ಶ್ರೀ ಕ್ಷೇತ್ರ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ ಇತಿಹಾಸ ಪ್ರಸಿದ್ಧ ಹಾಲು ರಾಮೇಶ್ವರವಿದು. ಇಲ್ಲಿ ಉದ್ಬವ ಗಂಗೆ ಪವಾಡ. ಈ ಬಾವಿಯೊಳಗಿಂದ ನಿಮ್ಮ ಇಷ್ಟಾನುಸಾರ ಸಿದ್ಧಿ ಪ್ರಸಾದ ಮೇಲೆದ್ದು ಬರುವುದು, ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ. ಇದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 11 ಕಿಲೋ ಮೀಟರ್ ದೂರದಲ್ಲಿದೆ .
ಶ್ರೀ ಕ್ಷೇತ್ರ ಹಾಲು ರಾಮೇಶ್ವರ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರ.
ನೀರಗುಡ್ಡ, ಕೋಟೆಕಲ್ಲು ಗುಡ್ಡ, ದೊಡ್ಡರಸಿಗುಡ್ಡ, ತಿರುಮಲದೇವರ ಗುಡ್ಡ ಮತ್ತು ಹಾಲುರಾಮೇಶ್ವರ ಗುಡ್ಡಗಳನ್ನು ಹೊಂದಿರುವ ಹೊಸದುರ್ಗದ ಬೆಟ್ಟಶ್ರೇಣಿಗಳಲ್ಲಿ 1,181 ಮೀಟರ್ ಎತ್ತರವಿರುವ ಹಾಲುರಾಮೇಶ್ವರ.
ಹಾಲುರಾಮೇಶ್ವರ ಕ್ಷೆತ್ರದ ವಿಶೇಷತೆ:- ಹಾಲು ರಾಮೇಶ್ವರ ತನ್ನಲ್ಲಿರುವ ವಿಶೇಷತೆಯಿಂದ ಭಕ್ತರನ್ನು ಸೆಳೆಯುತ್ತಿದೆ. ಇಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ಎಂಬ ಮೂರು ಕೊಳಗಳಿವೆ. ಗಂಗಾ ಕೊಳದ ಮೇಲೆ ವಾಲ್ಮೀಕಿ ಮಹರ್ಷಿ ಪ್ರತಿಷ್ಠಾಪಿತ ಗಂಗಾಮಾತೆಯ ವಿಗ್ರಹವಿದೆ. ಇಲ್ಲಿ ಗಂಗಾಮಾತೆಯ ಪೂಜೆ ಮಾಡುವ ಭಕ್ತರು, ಕೊಳದ ನಾಲ್ಕೂ ಕಡೆ ಕುಳಿತು ತಮ್ಮ ಬಯಕೆ ಈಡೇರುತ್ತದೆಯೋ ಇಲ್ಲವೋ ಎಂದು ಕೇಳುತ್ತಾರೆ. ಮನದ ಬಯಕೆ ಈಡೇರುವುದಾದರೆ ಅವರಿಗೆ ಶುಭ ಸಂಕೇತವಾದ ಬಿಲ್ವಪತ್ರೆ, ಹರಿಶಿನ ಕುಂಕುಮ, ಬಳೆ ಬಿಚ್ಚೋಲೆ, ಅಡಿಕೆ, ಹೊಂಬಾಳೆ, ಸಿಹಿ, ಫಲಪುಷ್ಪ, ತಾಂಬೂಲ ಇತ್ಯಾದಿ ಬರುತ್ತದೆ. ಕೆಲಸ ಆಗುವುದಿಲ್ಲವೆಂದಾರೆ ಅಶುಭ ಸೂಚನೆಗಳಾದ ಒಡೆದ ಬಳೆಚೂರು, ಎಳ್ಳು, ಖಾಲಿ ಕೊಡ, ಚಿಪ್ಪು ದರ್ಬೆ ಬರುವುದೂ ಉಂಟು. ಕೆಲವರು ಎಷ್ಟು ಹೊತ್ತು ಕಾದರೂ ಏನೂ ಬರುವುದಿಲ್ಲ, ಬೇರೆಯವರಿಗಾಗಿ ಬಂದ ವಸ್ತುವನ್ನು ಮತ್ತೊಬ್ಬರು ಪಡೆಯಲು ಯತ್ನಿಸಿದರೆ ಅದು ಮುಳುಗಿ ಹೋಗುತ್ತದೆ.
ಇಲ್ಲಿ ಬಾಳೆಹಣ್ಣು, ತೆಂಗಿನಕಾಯಿ ಹೋಳು ಇತ್ಯಾದಿ ವಸ್ತುಗಳು ನೀರಿನ ಮೇಲೆ ತೇಲುವುದೇ ಒಂದು ಪವಾಡ. ತೇಲಲೇಬೇಕಾದ ಎಲೆ, ಕರಗುವ ಕುಂಕುಮ, ಹರಿಶಿನ ಕರಗದೆ ತೇಲುವುದು ಮತ್ತೊಂದು ವಿಶೇಷ. ಭಕ್ತರು ಪೂಜಿಸಿ ನೀಡುವ ಬಾಗಿನ ಮತ್ತೊಬ್ಬರಿಗೆ ಪ್ರಸಾದ ರೂಪದಲ್ಲಿ ದೊರಕುತ್ತದೆ. ಬರವಿರಲಿ, ಮಳೆಯಿರಲಿ ಎಲ್ಲ ಕಾಲದಲ್ಲೂ ಈ ಕೊಳದಲ್ಲಿ ನೀರು ಸದಾ ಇರುತ್ತದೆ. ಈ ಕೊಳದ ಆಳ, ಪವಾಡ ಎಲ್ಲವೂ ನಿಗೂಢ. ನೂರಾರು ವರ್ಷಗಳಿಂದ ಈ ಕೊಳ ಒಮ್ಮೆಯೂ ಬತ್ತಿಲ್ಲ, ಬರಿದಾಗಿಲ್ಲ.
ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ ಅವರಿಗೆ ಬೆಳ್ಳಿ ತೊಟ್ಟಿಲು ಬಂತಂತೆ. ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರು ಎಂದು ಅಧಿಕೃತ ಉಲ್ಲೇಖವಿದೆ ಎಂದು ಸಂಜೀವಮೂರ್ತಿ ಹೇಳುತ್ತಾರೆ.
ಹೊಸದುರ್ಗದಿಂದ ಕೇವಲ 11 ಕಿಲೋ ಮೀಟರ್ ದೂರದಲ್ಲಿರುವ ಈ ಊರಿಗೆ ಹಾಲು ರಾಮೇಶ್ವರ ಎಂದು ಹೆಸರು ಹೇಗೆ ಬಂತು ಎಂಬುದಕ್ಕೆ ಪುರಾಣದಲ್ಲಿ ಉಲ್ಲೇಖವಿದೆಯಂತೆ. ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ ಈ ಊರಿನ ಹುತ್ತದಲ್ಲಿ ದೊರಕಿತಂತೆ, ಆಗ ಅಲ್ಲಿ ಗಂಗೋದ್ಭವವೂ ಆಯಿತಂತೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆ ವಿಗ್ರಹ ಪ್ರತಿಷ್ಠಾಪಿಸಿ ರಾಮೇಶ್ವರದತ್ತ ಹೊರಟರಂತೆ. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ ಹಾಲು ರಾಮೇಶ್ವರ ಎಂದು ನಾಮಕರಣ ಮಾಡಿದರು ಎನ್ನುತ್ತಾರೆ ಹಾಲು ರಾಮೇಶ್ವರ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಹೊ.ಸ್ವಾ. ಸಂಜೀವಮೂರ್ತಿ ಅವರು.
ಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿಯವರ ವಿಗ್ರಹವೂ ಇದೆ. ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ, ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಬೇಡರ ಕಣ್ಣಪ್ಪ ದೇವಾಲಯ ಹಾಗೂ ಪುರಾತನ ಅಶ್ವತ್ಥಕಟ್ಟೆಯಿದೆ.
ಹುತ್ತವಿದ್ದ ಜಾಗದಲ್ಲಿ ಹಾಸುಗಲ್ಲು ಹಾಕಿ ಅದರ ಮೇಲೆ ನಂದಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಈ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ಮೊದಲು ಮೂಲಗಂಗಾದೇವಿ ದರ್ಶನ ಮಾಡಿ ನಂತರ ರಾಮೇಶ್ವರನ ದರ್ಶನ ಮಾಡುತ್ತಾರೆ. ಇಲ್ಲಿ ಕ್ಷೇತ್ರದಲ್ಲಿ ಪ್ರತೀತಿ ಕೂಡ.
ಈ ಕ್ಷೇತ್ರವನ್ನು ಹಿಂದೆ ವಿಜಯನಗರದ ಅರಸರು, ದುರ್ಗದ ಪಾಳೆಯಗಾರರು ಅಭಿವೃದ್ಧಿ ಪಡಿಸಿದ್ದರು. ಈಗ್ಗೆ 25 ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು, ಪ್ರಗತಿ ಗಂಗಾ ಯೋಜನೆ ಉದ್ಘಾಟಿಸಿ, ಹಾಲು ರಾಮೇಶ್ವರ ಹಾಗೂ ಗಂಗಾಮಾತೆಯನ್ನು ಪೂಜಿಸಿದಾಗ ಅವರಿಗೆ 5 ದಳದ ಬಿಲ್ವಪತ್ರೆ ಪ್ರಸಾದವಾಯಿತು. ದೇವರ ಸಂಕಲ್ಪದಂತೆ ಶ್ರೀಗಳು ಇಲ್ಲಿ ಮಂಜುಶ್ರೀಭವನ ನಿರ್ಮಿಸಿದರು ಎನ್ನುತ್ತಾರವರು.
ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ, ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಇದೆ. ಸಂಗ್ರಹ ಮಾಹಿತಿ