು ಎಳ್ಳೆಣ್ಣೆಯಲ್ಲಿ ಕಲಸಿ ಹತ್ತಿಯಲ್ಲಿ ಅದ್ದಿ ಕಿವಿಯಲ್ಲಿ ಇಟ್ಟುಕೊಂಡರೆ ಕಿವಿ ನೋವು ಗುಣವಾಗುತ್ತದೆ.
ಅಸ್ತಮಾ ಇದ್ದು ಉಸಿರಾಡಲು ಕಷ್ಟವಾದರೆ ಪ್ರತಿ ದಿನ ರಾತ್ರಿ 4ರಿಂದ 5 ಲವಂಗವನ್ನು ಒಂದು ಚಮಚ ಜೇನುತುಪ್ಪ ಮತ್ತು ಒಂದು ಎಸಳು ಬೆಳ್ಳುಳ್ಳಿ ಜತೆ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಕ್ರಮೇಣವಾಗಿ ಆಸ್ತಮಾ ಶಮನವಾಗುತ್ತದೆ.10 ರಿಂದ 15 ಲವಂಗವನ್ನು ಹುರಿದು ಬಿಸಿ ಮಾಡಿ ಬಟ್ಟೆಯಲ್ಲಿ ಸುತ್ತಿ ಮಂಡಿಗೆ ಶಾಖ ಕಟ್ಟಿದರೆ ಮಂಡಿ ನೋವು ಕಡಿಮೆಯಾಗುತ್ತದೆ.
ಮುಖದಲ್ಲಿ ಮೊಡವೆಗಳು ಹೆಚ್ಚಾಗಿದ್ದರೆ ಲವಂಗದ ಎಣ್ಣೆಗೆ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಬೇಕು. ಒಣಗಿದ ಮೇಲೆ ಮುಖ ತೊಳೆದರೆ ಕ್ರಮೇಣವಾಗಿ ಮೊಡವೆಗಳು ನಿವಾರಣೆಯಾಗುತ್ತವೆ.
ಲವಂಗದ ಎಣ್ಣೆಗೆ ಸೈಂಧವ ಉಪ್ಪು ಮತ್ತು ಕೊಬ್ಬರಿ ಎಣ್ಣೆ ಬೆರೆಸಿ ಮಸಾಜ್ ಮಾಡಿದರೆ ತಲೆನೋವು ಬೇಗ ಶಮನವಾಗುತ್ತದೆ. ಲವಂಗ ಮತ್ತು ಏಲಕ್ಕಿ ಕಷಾಯ ಮಾಡಿ ಸೇವಿಸಿದರೆ ಹೊಟ್ಟೆ ಹುಳು ನಾಶವಾಗುತ್ತದೆ. 1ರಿಂದ 2 ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ಸೇವಿಸಿದರೆ ಬಾಯಿ ಒಣಗುವುದು ಮತ್ತು ಹಲ್ಲುನೋವು ಕಡಿಮೆಯಾಗುತ್ತದೆ.