ಈ ಆಡುಮುಟ್ಟದ ಸೊಪ್ಪು ತುಂಬ ಸಹಕಾರಿ ಮತ್ತು ಇದರ ಉಪಯೋಗಗಳು ಹಲವು. ನೋಡಿ ಇಲ್ಲಿದೆ ಆಡುಮುಟ್ಟದ ಸೊಪ್ಪಿನ ಉಪಯೋಗಗಳು. ಆಡುಮುಟ್ಟದ ಬಳ್ಳಿಯ ಬೇರು ೧ ತೊಲ ಮತ್ತು ಎಲೆ ೧ ತೊಲದಷ್ಟನ್ನು ಹಾಲಿನೊಡನೆ ಅರೆದು ಮದ್ದೀಡಾದವರಿಗೆ ಕೈಮಸುಕಿನ ವಿಷಕ್ಕೆ ಒಳಗಾದವರಿಗೆ ಕುಡಿಸಿದರೆ ವಾಂತಿಯಾಗಿ ಮದ್ದು ಹೊರಬಂದು ಆರೋಗ್ಯವಂತರಾಗುತ್ತಾರೆ. ಪಥ ಮಜ್ಜಿಗೆ ಅನ್ನ.

ಕೆಮ್ಮು: ಸುಮಾರು 5ಗ್ರಾಂ ಆಡುಸೋಗೆ, 5ಗ್ರಾಂ ಹಸಿರು ಅಮೃತಬಳ್ಳಿಯ ಕಷಾಯ ಮಾಡಿ ಆರಿಸಿ ಶೋಧಿಸಿಟ್ಟುಕೊಳ್ಳುವುದು. ಇದನ್ನು ದಿವಸಕ್ಕೆರಡು ಬಾರಿ 10 ಗ್ರಾಂ ನಷ್ಟು ಶುದ್ಧ ಜೇನಿನಲ್ಲಿ ಕುಡಿಸುವುದು. ಇದು ಒಂದು ಉಪಯುಕ್ತವಾದ ವನೌಷಧಿ. ಮಕ್ಕಳಿಗಾದರೆ ಆಡುಸೋಗೆ ಎಲೆಗಳ 5ಗ್ರಾಂ ರಸವನ್ನು ಸ್ವಲ್ಪ ಜೇನಿನಲ್ಲಿ ಸೇರಿಸಿ, ಸ್ವಲ್ಪ ಬಿಸಿಮಾಡಿ ದಿವಸಕ್ಕೆ 4 ರಿಂದ 5 ಬಾರಿ ಕುಡಿಸುವುದು.

ಅಸ್ತಮ, ಗೂರಲು: ಜ್ಯೇಷ್ಠಮಧು 10ಗ್ರಾಂ, ಹಿಪ್ಪಲಿ 20ಗ್ರಾಂ ಹಾಗೂ 5 ಗ್ರಾಂ ಆಡುಸೋಗೆ ಎಲೆಗಳನ್ನು ಚೆನ್ನಾಗಿ ಅರೆದು ಅಷ್ಟಾಂಶ ಕಷಾಯವನ್ನು ಮಾಡಿ ದಿವಸಕ್ಕೆ ಮೂರು ಬಾರಿ ಸ್ವಲ್ಪ ಜೇನು ಸೇರಿಸಿ ಕುಡಿಯುವುದು. ಅಥವಾ ಆಡುಸೋಗೆ ಎಲೆಯ ರಸ ಮತ್ತು ಸಮಭಾಗ ಸಕ್ಕರೆ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ರಾತ್ರಿ ನೆಕ್ಕಿಸುವುದು. ಅಥವಾ 10-12 ಆಡುಸೋಗೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಸುವುದು.

ರಕ್ತಕಾಸ: ಆಡುಸೋಗೆ ಎಲೆ ಮತ್ತು ಹಿಪ್ಪಲಿ ಚೂರ್ಣ ಸೇರಿಸಿ ಮಾಡಿದ ಕಷಾಯವನ್ನು ಪ್ರತಿ ದಿವಸ ಬೆಳಿಗ್ಗೆ ಮತ್ತು ಸಂಜೆ ಕುಡಿಸುವುದು. ಪ್ರಮಾಣ ಎರಡು ಟೀ ಚಮಚ ಅಥವಾ ಆಡುಸೋಗೆ ಮತ್ತು ಕೊತ್ತಂಬರಿ ಬೀಜ ನುಣ್ಣಗೆ ರುಬ್ಬಿ ಕಷಾಯವನ್ನು ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಸ್ವಲ್ಪ ಕುಡಿಸುವುದು.

ಮೂತ್ರಾಶಯದ ಭಾದೆ, ನೋವು: 20ಗ್ರಾಂ ಆಡುಸೋಗ ಎಲೆಗಲ ರಸಕ್ಕೆ 20ಗ್ರಾಂ ಜೇನು ತುಪ್ಪವನ್ನು ಸೇರಿಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಹಾಗೂ ಬೇವಿನ ಎಲೆ ಮತ್ತು ಆಡುಸೋಗೆ ಎಲೆಗಳನ್ನು ಜಜ್ಜಿ ಸ್ವಲ್ಪ ಬಿಸಿ ಮಾಡಿ ಕಿಬ್ಬೊಟ್ಟೆಗೆ ಕಟ್ಟುವುದು ಅಥಾವ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡುವುದು ಇದರಿಂದ ಮೂತ್ರಾಶಯದ ನೋವು ನಿಲ್ಲುವುದು.

ಹಳುಕಡ್ಡಿ, ತುರಿ, ನವೆ: ಆಡುಸೋಗೆಯ ಚಿಗುರೆಲೆಗಳ ಜೊತೆಗೆ ಸ್ಪಲ್ಪ ಅರಿಷಿಣ ಸೇರಿಸಿ ಗೋಮೂತ್ರದಲ್ಲಿ ನುಣ್ಣಗೆ ಅರೆದು ಲೇಪಿಸುವುದು. ಎಣ್ಣೆ ಪದಾರ್ಥಗಳನ್ನು ವರ್ಜಿಸುವುದು. ಸೋಪನ್ನು ಬಳಸದೆ ಶೀಗೆಕಾಯಿ ಹಚ್ಚಿ ಸ್ನಾನ ಮಾಡುವುದು.

ರಕ್ತಪಿತ್ತ: ಶರೀರದ ಯಾವುದೇ ಭಾಗದಿಂದ ವಿನಾಕಾರಣ ರಕ್ತ ಬೀಳುವ ಕಾಯಿಲೆ ಅಂದರೆ ಕಿವಿ, ಕಣ್ಣು, ಮೂಗು, ಬಾಯಿ, ಮಲದ್ವಾರ ಹಾಗೂ ದೇಹದ ಒಳಗಡೆ ಅಂದರೆ ಕರಳು ಜಠರ ಇವುಗಳಿಂದ ರಕ್ತ ಬೀಳುವುದು. ಆಡುಸೋಗೆ ಹಸಿ ಎಲೆರಸ ಸುಮಾರು 15 ಗ್ರಾಂನಷ್ಟುನ್ನು ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆರಡು ವೇಳೆ ಐದು ದಿವಸ ಕುಡಿಸುವುದು ಅಥವಾ ಪರ್ಪಾಷ್ಠಕ ಆಡುಸೋಗೆ ಸೊಪ್ಪು, ಕೊತ್ತಂಬರಿ, ಒಣಗಿದ ದ್ರಾಕ್ಷಿ ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಕಿವುಚಿ 30 ಗ್ರಾಂ ನಷ್ಷು ಕುಡಿಯುವುದು. ದಿನಕ್ಕೆ ಮೂರುಬಾರಿ ಬಳಸುವುದು ಅಥವಾ ಮೇಲಿನ ವಸ್ತುಗಳ ನಯವಾದ ಚೂರ್ಣ ಮಾಡಿ ಒಂದು ಟೀ ಚಮಚದಷ್ಟು ಚೂರ್ಣವನ್ನು ಒಂದು ಬಟ್ಟಲು ಶುದ್ಧವಾದ ತಣ್ಣೀರಿನಲ್ಲಿ ರಾತ್ರಿ ಹಾಕಿ ಬೆಳಿಗ್ಗೆ ಈ ನೀರನ್ನು ಕುಡಿಯುವುದು.

ಕಫದ ಕೆಮ್ಮು, ಜ್ವರ, ಉಬ್ಬಸ: ಅಮೃತಬಳ್ಳಿ ಗುಳ್ಳದ ಬೇರು ಮತ್ತು ಆಡುಸೋಗೆ ಬೇರು ಇವುಗಳ 30 ಗ್ರಾಂ ಗಳಷ್ಟು ಕಷಾಯವನ್ನು ಮಾಡುವುದು, ಕಷಾಯವನ್ನು ಎರಡು ಭಾಗ ಮಾಡಿ, ಬೆಳಿಗ್ಗೆ ಸಾಯಂಕಾಲ ಕುಡಿಸುವುದು. ಈ ಮೂಲಿಕೆಗೆ ಶ್ವಾಸಕೋಶಗಳ ಬಾಧೆ ನೀಗಿ ಕೆಮ್ಮು, ದಮ್ಮು, ಉಬ್ಬಸ, ಗೂರಲು ವಾಸಿ ಮಾಡುವ ಮಹಾ ಗುಣವಿದೆ. ಶ್ವಾಶಕೋಶ ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಿ ಹೊರ ಹಾಕಿ ರಕ್ತ ಸುದ್ಧ ಮಾಡಿ ಜ್ವರವನ್ನು ತಗ್ಗಿಸಿ ರಕ್ತ ಉಗುಳುವ ವ್ಯಾಧಿಯನ್ನು ವಾಸಿ ಮಾಡುವ ಅಪೂರ್ವ ಶಕ್ತಿ ಇದೆ.

Leave a Reply

Your email address will not be published. Required fields are marked *