ನೆರಲೆಕುಡಿ ಅಂತಲೂ ಹೆಸರಿರುವ ಈ ಕ್ಯಾಕ್ಟಸ್ ಜಾತಿಯ ಬಳ್ಳಿ ಹಪ್ಪಳದ ಖಾರಕ್ಕೆ ಅತೀ ಅವಶ್ಯ. ಕಾಂಡವು ಮೃದುವಾಗಿದ್ದು, ಬೇರೆ ಗಿಡಗಳನ್ನು ಆಶ್ರಯಿಸಿ ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಬೆಳೆಯುವುದು, ಹಸಿರು ಬಣ್ಣದ ಕಾಂಡವು ರಸಭರಿತವಾಗಿದ್ದು, ಚಪ್ಪಟೆಯಾಗಿ, ಚೌಕೋನದಂತೆ ಇರುವುದು. ಕಾಂಡದ ಮೇಲೆ ಎರಡು ಅಂಗುಲ ಅಂತರದಲ್ಲಿ ಒಂದೊಂದು ಗಿಣ್ಣು ಇರುವುದು. ಪ್ರತಿ ಗಿಣ್ಣಿನಲ್ಲಿ ಒಂದು ಚಿಕ್ಕದಾದ ಹಸಿರೆಲೆ ಇರುವುದು. ಜುಲೈ ತಿಂಗಳಲ್ಲಿ ಹೂವು ಕಂಡುಬರುತ್ತದೆ. ಇದರಲ್ಲಿ ೩ ಮೂಲೆಯ ಮಂಗರವಳ್ಳಿ ಸಹ ಕಂಡುಬರುತ್ತದೆ. ಸಿಸ್ಸಸ್ ಕ್ವಾಡ್ರಾಂಗ್ಯುಲ್ಯಾರಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ವೈಟೇಸಿ ಎಂಬ ಕುಟುಂಬಕ್ಕೆ ಸೇರಿದೆ.
ಔಷಧೀಯ ಗುಣಗಳು: ಮೂಳೆ ಮುರಿದಾಗ ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕಬೇಕು.ನಾಟಿವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಳೆ ಮುರಿದಾಗ ಈ ಬಳ್ಳಿಯನ್ನು ಚಿಕಿತ್ಸೆಗೆ ಉಪಯೋಗಿಸುತ್ತಾರೆ.
ಮೂಲವ್ಯಾಧಿಯಿಂದ ಬಳಲುವವರು ಮಂಗರವಳ್ಳಿಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಮೂಲವ್ಯಾಧಿಯ ಮೊಳಕೆಗೆ ಲೇಪಿಸಬೇಕು. ಗಾಯಗಳಾಗಿರುವಾಗ ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ.
ಚರ್ಮರೋಗಗಳಿಂದ ಬಳಲುವವರು ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದಲ್ಲದೇ ಮೇಲೆ ಲೇಪಿಸಬೇಕು. ಮೂತ್ರ ಕಟ್ಟಿದಲ್ಲಿ ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯಬೇಕು
ಚಟ್ನಿ: ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು.ನಂತರ ಈರುಳ್ಳಿ, ಹಸಿಮೆಣಸಿನಕಾಯಿಯೊಂದಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ತೆಂಗಿನತುರಿಯೊಡನೆ ರುಬ್ಬಿಕೊಳ್ಳಬೇಕು.ಈ ಚಟ್ನಿ ಕೆಮ್ಮು, ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು.