ನಮ್ಮ ದೇಶದಲ್ಲಿ ಮೊದಲಿಂದಲೂ ಆಯುರ್ವೇದ ಬಳಕೆಯಲ್ಲಿದೆ. ಇಂತಹ ಸಮಸ್ಯೆಗಳಿಗೂ ಗಿಡ ಮೂಲಿಕೆಗಳಲ್ಲಿ ಔಷಧಿಯನ್ನು ನೀಡುತ್ತಾ ರೋಗಗಳನ್ನು ಗುಣಪಡಿಸುತ್ತಿದ್ದರು. ಆದರೆ ಈಗಲೂ ಇದರಿಂದ ಹೊರತಾಗೇನು ಇಲ್ಲ. ಸಾಮಾನ್ಯವಾಗಿ ಈ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು, ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ, ಇದು ಮೂಲಿಕೆ ಯಾಗಿದ್ದು ಮರಕ್ಕೆ ಸುತ್ತಿಕೊಂಡು ಬೆಳೆಯುತ್ತದೆ. ಇದು ಕಪ್ಪು ಬಳ್ಳಿಯಾಗಿದ್ದು ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ. ಈ ಈಶ್ವರ ಬಳ್ಳಿಯು ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲಿ ಕಂಡುಬರುತ್ತದೆ.
ಹಾವಿನ ವಿಷ, ಸರ್ಪದ ವಿಷದ ನಿವಾರಣೆಗೆ : ಸರ್ಪದ ವಿಷ ನಿವಾರಣೆಗೆ ಇದರ ಎಲೆಯ ಕಷಾಯ ಮಾಡಿ ಸೇವಿಸುತ್ತಾರೆ. ಹಾವಿನ ವಿಷ ನಿವಾರಣೆಗೆ 2ಗ್ರಾಂ ಇದರ ಹಸಿ ಎಲೆಗಳು, 2ಗ್ರಾಂ ಮೆಣಸು ನುಣ್ಣಗೆ ಅರೆದು ಗಾಯದ ಮೇಲೆ ಮಂದವಾಗಿ ಲೇಪಿಸುತ್ತಾರೆ.
ದೃಷ್ಟಿ ದೋಷ ನಿವಾರಣೆಗೆ : ಇದರ ಬೇರಿನ ನಯವಾದ ಚೂರ್ಣಮಾಡಿ, ಸ್ವಲ್ಪ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಜ್ವರ ಮತ್ತು ಕೆಮ್ಮು ನಿವಾರಣೆಗೆ : ಈಶ್ವರಬಳ್ಳಿಯ ಬೇರನ್ನು ನಯವಾದ ಚೂರ್ಣ ಮಾಡಿ, ೧/೪ ರಷ್ಟು ಟೀ ಚಮಚ ಚೂರ್ಣವನ್ನು ನೀರಿನಲ್ಲಿ ನೆನೆ ಹಾಕಿ ಕಷಾಯಮಾಡಿ ಶೋಧಿಸಿ ೩-೪ ಟೀ ಚಮಚದಷ್ಟು ದಿವಸಕ್ಕೆ ಎರಡು ಸೇವಿಸಿದರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆಗೆ : ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ಚೂರ್ಣಿಸಿ, ಈ ನಯವಾದ ಚೂರ್ಣವನ್ನು ೨ ರಿಂದ ೨.೫ ಗ್ರಾಂ ಸೇವಿಸಿದ ಮೇಲೆ ಬಿಸಿನೀರು ಕುಡಿಯುವುದು.
ವಿಷಮ ಜ್ವರ, ಸನ್ನಿ ಜ್ವರದ ನಿವಾರಣೆಗೆ : ಶುದ್ಧವಾದ ೧/೨ ಲೀಟರ್ ತಣ್ಣೀರಿನಲ್ಲಿ ೧೫ಗ್ರಾಂ ಈಶ್ವರಿಬೇರು ಜಜ್ಜಿ ಹಾಕಿ ನೆನೆಸಿಡುವುದು. ತಿಳಿಯಾದ ನೀರನ್ನು ಶೋಧಿಸಿ, ಒಂದೆರಡು ಟೀ ಚಮಚ ದಿವಸಕ್ಕೆ ೪-೫ ಬಾರಿ ಸೇವಿಸಿದರೆ ವಿಷಮ ಜ್ವರ ಗುಣಮುಖವಾಗುತ್ತದೆ.
ಮುಟ್ಟಿನ ದೋಷ ನಿವಾರಣೆಗೆ : ಇದರ ಬೇರಿನ ನಯವಾದ ಚೂರ್ಣಮಾಡಿ, ಕಡಿಮೆ ಪ್ರಮಾಣದಲ್ಲಿ ಬೆಲ್ಲ ಅಥವಾ ನಿಂಬೆರಸದ ಅನುಪಾನದೊಂದಿಗೆ ಸೇವಿಸಿದರೆ ಮುಟ್ಟಿನ ದೋಷ ನಿವಾರಣೆಯಾಗುತ್ತದೆ.