ಹಲೋ ನಮ್ಮ ಪ್ರೀತಿಯ ಓದುಗರೇ, ಖಾಯಿಲೆ ಬಂದ ಸಂದರ್ಭದಲ್ಲಿ ಮಾತ್ರ ಬಳಕೆಯಾಗುವುವು ಔಷಧಿ ಸಸ್ಯಗಳು ಎನ್ನುವುದು ಸಾಧಾರಣವಾದ ನಂಬಿಕೆಯಾದರೂ ಕೂಡ ವಾಸ್ತವ ಚಿತ್ರಣ ಬೇರೆಯೇ ಇದೆ. ಯಾಕೆಂದರೆ ಒಂದು ಖಾಯಿಲೆ, ಇನ್ನೊಂದು ದೇಹಲಸ್ಯ, ಮತ್ತೊಂದು ಅನಾರೋಗ್ಯ ಸ್ಥಿತಿಯಲ್ಲಿ ಮಾತ್ರವೇ ಈ ಔಷಧಿ ಸಸ್ಯಗಳ ಬಳಕೆ ಆಗುವುದಿಲ್ಲ. ಖಾಯಿಲೆ ಬಾರದಂತೆ ತಡೆಯಲು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಋತುಮಾನದ ವೈಪರೀತ್ಯ ಗಳನ್ನು ಎದುರಿಸಲು ದೇಹಕ್ಕೆ ಬೇಕಾದ ಕಸುವು ತುಂಬಲು, ದೇಹಾರೋಗ್ಯವನ್ನು ಪೋಷಿಸುತ್ತಾ ಇತರ ಸಾಂದರ್ಭಿಕ ಆರೈಕೆಯ ಅಗತ್ಯವನ್ನು ಪೂರೈಸಲು ಕೂಡ ಅದೆಷ್ಟೋ ಔಷಧಿ ಸಸ್ಯಗಳು ವರ್ಷದ ಬೇರೆಬೇರೆ ಸಂದರ್ಭದಲ್ಲಿ ಬಳಕೆಯಾಗುತ್ತವೆ. ಹೀಗೆ, ಬಳಕೆಗೆ ಅನುಗುಣವಾಗಿ ಈ ಔಷಧಿ ಸಸ್ಯಗಳನ್ನು ಮೂರು ತೆರನಾಗಿ ವಿಂಗಡಿಸುವುದುಂ ಟು: ಅ) ಖಾಯಿಲೆ ಬಂದಾಗ ಮಾತ್ರ ಬಳಕೆಯಾಗುವ ಔಷಧಿ ಸಸ್ಯಗಳು, ಚಿಕಿತ್ಸಕ ಔಷಧಿಸಸ್ಯಗಳು ಎಂದು ಕರೆಸಿಕೊಳ್ಳುತ್ತವೆ. ಆ) ಖಾಯಿಲೆಯೊಂದು ಕಾಣಿಸಿಕೊಳ್ಳುವ ಮೊದಲೇ ಅದನ್ನು ಎದುರಿಸಲು ಬೇಕಾದ ನಿರೋಧಕ ಶಕ್ತಿಯನ್ನು ಗಳಿಸಲು ಬಳಕೆಯಾಗುವ ಔಷಧಿಸಸ್ಯಗಳು, ರೋಗನಿರೋಧಕ ಔಷಾಧಿಸಸ್ಯಗಳು ಎಂದು ಕರೆಸಿಕೊಳ್ಳುತ್ತವೆ. ಇ) ದೇಹವನ್ನು ಸುಸ್ಥಿತಿಯಲ್ಲಿಡಲು ನಿಯಮಿತ ಅವಧಿಯಲ್ಲಿ ಬಳಕೆಯಾಗುವ ಔಷಧಿಸಸ್ಯಗಳೂ, ಆರೋಗ್ಯವರ್ಧಕ ಔಷಧಿಸಸ್ಯಗಳು ಎಂದು ಕರೆಸಿಕೊಳ್ಳುತ್ತವೆ.

ನಮ್ಮ ಆರೋಗ್ಯ ಪರಂಪರೆಯಲ್ಲಿ ಈ ಮೂರೂ ಬಗೆಯ ಔಷಧಿ ಸಸ್ಯಗಳು ಬೇರೆ ಬೇರೆ ರೂಪದಲ್ಲಿ ಬೇರೆಬೇರೆ ಸಂಧರ್ಬದಲ್ಲಿ ಬೇರೆಬೇರೆ ಕ್ರಮದಲ್ಲಿ ಬಳಕೆ ಆಗುತ್ತವೆ. ಕೆಲವು ಸಾರಿ ಒಂದೇ ಔಷಧಿ ಸಸ್ಯವು ಈ ಮೂರೂ ತರಹದ ಉಪಯೋಗಕ್ಕೆ ಜಮೆಯಾಗಬಹುದು. ಅಥವಾ ಒಂದು ಔಷಧಿ ಸಸ್ಯವು ಯಾವುದೂ ಒಂದು ಉಪಯೋಗಕ್ಕೆ ಮಾತ್ರ ಮೀಸಲಾಗಿರಬಹುದು. ಜ್ವರ ಕಾಣಿಸಿಕೊಂಡಾಗ ಅದನ್ನು ಥಗ್ಗಿಸಲು ಬಳಕೆ ಯಾಗುವ ನೆಲಬೇವಿನ ಕಷಾಯವು ಒಂದು ಚಿಕಿತ್ಸಕ ಔಷಧ; ಜ್ವರವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮಳೆಗಾಲದ ಆರಂಭಕ್ಕೂ ಮೊದಲೇ ಮುನ್ನೆಚ್ಚರಿಕೆಯಾಗಿ ಕುಡಿಯುವ ಮದ್ದಾಲೆ ಕಷಾಯವು ಒಂದು ರೋಗನಿರೋಧಕ ಔಷಧ; ನಿಶ್ಯಕ್ತಿ ಉಂಟಾದಾಗ ಜ್ವರ ಬಂದರೂ ಬರಬಹುದು ಎಂದು ತರ್ಕಿಸಿ ಜ್ವರ ಬರುವುದನ್ನು ತಡೆಯುವ ಸುಲಭೋಪಾಯವಾಗಿ ನಿಶ್ಯಕ್ತಿ ನಿವಾರಣೆಗೆ ಸೇವಿಸುವ ನೆಲ್ಲಿಕಾಯಿ ಲೇಹ್ಯವು ಒಂದು ಆರೋಗ್ಯವರ್ಧಕ ಔಷಧ. ಮೂರು ಬಗೆಯ ಬೇರೆಬೇರೆ ಗುಣಗಳನ್ನು ಹೊತ್ತಿರುವ ಈ ಸಂಜೀವಿನಿ ತ್ರಿಕೂಟ ವನ್ನ ದೇಸೀ ಆರೋಗ್ಯ ಪರಂಪರೆಯು ನಮ್ಮ ಎಂದಿನ ಜೀವನ ಶೈಲಿ ಯ ಬೇರೆಬೇರೆ ಸಂದರ್ಭಗಳ ಲ್ಲಿ ಬೇರೆಬೇರೆ ರೂಪಗಳಲ್ಲಿ ತುಂಬಾ ಜಾಣ್ಮೆಯಿಂದ ಬೆಸೆದುಬಿಟ್ಟಿದೆ.

ದೇಸಿ ಆರೋಗ್ಯ ಪರಂಪರೆಯಲ್ಲಿ ಪ್ರಾಣಿಮೂಲದ ವಸ್ತುಗಳಿಗೂ ಜಾಗವಿದೆ. ಎಲ್ಲರಿಗೂ ಪರಿಚಯವಿರುವ ಹಾಲು ಮತ್ತು ಜೇನುತುಪ್ಪ ಇಲ್ಲಿ ಔಷಧ ದ್ರವ್ಯವಾಗಿ ಅಥವಾ ಮೊದಲೇ ತಯಾರಾಗಿರುವ ಮತ್ತೊಂದು ಔಷಧವನ್ನು ಸೇವನೆಗೆ ಅರ್ಹಗೊಳಿಸಲು ಬಳಸುವ ಹೆಚ್ಚುವರಿ ಸಾಮಗ್ರಿಯಾಗಿ ಬಳಕೆ ಆಗುತ್ತವೆ. ಔಷಧ ಸಾಮಗ್ರಿ ಆಗಿ ಬಳಕೆಯಾಗುವ ಮತ್ತಷ್ಟು ಪ್ರಾಣಿಜನ್ಯ ವಸ್ತುಗಳು: ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ, ಸಗಣಿ, ಕೋಳಿಮೊಟ್ಟೆ, ಉಡದ ಕೊಬ್ಬು, ಪುನುಗು, ನವಿಲುಗರಿ, ಕಪ್ಪೆಚಿಪ್ಪು, ಹವಳ, ಮುತ್ತು, ಮುಳ್ಳುಹಂದಿ ಮುಳ್ಳು, ಪಾರಿವಾಳದ ರಕ್ತ, ಕೊಳಿಹಿಕ್ಕೆ, ಬಾವಲಿ ಮಾಂಸ, ಇತರ ಕೆಲವು ಕಾಡುಪ್ರಾಣಿಗಳ ಮಾಂಸ, ಉಗುರು, ಕೊಂಬು ಇತ್ಯಾದಿ. ಇಡೀ ರೀತಿ ಕೆಲವು ಖನಿಜ ಪದಾರ್ಥಗಳು ಕೂಡ ಬಳಕೆ ಆಗುತ್ತವೆ. ಸುಣ್ಣ, ಮೈಲುತುತ್ತ, ಉಪ್ಪು, ಕಲ್ಲುಪ್ಪು, ನಿಂಬುಪ್ಪು, ಚಿನ್ನ ಹೀಗೆ. ಮದ್ದುಗಳ ವಿಸ್ತಾರ ದೊಡ್ಡದು. ಶುಭದಿನ.

Leave a Reply

Your email address will not be published. Required fields are marked *