ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಚರಣೆಯನ್ನು ವಿಶ್ವದಾದ್ಯಂತ ಆಚರಣೆ ಮಾಡುತ್ತಾರೆ. ಮಹಿಳೆಯರ ಸಾಧನೆ ಹಾಗೂ ಮಹಿಳೆಯರ ಪ್ರಾಮುಖ್ಯತೆ ತಿಳಿಸುವ ಒಂದು ದಿನವಾಗಿದೆ. ಇಂದು ನಮ್ಮ ಕರ್ನಾಟಕದ ಮಹಿಳಾ ಶಿಕ್ಷಕಿ ಹಾಗೂ ಸಾವಿರಾರು ಮಕ್ಕಳ ಪಾಲಿನ ಅಮ್ಮನಂತಿರುವ ಡಾ.ರಾಧಾ ಅವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ರಾಷ್ಟ್ರಪ್ರಶಸ್ತಿ ಪಡೆದ ಆದರ್ಶ ಶಿಕ್ಷಕಿಯೊಬ್ಬರು ತಮ್ಮ ನಿವೃತ್ತಿಯ ನಂತರವೂ ಅಕ್ಷರ ದಾಸೋಹ ಮುಂದುವರೆಸುತ್ತ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷ ಇವರು ಕರ್ನಾಟಕದ ಮೊದಲ ನಾಡಗೀತೆ ಎಂದೇ ಪ್ರಸಿದ್ಧಿಯಾದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ರಚಿಸಿದ ಹುಯಿಲಗೋಳ ನಾರಾಯಣರಾಯರ ಮೊಮ್ಮಗಳು. ಡಾ.ರಾಧಾ ಕುಲಕರ್ಣಿ (80), ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ನಿವೃತ್ತಿಯಾದ ಬಳಿಕ ತಮಗೆ ಬರುವ ಪಿಂಚಣಿ ಹಣವನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ 13 ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮಿಸಲಿಟ್ಟಿದ್ದಾರೆ. ಅದರಲ್ಲಿ ಮೂರು ಮಕ್ಕಳು ದಿವ್ಯಾಂಗರು!
ಈ ಇಳಿ ವಯಸ್ಸಿನಲ್ಲೂ ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕೌನ್ಸೆಲಿಂಗ್ ನೀಡುತ್ತಾರೆ. ಶಿಕ್ಷಕರಿಗೆ ಪಾಠ ಮಾಡುವ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಾರೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾವಂತ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಆಸರೆಯಾಗುತ್ತಾರೆ. ಯಾವುದಕ್ಕೂ ಅವರು ಇನ್ನೊಬರಿಂದ ಪ್ರತಿಫಲಾಪೇಕ್ಷೆ ಬಯಸಿಲ್ಲ. ಮುಂಬೈನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ಅವರು, ತಮ್ಮ ಕೊರಗನ್ನು ನಿವಾರಿಸಿಕೊಂಡು ಈಗ ಸಾವಿರಾರು ಮಕ್ಕಳಿಗೆ ಅಮ್ಮನಂತಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ರಾಜ್ಯದ ಮಾಜಿ ಸಚಿವ ಎಚ್. ಕೆ.ಪಾಟೀಲ್, ವೈದ್ಯಕೀಯ ಕ್ಷೇತ್ರದಲ್ಲಿ ಚಿನ್ನದ ಪದಕ ಗಳಿಸಿರುವ ಮುಂಬೈನ ಜ್ಯೋತಿ ದಾಸ್ ಸೇರಿ ದೇಶ ವಿದೇಶದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಅನೇಕ ಮಂದಿ ಇವರ ವಿದ್ಯಾರ್ಥಿಗಳು.
ರಾಧಾ ಕುಲಕರ್ಣಿ ಅವರ ಸ್ಫೂರ್ತಿಯಿಂದ ವಿವಿಧ ರೀತಿಯ ಸಮಸ್ಯೆಯಿಂದ ಬಳಲಿದವರೂ ಸಮಾಜದಲ್ಲಿ ಸಾಧಿಸಿ ತೋರಿಸಿದ್ದಾರೆ. ಅವರ ಶಿಷ್ಯೆಯೊಬ್ಬರಿಗೆ ಪಾರ್ಕಿನ್ಸನ್ ಕಾಯಿಲೆ ಬಂದಿತ್ತು. ತನ್ನ ಬದುಕೇ ಬರಡಾಯಿತು ಎಂದು ಯೋಚಿಸುತ್ತಿದ್ದ ಅವಳಲ್ಲಿ ಕವನ ಬರೆಯುವ ಪ್ರತಿಭೆ ಇದೆಎಂದು ರಾಧಾ ಅವರಿಗೆ ತಿಳಿದಿತ್ತು. ಅವಳಿಗೆ ಕವನ ಬರೆಯಲು ಪ್ರೇರಣೆ ನೀಡಿದರು ರಾಧಾ. ನಂತರ ಅವರ ಕವನ ಸಂಕಲನವನ್ನು ಕರ್ನಾಟಕ ಲೇಖಕಿಯರ ಸಂಘದಿಂದ ಪ್ರಕಟಿಸಿ ಬಿಡುಗಡೆಗೊಳಿಸಲಾಯಿತು. ಇವತ್ತು ಅವರ ಕಥೆ, ಕವನಗಳಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಅವರೇ ಹೆಸರಾಂತ ಕವಯತ್ರಿ ಪ್ರಮೀಳಾ ತೊರವಿ.
70-80ರ ದಶಕದಲ್ಲಿ ಇವರು ಶಾಲಾ ಮಕ್ಕಳಿಗೆ ಮಾಡಿದ್ದ ನೃತ್ಯ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ನಾರಾಯಣರಾಯರ ಬದುಕು, ಬರಹ ಸೇರಿ 13 ಕೃತಿಗಳನ್ನು ರಚಿಸಿದ್ದಾರೆ. “ಅಂತೂ ಕಣ್ಣ ತೆರೆದವು’ ಕೃತಿಗೆ ಕಾಸರಗೋಡು ಸಾಹಿತ್ಯ ಸಂಘದ ಪ್ರಶಸ್ತಿ ಹಾಗೂ ವಿಕಾಸ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿಸಂದಿದೆ. ಪ್ಲೇ ವೈಲ್ ಲರ್ನಿಂಗ್ ಎಂಬ ಮಾದರಿಯಲ್ಲಿ ಕಲಿಕೆಗೆ ಸಹಕಾರಿಯಾಗುವಂತಹ 12 ಆಟಿಕೆಗಳನ್ನು ಸಿದಟಛಿಪಡಿಸಿ ಇವರು ಯಶಸ್ವಿಯಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ 3 ವಿಷಯಗಳನ್ನು ಮಂಡಿಸಿ ಬಹುಮಾನ ಗಳಿಸಿದ್ದಾರೆ. ಬಿ.ಡಿ.ಜತ್ತಿ ಅವರಿಂದ ರಾಷ್ಟ್ರೀಯ ಪುರಸ್ಕಾರವೂ ಸಂದಿದೆ. ಇವರ ಸಾಧನೆ ಗಮನಿಸಿ ಕೇಂದ್ರ ಸರ್ಕಾರ 1998ರಲ್ಲಿ ಉತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. 2015ರಲ್ಲಿ ಅಮೆರಿಕದ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹಾಗೂ 2018ರಲ್ಲಿ ಇಂಟರ್‌ನ್ಯಾಷನಲ್ ಓಪನ್‌ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿವೆ.
ಹೀಗೆ ಯಾವಾಗಲೂ ಸದಾ ಬಡ ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಪಿಂಚಣಿ ಹಣವನ್ನು ಸಹ ಕೂಡಿಟ್ಟು ಮಕ್ಕಳ ಓದಿಗಾಗಿ ಶ್ರಮಿಸುತ್ತಿದ್ದಾರೆ.