ಮಕ್ಕಳು ಹುಟ್ಟು ಕಿವುಡು, ಮೂಕರು ಅಂತಾದ್ರೆ ಹೆತ್ತವರ ಕರುಳು ಚುರ್ ಅನ್ನುತ್ತದೆ. ಕೆಲವರು ಇದರಿಂದ ನೊಂದು ವಿದ್ಯಾಭ್ಯಾಸ ಜಾಸ್ತಿ ಕೊಡಿಸೋಕೆ ಆಗಲ್ಲ. ಆದ್ರೆ ವಿಜಯಪುರದ ಮಹಿಳೆಯೊಬ್ಬರು ಮಗಳಿಗೂ ತರಬೇತಿ ಕೊಡಿಸಿ, ತಾವೂ ತರಬೇತಿ ಪಡೆದು ಕಿವುಡ, ಮೂಕ ಮಕ್ಕಳಿಗಾಗಿ ಶಾಲೆಯನ್ನೇ ತೆರೆದಿದ್ದರೆ.
ಸುಜಾತ ಅವರ ಪುತ್ರಿ ಸ್ವಪ್ನಾಗೆ ಮೂರು ವರ್ಷವಾದರೂ ಮಾತು ಬಂದಿರಲಿಲ್ಲ. ವೈದ್ಯರ ಬಳಿ ತೋರಿಸಿದಾಗ ಕ್ರಮೇಣ ಬರುತ್ತೆ ಅಂದಿದ್ರೂ ಹುಸಿಯಾಯ್ತು. ಜೊತೆಗೆ ಕಿವಿಯೂ ಕೇಳ್ತಿರಲಿಲ್ಲ. ನೊಂದ ಶಿವಾನಂದ-ಸುಜಾತ ದಂಪತಿ ತಮ್ಮ ಮಗಳಿಗೆ ಮೈಸೂರಿನ ಮಾನಸಗಂಗೋತ್ರಿ ಮೂಕ ಮತ್ತು ಕಿವುಡ ತರಬೇತಿ ಶಾಲೆಯಲ್ಲಿ ಶಿಕ್ಷಣ ಕೊಡಿಸಿದ್ರು. ಆಸ್ತಿಪಾಸ್ತಿಯನ್ನೆಲ್ಲಾ ಮಾರಿ 3 ವರ್ಷ ಮೈಸೂರಿನಲ್ಲಿ ಉಳಿದರು. ಮಗಳ ಜೊತೆಗೆ ಸುಜಾತ ಅವರೂ ತರಬೇತಿ ಪಡೆದರು.
3 ವರ್ಷಗಳ ಬಳಿಕ ವಿಜಯಪುರಕ್ಕೆ ಮರಳಿ, ಮನೆಯಲ್ಲೇ ಮಗಳಿಗೆ ತರಬೇತಿ ಪ್ರಾರಂಭಿಸಿದರು. ಸುದ್ದಿ ತಿಳಿದ ನೆರೆಹೊರೆಯ ಮೂವರು ಮಕ್ಕಳು ತರಬೇತಿಗೆ ಬಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಜಾತ, ಇಂಥ ವಿಶೇಷ ಮಕ್ಕಳಿಗಾಗಿ 2008ರಲ್ಲಿ ಮಗಳ ಹೆಸರಿನಲ್ಲೇ ಶಾಲೆಯನ್ನೇ ತೆರೆದರು. ಇದೀಗ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮತ್ತು ವಿಜಯಪುರದ ಜಿಲ್ಲೆಗಳ ಒಟ್ಟು 62 ಮಕ್ಕಳು ತರಬೇತಿ ಪಡೀತಿದ್ದಾರೆ ಎಂದು ಪೋಷಕರಾದ ಗೀತಾ ಹೇಳಿದ್ದಾರೆ.
1 ರಿಂದ 3 ನೇ ತರಗತಿವರೆಗೆ ಮಕ್ಕಳಿಗೆ ಉಚಿತ ವಸತಿ, ತರಬೇತಿ ಸೇರಿದಂತೆ ಊಟ, ಉಪಹಾರವನ್ನು ಶಿವಾನಂದ ದಂಪತಿ ನೀಡ್ತಿದ್ದಾರೆ. ನಮ್ಮೀ ಸೇವೆಯಿಂದಾದ್ರೂ ದೇವರು ಕಣ್ತೆರೆದು ಮಗಳಿಗೆ ಮಾತು ಕೊಡ್ಲಿ ಅಂತ ಪ್ರಾರ್ಥಿಸ್ತಿದ್ದಾರೆ. ಸಂಗ್ರಹ ಪಬ್ಲಿಕ್ ಟಿವಿ