ಹಾಲು ಒಂದು ಪೌಷ್ಟಿಕ ಆಹಾರವಾಗಿದ್ದು ಅದು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಅಧಿಕವಾಗಿದೆ, ಇದು ಆರೋಗ್ಯಕರ ಮೂಳೆಗಳು, ಜೀವಕೋಶದ ಕಾರ್ಯ, ಸ್ನಾಯುಗಳ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಆರೋಗ್ಯ ತಜ್ಞರು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಹಾಲು ಕುಡಿಯುವಂತೆ ಶಿಫಾರಸು ಮಾಡುತ್ತಾರೆ. ಹಾಲನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ, ಕೆಲವರು ನೇರವಾಗಿ ಸೇವಿಸಿದರೆ, ಇನ್ನೂ ಕೆಲವರು ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ. ಆದರೆ, ಈ ಸೂಪರ್‌ಫುಡ್‌ನ ಪ್ರಯೋಜನವನ್ನು ಪಡೆಯುವ ಸರಿಯಾದ ಮಾರ್ಗ ಯಾವುದು ಎಂದು ನಿಮಗೆ ತಿಳಿದಿದೆಯೇ.
ಸಾಮಾನ್ಯವಾಗಿ ಬಹುತೇಕ ಮಂದಿ ಕಚ್ಚಾ ಹಾಲಿನ ಸೇವನೆ ಹೆಚ್ಚು ಪ್ರಯೋಜನಕಾರಿ ಎಂದು ವಾದಿಸುತ್ತಾರೆ. ಪಾಶ್ಚರೀಕರಿಸಿದ ಹಾಲಿಗಿಂತ ಹೆಚ್ಚು ಅಮೈನೋ ಆಮ್ಲಗಳು, ಆಂಟಿಮೈಕ್ರೊಬಿಯಲ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಸಂಪೂರ್ಣ ನೈಸರ್ಗಿಕ ಆಹಾರವಾಗಿದೆ ಎಂದು ವಾದಿಸುತ್ತಾರೆ. ಅಲ್ಲದೆ, ಪಾಶ್ಚರೀಕರಣದ ಸಮಯದಲ್ಲಿ ಬಿಸಿ ಮಾಡುವ ಪ್ರಕ್ರಿಯೆಯು ಹಾಲಿನ ಒಟ್ಟಾರೆ ಪೋಷಣೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಆರೋಗ್ಯಕ್ಕೆ ಹಸಿ ಹಾಲು ಉತ್ತಮವೇ ಅಥವಾ ಕಾಯಿಸಿ ಕುಡಿದ ಹಾಲು ಪ್ರಯೋಜನಕಾರಿಯೇ? ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ಸೂಪರ್ ಡ್ರಿಂಕ್ ಅನ್ನು ಹೇಗೆ ಕುಡಿಯಬೇಕು ಎಂದು ತಿಳಿಯೋಣ. ಕೆಲವರು ಹಸಿ ಹಾಲನ್ನು ಕುಡಿಯಲು ಇಷ್ಟ ಪಡುತ್ತಾರೆ. ಆದರೆ, ಹಸಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾವು ನಮ್ಮ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ, ಇದು ಅತಿಸಾರ, ಸಂಧಿವಾತ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ವೈದ್ಯರು ಹಸಿ ಹಾಲಿನ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ಹೌದು, ಹಸಿ ಹಾಲು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ ಎಂಬುದು ಕೆಲವು ಸಂಶೋಧನೆಗಳಿಂದ ದೃಢಪಟ್ಟಿದೆ. ಅಮೆರಿಕದ ಆರೋಗ್ಯ ಸಂರಕ್ಷಣಾ ಸಂಸ್ಥೆಯ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಹಸಿ ಹಾಲು ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳಾದ ಎಸ್ಚೆರಿಚಿಯಾ ಕೋಲಾ ಮತ್ತು ಲಿಸ್ಟೇರಿಯಾ, ಸಾಲ್ಮೊನೆಲ್ಲಾ ಇತ್ಯಾದಿಗಳನ್ನು ಹೊಂದಿರುತ್ತದೆ. ಹಸಿ ಹಾಲು ಕುಡಿಯುವ ಯಾವುದೇ ವ್ಯಕ್ತಿಯು ವಿಷಪೂರಿತ ಆಹಾರದ ಬಗ್ಗೆ ದೂರು ನೀಡಬಹುದು ಎನ್ನಲಾಗಿದೆ. ಹಸಿ ಹಾಲು ಕುಡಿಯುವುದು ಹಾನಿಕಾರಕ. ಏಕೆಂದರೆ ಪ್ರಾಣಿಗಳ ಹಾಲನ್ನು ತೆಗೆದಾಗ ಕೆಚ್ಚಲು ಕಲುಷಿತವಾಗಬಹುದು, ಇದನ್ನು ಹೊರತುಪಡಿಸಿ ಶುದ್ಧ ಕೈ ಮತ್ತು ಶುದ್ಧ ಪಾತ್ರೆಗಳನ್ನು ಬಳಸದಿದ್ದರೂ ಸಹ ಹಾಲು ಕೊಳಕಾಗುವ ಸಾಧ್ಯತೆ ಇದೆ. ಹಸಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು , ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ವಯಸ್ಕರಿಗೆ ಅಪಾಯಕಾರಿ ಎನ್ನಲಾಗುತ್ತದೆ. ಅದಕ್ಕಾಗಿಯೇ ಹಾಲನ್ನು ಕುದಿಸಿದ ನಂತರ ಕುಡಿಯುವುದು ಅವಶ್ಯಕ, ಇದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಜೊತೆಗೆ ಈ ಪರಿಪೂರ್ಣ ಆಹಾರದ ಉತ್ತಮ ಫಲಿತಾಂಶಗಳು ಲಭ್ಯವಾಗುತ್ತವೆ ಎಂದು ಹೇಳಲಾಗುತ್ತದೆ.