ಶ್ರೀಗಂಧಯುಕ್ತ ಜಲಪಾನ ಮಾಡುವುದರಿಂದ ಶ್ರಮ ಪರಿಹಾರವಾಗುವುದು, ಬಾಯಾರಿಕೆ ತೀರುವುದು. ತೇದ ಶ್ರೀಗಂಧವನ್ನು ಸೇವಿಸುವುದರಿಂದ ವಿಷ ನಿವಾರಣೆಯಾಗುವುದು, ಕಫ ಕರಗಿ ನೀರಾಗುವುದು, ಪಿತ್ತ ಶಮನವಾಗುವುದು, ರಕ್ತ ದೋಷಗಳು ಪರಿಹಾರವಾಗುವುದು.

ಶ್ರೀಗಂಧವನ್ನು ತಲೆಗೆ ಹಚ್ಚುವುದರಿಂದ ತಲೆಶೂಲೆ ಉಂಟಾಗುವುದಿಲ್ಲ. ಶ್ರೀಗಂಧವನ್ನು ತೇದು ಎಳನೀರಿನೊಂದಿಗೆ ಮಿಶ್ರ ಮಾಡಿ ಕುಡಿಸುವುದರಿಂದ ಬಾಯಾರಿಕೆ ನಿವಾರಣೆಯಾಗುವುದು.

ಶ್ರೀಗಂಧದ ಕಷಾಯ ಸೇವಿಸುವುದರಿಂದ ಉರಿಮೂತ್ರ ನಿವಾರಣೆಯಾಗುವುದು. ತೇದ ಶ್ರೀಗಂಧವನ್ನು ಹಚ್ಚುವುದರಿಂದ ನಾವೇ, ಕಜ್ಜಿ, ತುರಿಕೆ ಇತ್ಯಾದಿ ಚರ್ಮರೋಗಗಳು ಗುಣವಾಗುವವು.

ಮೊಸರಿನಲ್ಲಿ ಶ್ರೀಗಂಧವನ್ನು ತೇದು ಹಚ್ಚಿದ್ದಲ್ಲಿ ತುರಿಕಜ್ಜಿ, ಚಿಬ್ಬು ಗುಣವಾಗುವುದು. ಶ್ರೀಗಂಧವನ್ನು ಅರಿಶಿನ ಕೊಂಬನ್ನು ತೇದು ಗಂಧ ತೆಗೆದು ಹಾಲಿನೊಂದಿಗೆ ಬೆರೆಸಿ ಮೊಡವೆಗಳಿಗೆ ಹಚ್ಚಿದ್ದಲ್ಲಿ ಗುಣ ಕಂಡುಬರುವುದು.

ಶ್ರೀಗಂಧವನ್ನು ನೀರಿನಲ್ಲಿ ತೇದು ಸಿಡುಬಿನ ವ್ರಣಗಳಿಗೆ ಲೇಪಿಸಿದರೆ ಉರಿ, ತುರಿಕೆ ಕಡಿಮೆಯಾಗುತ್ತದೆ. ಒಂದು ಲೋಟ ನೀರಿಗೆ ನಿಂಬೆ ರಸ ಮತ್ತು ತೇದ ಗಂಧವನ್ನು ಬೆರೆಸಿ ಬಾಯಿ ಮುಕ್ಕಳಿಸುತ್ತಿದ್ದರೆ ವಸಡು ಗಟ್ಟಿಯಾಗುವುದು, ಬಾಯಿಯ ದುರ್ಗಂಧ ನಿವಾರಣೆಯಾಗುವುದು.

ಗಂಧದಪುಡಿಯನ್ನು ನೀರಿನಲ್ಲಿ ಕದಡಿ ಮೈಗೆ ಲೇಪಿಸಿದ್ದಲ್ಲಿ ಬೆವರಿನ ವಾಸನೆ ತೊಲಗಿ ಆಯಾಸ ಪರಿಹಾರವಾಗುವುದು. ಬಿರುಕು ಬಿಟ್ಟ ಚರ್ಮಕ್ಕೆ ಶ್ರೀಗಂಧವನ್ನು ತೇದು ಹಸುವಿನ ಬೆಣ್ಣೆಯಲ್ಲಿ ಬೆರೆಸಿ ಹಚ್ಚಿದ್ದಲ್ಲಿ ಗುಣವಾಗುವುದು.

ಶ್ರೀಗಣಧವನ್ನು ಜೇನಿನಲ್ಲಿ ತೇದು ನಾಲಿಗೆ ಮೇಲೆ ಹಚ್ಚುತ್ತಿದ್ದರೆ ನಾಯಿ ಕೆಮ್ಮು ಶಮನವಾಗುವುದು. ಶ್ರೀಗಂಧವನ್ನು ನೆಲ್ಲಿಕಾಯಿರಸದೊಂದಿಗೆ ತೇದು, ಜೇನಿನೊಂದಿಗೆ ಮಿಶ್ರ ಮಾಡಿ ಸೇವಿಸುವುದರಿಂದ ವಾಂತಿ ನಿಲ್ಲುವುದು.

Leave a Reply

Your email address will not be published. Required fields are marked *