WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಭೂಮಿಯಲ್ಲಿ ರಾಕ್ಷಸರ ಅಟ್ಟಹಾಸ ಎಲ್ಲೆ ಮೀರಿದಾಗ ಭಗವಂತ ಅವತಾರವನ್ನು ಎತ್ತುತ್ತಾನೆ ಎಂದು ನಂಬಲಾಗಿದೆ. ಹಿರಣ್ಯ ಕಶ್ಯಪನನ್ನು ಕೊಲ್ಲಲು ಹೇಗೆ ಮಹಾವಿಷ್ಣುವು ಉಗ್ರ ನರಸಿಂಹನ ಅವತಾರ ತಾಳಿದನೋ ಹಾಗೆಯೇ ಮಹಿಷಾಸುರ ಎಂಬ ದುಷ್ಟ ರಾಕ್ಷಸನನ್ನು ಕೊಲ್ಲೋಕೆ ಆದಿಶಕ್ತಿ ಜಗನ್ಮಾತೆಯೂ ಕೂಡ ಒಂಭತ್ತು ಬಗೆಯ ಅವತಾರ ತಾಳಿ ಅವನನ್ನು ಸಂಹರಿಸಿ ತನ್ನನ್ನು ನಂಬಿದ ಭಕ್ತರನ್ನು ಪೋರೆದಳು ಎಂದು ನಮ್ಮ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಮಹಿಷಾಸುರನನ್ನು ಸಂಹರಿಸಿದ ಚಾಮುಂಡಿ ದೇವಿಯು ಮೈಸೂರಿನಎಲ್ಲಿ ನೆಲೆ ನಿಂತು ಭಕ್ತರನ್ನು ಸಲಹುತ್ತಿದ್ದರೆ, ಚಾಮುಂಡಿ ಬೆಟ್ಟದ ಸನಿಹದಲ್ಲಿ ನೆಲೆ ನಿಂತ ಈ ದೇವಿಯು ತನ್ನ ಬಳಿ ಬರುವ ಭಕ್ತರ ಸಂಕಷ್ಟಗಳನ್ನು ನೀಗಿಸುತ್ತಿದ್ದಳೆ. ಬನ್ನಿ ಚಾಮುಂಡಿ ಬೆಟ್ಟದ ಸಮೀಪದಲ್ಲಿ ಇರುವ ಆ ತಾಯಿಯ ದರ್ಶನ ಮಾಡಿ ಕೃತಾರ್ಥರಾಗೋಣ. ಚಾಮುಂಡಿ ಬೆಟ್ಟದ ಸಮೀಪದಲ್ಲಿಯೇ ತಾಯಿ ಚಾಮುಂಡೇಶ್ವರಿ ಸಹೋದರಿ ಆದ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರು ನೆಲೆಸಿದ್ದು, ಈ ತಾಯಿಯನ್ನು ಉತ್ತಳಮ್ಮ, ಉತ್ತನಹಳ್ಳಿ ಮಾರಮ್ಮ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಪೂರ್ವಕ್ಕೆ ಮುಖ ಮಾಡಿ ನಿಂತಿದ್ರೆ, ಈ ಕ್ಷೇತ್ರದಲ್ಲಿ ಜಗನ್ಮಾತೆಯು ಪಶ್ಚಿಮಕ್ಕೆ ಮುಖ ಮಾಡಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ. ಅಲ್ಲದೆ ಮೈಸೂರನ್ನು ರಕ್ಷಿಸುವ ಆದಿ ದೇವತೆ ಎಂದು ಈ ದೇವಿಯನ್ನು ಕರೆಯಲಾಗುತ್ತದೆ. ದೇಗುಲದ ಗರ್ಭ ಗುಡಿಯಲ್ಲಿ ನಾಲಿಗೆಯನ್ನು ಹೊರ ಚಾಚಿ ನಿಂತಿರುವ ಭಂಗಿಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ತನ್ನ ಭಕ್ತರಿಗೆ ತೊಂದರೆ ನೀಡುವವರನ್ನು ಈ ದೇವಿಯು ತನ್ನ ಬೆಂಕಿಯಂತ ನಾಲಿಗೆಯಿಂದ ನುಂಗಿ ಹಾಕ್ತಾಳೆ ಎಂಬ ಮಾತುಗಳು ಇದ್ದು, ಈ ದೇವಿಯನ್ನು ಭಕ್ತಿಯಿಂದ ಪೂಜಿಸುವವರಿಗೆ ಬದುಕಿನಲ್ಲಿ ಬರುವ ಎಲ್ಲಾ ಸಂಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ.

ಹೆಣ್ಣು ಮಕ್ಕಳ ಪಾಲಿಗೆ ಈ ದೇವಿ ಅಶೈಷ್ವರ್ಯ ಕರುಣಿಸುವ ಮಾತೆ ಆಗಿದ್ದು, ಇಲ್ಲಿಗೆ ಬಂದು ಉಡಿಯನ್ನು ತುಂಬಿದ್ರೆ, ಅವಿವಾಹಿತರಿಗೆ ವಿವಾಹ ಭಾಗ್ಯ, ಮದುವೆಯಾದ ಹೆಣ್ಣು ಮಕ್ಕಳಿಗೆ ಕುಂಕುಮ ಭಾಗ್ಯ ಗಟ್ಟಿ ಆಗಿರುವಂತೆ ಆ ತಾಯಿ ಆಶೀರ್ವಾದ ಮಾಡ್ತಾಳೆ ಎನ್ನುವುದು ಈ ದೇಗುಲಕ್ಕೆ ನಡೆದುಕೊಳ್ಳುವ ಭಕ್ತರ ಮನದ ಮಾತಾಗಿದೆ. ಇನ್ನೂ ದೇಗುಲದಲ್ಲಿ ತಾಯಿಯು ಭಕ್ತರು ಕೇಳುವ ಪ್ರಶ್ನೆಗಳಿಗೆ ಹೂವಿನ ವರವನ್ನು ನೀಡುವ ವಿಶೇಷ ಪವಾಡವು ನಿತ್ಯ ಜರುಗುತ್ತದೆ. ಮನಸ್ಸಿನಲ್ಲಿ ಪ್ರಶ್ನೆಗಳನ್ನು ದೇವಿಯ ಎದುರು ನಿಂತು ಕೇಳಿಕೊಂಡರೆ ಆ ತಾಯಿಯು ಹೂವನ್ನು ಬೀಳಿಸುವುದರ ಮೂಲಕ ಕಾರ್ಯ ಸಿದ್ಧಿಸುತ್ತೊ ಇಲ್ಲವೋ ಎಂದು ಉತ್ತರವನ್ನು ನೀಡ್ತಾರೆ. ತಾಯಿಯ ಬಲಗಡೆ ಇಂದ ಹೂವು ಬಿದ್ದರೆ ಮನಸ್ಸಿನ ಸಂಕಲ್ಪ ನೆರವೇರುತ್ತದೆ ಎಂದು, ಎಡಗಡೆ ಇಂದ ಬಿದ್ದರೆ ಆ ಸಂಕಲ್ಪ ನೆರವೇರುವು ದಿಲ್ಲಾ ಎಂದು ತಾಯಿ ಸೂಚನೆಯನ್ನು ನೀಡುತ್ತಾಳೆ. ಸುಂದರವಾದ ಗರ್ಭಗೃಹ, ಮುಖ ಮಂಟಪ, ಪ್ರದಕ್ಷಿಣಾ ಪಥ, ಪುಟ್ಟದಾದ ಗೋಪುರ ಹೊಂದಿರೋ ಈ ದೇಗುಲವನ್ನು ನೋಡ್ತಾ ಇದ್ರೆ, ಬದುಕಿನ ಜಂಜಾಟಗಳು ತಾಯಿಯ ಸಾನಿಧ್ಯದಲ್ಲಿ ದೂರವಾಗುತ್ತದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವಿಯು ತಾಯಿ ಚಾಮುಂಡೇಶ್ವರಿ ಯ ಸಹೋದರಿ ಎಂದು ಕರೆಯಲು ಪುರಾಣದಲ್ಲಿ ಒಂದು ಕಥೆ ಇದೆ. ಬಹಳ ಹಿಂದೆ ಮಹಿಷಾಸುರ ಎಂಬ ರಾಕ್ಷಸನು ದೇವತೆಗಳಿಗೆ ಹಾಗೂ ಜನರಿಗೆ ತೊಂದರೆ ನೀಡುತ್ತಾ ಜೀವಿಸುತ್ತಾ ಇರುತ್ತಾನೆ. ಹೀಗಾಗಿ ರಕ್ಕಸನನ್ನು ಸಂಹರಿಸಲು ಆದಿಶಕ್ತಿಯು ಚಾಮುಂಡೇಶ್ವರಿಯ ಅವತಾರ ತಾಳಿ ಮಹಿಷಾಸುರ ನೊಂದಿಗೆ ಯುದ್ಧ ಮಾಡ್ತಾಳೆ. ಹೀಗೆ ಯುದ್ಧ ಮಾಡುವಾಗ ಚಾಮುಂಡೇಶ್ವರಿಯು ಬೆವರ ತೊಡಗುತ್ತಾಳೆ. ಆ ತಾಯಿಯ ಬೆವರ ಹನಿಗಳು ನೆಲಕ್ಕೆ ಬಿದ್ದ ಕೂಡಲೇ ಒಬ್ಬ ದೇವಿ ಜನಿಸುತ್ತಾಳೆ.

ಉರಿಯುವ ಜ್ವಾಲೆಯನ್ನು ಹೊಂದಿರುವ ಆ ದೇವಿಯು ಚಾಮುಂಡೇಶ್ವರಿಯ ಸಹಾಯಕ್ಕೆ ನಿಂತು ಮಹಿಷಾಸುರನನ್ನು ಮರ್ಧಿಸಲು ಸಹಕಾರಿ ಆಗ್ತಾಳೆ. ಇದರಿಂದ ಸುಪ್ರಸನ್ನಳದ ಚಾಮುಂಡೇಶ್ವರಿ ತಾಯಿಯು ಮಹಿಷಾಸುರನನ್ನು ಮರ್ಧಿಸಿದ ನಾನು ಈ ಬೆಟ್ಟದ ಮೇಲೆ ನೆಲೆ ನಿಂತು ಭಕ್ತರನ್ನು ಹರಸುತ್ತೇನೆ. ನೀನು ಇನ್ನೂ ಮುಂದೆ ಉತ್ತನಹಳ್ಳಿ ಎಂಬಲ್ಲಿ ನೆಲೆಸಿ ನಿನ್ನ ಬಳಿ ಬರುವ ಭಕ್ತರ ಆಸೆ ಆಕಾಂಕ್ಷೆಗಳನ್ನು ಪೂರ್ಥಿಗೊಳಿಸು ಎಂದು ಹೇಳುತ್ತಾಳೆ. ಚಾಮುಂಡೇಶ್ವರಿಯ ಒಂದು ಅಂಶವೇ ಆಗಿರುವುದರಿಂದ ಈಕೆಯನ್ನು ಚಾಮುಂಡಮ್ಮಾ ಸಹೋದರಿ ಎಂದೇ ಕರೆಯಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ದೇಗುಲದ ಒಂದು ಕೊಟ್ಟಡಿಯಲ್ಲಿ ಪಂಚ ಲೋಹದಿಂದ ಮಾಡಿದ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿ ವರ್ಷ ಚಾಮುಂಡೇಶ್ವರಿಯ ರಥೋತ್ಸವಕ್ಕೆ ಮುನ್ನ ಉತ್ತಾನಹಳ್ಳಿ ಉತ್ತಳಮ್ಮನಿಗೆ ಪೂಜೆ ಸಲ್ಲಿಸಿದ ನಂತರ ಮೈಸೂರು ಅರಸರು ರಥೋತ್ಸವ ವನ್ನಾ ಪೂಜಿಸುವ ಪರಿಪಾಠ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಇನ್ನೂ ಈ ದೇವಿಯ ಸಾಮೀಪ್ಯದ ಸನಿಹದಲ್ಲಿಯೇ ಉದ್ಭವ ಶಿವಲಿಂಗ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ದೇಗುಲ ಇದ್ದು, ಈ ದೇವರನ್ನು ಕೂಡ ನೋಡಿ ಕಣ್ಣು ತುಂಬಿಕೊಳ್ಳಬಹುದು. ಮಂಗಳವಾರ, ಶುಕ್ರವಾರ ಹಾಗೂ ಪೌರ್ಣಮಿಯಂದು ಇಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಆಷಾಢ ಮಾಸ ನವರಾತ್ರಿ ಹಬ್ಬದಲ್ಲಿ ದೇವಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವಿಯನ್ನು ಬೆಳಿಗ್ಗೆ 7.30- ಮಧ್ಯಾನ 12 ಗಂಟೆ ವರೆಗೆ ಸಂಜೆ 5.30 ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಉದಿಸೇವೆ, ಅಲಂಕಾರ ಸೇವೆ, ಕುಂಕುಮಾರ್ಚನೆ, ಅಭಿಷೇಕ ಸೇವೆ, ಹಣ್ಣು ಕಾಯಿ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ತ್ರಿಪುರ ಸುಂದರಿ ಅಮ್ಮನವರು ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಮೈಸೂರು ಜಿಲ್ಲೆಯ ಉತ್ತನಹಳ್ಳಿ ಎಂಬ ಪ್ರದೇಶದಲ್ಲಿ ಇದ್ದು, ಈ ದೇಗುಲವು ಚಾಮುಂಡಿ ಬೆಟ್ಟದಿಂದ 9 ಕಿಮೀ, ಮೈಸೂರು ಬಸ್ ನಿಲ್ದಾಣದಿಂದ 9 ಕಿಮೀ, ಬೆಂಗಳೂರಿನಿಂದ 150 ಕಿಮೀ, ಶಿವಮೊಗ್ಗದಿಂದ 251 ಕಿಮೀ, ಮಂಡ್ಯದಿಂದ 52 ಕಿಮೀ, ನಂಜನಗೂಡಿನ 21 ಕಿಮೀ, ದೂರದಲ್ಲಿದೆ. ಮೈಸೂರು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಸಾಧ್ಯವಾದರೆ ನೀವು ಒಮ್ಮೆ ಭೇಟಿ ನೀಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *