ಕರ್ನಾಟಕ ರಾಜ್ಯ ದ, ಚಿತ್ರದುರ್ಗದಿಂದ ಸುಮಾರು ೫೦ ಕಿಮೀ ದೂರದಲ್ಲಿ, ಹೊಸದುರ್ಗ ತಾಲ್ಲೂಕಿನಲ್ಲಿರುವ ಪುಣ್ಯ ಕ್ಷೇತ್ರ, ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈ ತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಕೈಯಿಂದ ಪ್ರತಿಷ್ಠೆಯಾಗಿದೆ, ಎಂದು ಹೇಳಲಾದ ಶಿವಲಿಂಗ, ‘ಉದ್ಭವ ಮೂರ್ತಿ’ಎಂದು ಜನ ನಂಬುತ್ತಾರೆ. ದೇವಾಲಯದ ಮುಂದೆ ‘ನಂದಿ ಮೂರ್ತಿ’ಯನ್ನೂ ನಾವು ಕಾಣಬಹುದು. ‘ಗಂಗಾ ಕೊಳ’ ಇಲ್ಲಿಯ ವಿಶೇಷ. ಅಲ್ಲಿಗೆ ಹೋದ ಭಕ್ತರು ಮೊದಲು ಗಂಗಾಮಾತೆಗೆ ವಂದಿಸಿ, ಕೊಳದಲ್ಲಿ ಸ್ನಾನಮಾಡಿ, ತಮ್ಮ ಮನಸ್ಸಿನಲ್ಲಿ ಕೋರಿಕೊಳ್ಳುತ್ತಾರೆ.
ಸ್ವಲ್ಪ ಸಮಯದಲ್ಲಿ ಕೊಳದ ನೀರಿನ ಮೇಲೆ ವಸ್ತುಗಳು ತೇಲುತ್ತಾ ಬರುತ್ತವೆ. ಅರ್ಚಕರು ಇದರ ಬಗ್ಗೆ ಈಡೇರುವ ಬಯಕೆಗಳ ಬಗ್ಗೆ ತಿಳಿಸುತ್ತಾರೆ. ಭಕ್ತರ ಬೇಡಿಕೆಗೆ ತಕ್ಕ ಹಾಗೆ ನೀರಿನಲ್ಲಿ ತೇಲುತ್ತಾ ಕಾಣಿಸಿಕೊಳ್ಳುವ ವಸ್ತುಗಳು ಹಲವಾರು ಬಗೆಯವು. ವೀಳೆದೆಲೆ, ಹೂವು, ಹಣ್ಣು, ಕಾಯಿ, ಮೊಸರನ್ನ,, ಬೆಳ್ಳಿಯ ನಾಣ್ಯ,, ತೆಂಗಿನಕಾಯಿ , ಮೊದಲಾದವುಗಳು. ಇಲ್ಲಿಗೆ ಭೇಟಿನೀಡುವ ಭಕ್ತರ ಬಾಯಿನಿಂದ “ಉದ್ಭವಗಂಗೆ” ಎಂದೇ ಕರೆಸಿಕೊಳ್ಳುವ ಪುಣ್ಯಸ್ಥಳವಾಗಿದ್ದ್ದು ಪ್ರತೀದಿನ ನೂರಾರು ಭಕ್ತಾಧಿಗಳು ಭೇಟಿನೀಡುತ್ತಾರೆ. ಮಕ್ಕಳಿಲ್ಲದವರು ಇಲ್ಲಿ ಭಗವಂತನಲ್ಲಿ ಹರಕೆ ಸಲ್ಲಿಸುತ್ತಾರೆ.
ಐತಿಹ್ಯ: ವಾಲ್ಮೀಕಿ ಮಹರ್ಷಿಗಳ ಪತ್ನಿ, ‘ಸುದತಿದೇವಿ’ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ, ಈ ಊರಿನ ಹುತ್ತದಲ್ಲಿ ದೊರಕಿದಾಗ ಅಲ್ಲಿ ಗಂಗೋದ್ಭವವೂ ಆಯಿತು ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು, ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆಯ ವಿಗ್ರಹ ಪ್ರತಿಷ್ಠಾಪಿಸಿ ‘ರಾಮೇಶ್ವರ’ದತ್ತ ಹೊರಟರು. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ, ‘ಹಾಲು ರಾಮೇಶ್ವರ’ ಎಂದು ನಾಮಕರಣ ಮಾಡಿದರು ಎನ್ನುತ್ತಾರೆ. ಅಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ, ‘ಸುದತಿದೇವಿ’ಯವರ ವಿಗ್ರಹವೂ ಇದೆ.
ಇಷ್ಟಾರ್ಥ ಸಿದ್ಧಿ: ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಮತ್ತು ಬೇರೆ ರಾಜ್ಯಗಳಿಂದಲೂ ಶ್ರದ್ಧಾಳುಗಳು ಈ ಕ್ಷೇತ್ರಕ್ಕೆ ಬರುತ್ತಾರೆ. ಗಂಗಾ ಕೊಳದಲ್ಲಿ ಮಿಂದು ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯಾಗುವುದೇ, ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಫಲದ ರೀತಿಯಲ್ಲಿ ಕೊಳದ ನೀರಿನ ಮೇಲೆ ತೇಲಿಬರುವ ನಾನಾ ವಸ್ತುಗಳನ್ನು ಕಂಡ ಬಳಿಕ, ಅಲ್ಲಿನ ಅರ್ಚಕರು ಅದರ ಬಗ್ಗೆ ಸಿದ್ಧಿಫಲವನ್ನು ತಿಳಿಯ ಹೇಳುತ್ತಾರೆ.
ಸಾಮೂಹಿಕ ವಿವಾಹ: ಈ ಕ್ಷೇತ್ರದಲ್ಲಿ ಈಶ್ವರನ ದೇವಾಲಯಗಳು ಬಸವಣ್ಣನ ವಿಗ್ರಹಗಳು ಹಾಗು ನೀರಿನ ಕೊಳಗಲಿವೆ. ‘ಸಮುದಾಯ ಭವನ’ವನ್ನು ಇತ್ತೀಚೆಗಷ್ಟೇ ನಿರ್ಮಿಸಿದಾರೆ. ಇಲ್ಲಿ ಸರಳವಾದ ರೀತಿಯಲ್ಲಿ ‘ಸಾಮೂಹಿಕ ವಿವಾಹ’ಗಳು ಜರುಗುತ್ತವೆ.
ದೇವರ ಆಗಮನ: ತಾಲ್ಲೂಕಿನ ನಾನಾ ಕಡೆಗಳಿಂದ ದೇವರು ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಆಗಮಿಸಿ, ಗಂಗಾ ಸ್ನಾನ ಮಾಡುವುದು ಬಹಳ ಹಿಂದಿನಿಂದ ಪ್ರಚಲಿತದಲ್ಲಿರುವ ವಿಷಯ.
ಮೈಸೂರು ಅರಸರ ಸಂಬಂಧ: ಹಿಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ, ಅವರಿಗೆ ಬೆಳ್ಳಿ ತೊಟ್ಟಿಲು ಬಂದಿತೆಂದೂ, ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರೆಂದೂ ಸ್ಥಳೀಯ ಉಲ್ಲೇಖವಿದೆ ಎನ್ನುತ್ತಾರೆ.
ಬಸ್ಸಿನ ವ್ಯವಸ್ಥೆ: ಚಿತ್ರದುರ್ಗ ದಿಂದ ತಾಳ್ಯ ದವರೆಗೆ ನೇರವಾದ ಬಸ್ ವ್ಯವಸ್ಥೆಯಿದೆ. ತಾಳ್ಯದಿಂದ ‘ಹಾಲುರಾಮೇಶ್ವರ’ ಬಹಳ ಸಮೀಪ. ಶಿವಮೊಗ್ಗ-ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿ ‘ಶಿವಗಂಗ’ಯಲ್ಲಿ ಇಳಿದು, ರಿಕ್ಷಾದಲ್ಲಿ ನೇರವಾಗಿ ಹೋಗಬಹುದು. ಖಾಸಗಿ ವಾಹನಗಳಲ್ಲಿಯೂ ನೂರಾರು ಭಕ್ತರು ಪ್ರತಿದಿನ ಬಂದು ಹೋಗುತ್ತಾರೆ. ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು.