ಲಿಂಬು ನೀರು ಹಲವು ರೋಗಗಳಿಗೆ ಮದ್ದು. ಕೆಲವರು ಪ್ರತಿದಿನ ಒಂದು ಲೋಟ ಲಿಂಬು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಲಿಂಬು ನೀರು ಕುಡಿಯುವುದರಿಂದ ದಣಿವು ಹೋಗಿ, ಶಕ್ತಿ ಬರುತ್ತದೆ..ಅದಕ್ಕೂ ಮೀರಿ ಉತ್ಸಾಹ ಮೂಡುತ್ತದೆ ಎಂದೂ ಹೇಳಲಾಗುತ್ತದೆ. ಅದರಲ್ಲೂ ಬೇಸಿಗೆ ಬಂತೆಂದರೆ ಲಿಂಬು ನೀರಿಗೆ ಹೆಚ್ಚಿನ ಪ್ರಾಶಸ್ತ್ಯ. ಈ ಲಿಂಬು ಎಂಬುದು ಎಲ್ಲ ಋತುಮಾನಗಳಲ್ಲೂ ಸಿಗುವ ಹಣ್ಣು.. ಅಪಾರ ಪೋಷಕಾಂಶಗಳನ್ನು ಹೊಂದಿದ್ದು, ವಿಟಮಿನ್, ಖನಿಜಾಂಶ ಹೆಚ್ಚಾಗಿದೆ. ಹೀಗಾಗಿ ಲಿಂಬು ನೀರು ಸೇವನೆಯಿಂದ ಬಹು ಉಪಯೋಗ ಪಡೆಯಬಹುದು. ಜೀರ್ಣಕ್ರಿಯೆ ಮತ್ತು ತೂಕ ಇಳಿಸಿಕೊಳ್ಳಲು ಸಹಕಾರಿ.
ಹಸಿದ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವ ಪದ್ಧತಿ ನಮ್ಮಲ್ಲಿ ಅನಾದಿ ಕಾಲದಿಂದಲೂ ಇದೆ. ಹೀಗೆ ಬರೀ ನೀರು ಕುಡಿಯುವ ಬದಲು ಅದಕ್ಕೆ ಲಿಂಬೆ ರಸ ಬೆರೆಸಿ ಕುಡಿದರೆ ದೇಹಕ್ಕೆ ಇನ್ನಷ್ಟು ಸ್ವಾಸ್ಥ್ಯ ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ಲಿಂಬು ನೀರು ಕುಡಿದಾಗ ಅದು ನಮ್ಮ ದೇಹದೊಳಗೆ ಆಮ್ಲದ ಹಿಮ್ಮುಖ ಹರಿವನ್ನು ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಸರಾಗ ಮಾಡುವುದಲ್ಲದೆ, ಮಲಬದ್ಧತೆಯಾಗದಂತೆ ತಡೆಯುತ್ತದೆ. ದೇಹದೊಳಗಿನ ತ್ಯಾಜ್ಯವನ್ನು ಹೊರಹಾಕಲು ತುಂಬ ಸಹಕಾರಿ. ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಷಕಾರಿ ಅಂಶವನ್ನು ಲಿಂಬು ರಸ ತೊಡೆದುಹಾಕುತ್ತದೆ. ಅಜೀರ್ಣದೊಂದಿಗೆ ಬರುವ ಹೊಟ್ಟೆ ಉಬ್ಬರ, ನೋವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಸರಿ ಮಾಡಿ, ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಈ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಲಿಂಬುನೀರು ಒಂದು ಹಿತವಾದ ಸುವಾಸನೆಯುಳ್ಳ, ತಾಜಾತನ ನೀಡುವ ಪಾನೀಯ ಎಂಬುದರಲ್ಲಿ ಅನುಮಾನವಿಲ್ಲ. ಈ ಪಾನೀಯ ಕುಡಿದರೆ ದೇಹದ ದಣಿವು ನಿವಾರಣೆಯಾಗುವ ಜತೆ, ಮನಸಿಗೂ ಮುದ ಸಿಗುತ್ತದೆ. ಇದರೊಂದಿಗೆ ಚರ್ಮದ ಆರೋಗ್ಯಕ್ಕೂ ತುಂಬ ಸಹಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಬೆಚ್ಚಗಿನ ಲಿಂಬು ನೀರು ಕುಡಿಯುವುದರಿಂದ ದೇಹದೊಳಗಿನ ನಂಜು ಹೊರಹೋಗಿ, ಚರ್ಮದ ಹೊಳಪು ಹೆಚ್ಚುತ್ತದೆ. ಆರೋಗ್ಯಯುತ ಚರ್ಮವನ್ನು ಪಡೆಯಬಹುದು. ಲಿಂಬು ಆ್ಯಂಟಿಆ್ಯಕ್ಸಿಡೆಂಟ್ಸ್, ಪೊಟ್ಯಾಷಿಯಂ, ಫೋಲೇಟ್, ಫ್ಲೇವನಾಯ್ಡ್ಗಳನ್ನು ಒಳಗೊಂಡಿದೆ. ಹಾಗೇ, ವಿಟಮಿನ್ ಬಿ ಕೂಡ ಇದರಲ್ಲಿದೆ. ಈ ಅಂಶಗಳು ನಮ್ಮ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡದಿಂದ ಉಂಟಾದ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತವೆ. ಇನ್ನು ಲಿಂಬುವಿನಲ್ಲಿರುವ ವಿಟಮಿನ್ ಸಿ ಆಹಾರದಲ್ಲಿರುವ ಕಬ್ಬಿಣದ ಅಂಶಗಳನ್ನು ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆಯಿಂದ ಪಾರಾಗಬಹುದು.