ಹುಳುಕಡ್ಡಿ ಸಮಸ್ಯೆ ಅನ್ನುವುದು ಒಂದು ಗಂಭೀರ ಸಮಸ್ಯೆ ಅಲ್ಲದಿದ್ದರೂ, ಹುಳುಕಡ್ಡಿಯಿಂದ ಜಾಸ್ತಿ ಕಿರಿ ಕಿರಿಯನ್ನು ಅನುಭವಿಸುತ್ತೇವೆ ಆದ್ದರಿಂದ ಇದು ಹೇಗೆ ಬರುತ್ತದೆ ಮತ್ತು ಇದಕ್ಕೆ ಪರಿಹಾರವೇನು ಎನ್ನುವುದು ಇಲ್ಲಿದೆ ನೋಡಿ.
ಹೇಗೆ ಬರುತ್ತದೆ: ನಮ್ಮ ದೇಹದಲ್ಲಿ ಕೆಲವು ರೀತಿಯ ಶಿಲಿಂದ್ರಗಳ ಬೆಳವಣಿಗೆಯಿಂದ ಹುಳುಕಡ್ಡಿ ಸಮಸ್ಯೆ ಬರುತ್ತದೆ. ಇಂತಹ ಶಿಲೀಂಧ್ರಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯು ಕುಂಠಿತಗೊಂಡಾಗ ಅವಕಾಶವಾದಿ ಸೋಂಕುಗಳಿಗೆ ಎಡೆ ಮಾಡಿಕೊಡಬಹುದು. ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಅಂಶವು ಹೆಚ್ಚಾದಾಗಲೂ ಈ ಸೋಂಕು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ದೀರ್ಘಕಾಲದ ಆ್ಯಂಟಿಬಯಾಟಿಕ್ ಅಥವಾ ಸ್ಟಿರಾಯ್ಡ್ ಬಳಕೆಯೂ ಶಿಲೀಂಧ್ರದ ಸೋಂಕಿಗೆ ಕಾರಣವಾಗಬಹುದು.
ಹುಳುಕಡ್ಡಿಯಿಂದಾಗುವ ಸಮಸ್ಯೆಗಳು: ದೇಹದ ಯಾವುದೇ ಭಾಗದ ಚರ್ಮದ ಮೇಲೆ ಮುಖ್ಯವಾಗಿ ಕುತ್ತಿಗೆ, ಭುಜ, ಬೆನ್ನು, ಕೈ, ಮುಖದ ಮೇಲೆ ದುಂಡು ದುಂಡಾಗಿನ ಅಥವಾ ನಿರ್ದಿಷ್ಟ ಆಕಾರವಿಲ್ಲದ ಬಿಳಿ, ಕೆಂಪು, ಕಂದು, ಕಪ್ಪುಬಣ್ಣದ ಮಚ್ಚೆಗಳ ರೂಪದಲ್ಲಿ ಇದು ಕಾಣಿಸಿಕೊಳ್ಳುತ್ತದೆ, ಇದರಿಂದ ಕೆಲವೊಮ್ಮೆ ಉರಿ ಅಥವಾ ತುರಿಕೆಯೂ ಬರಬಹುದು.
ತೊಡೆಗಳ ಸಂಧಿ, ಕಂಕುಳು, ಕೈ–ಕಾಲಿನ ಬೆರಳುಗಳ ಸಂಧಿ, ಮಹಿಳೆಯರಲ್ಲಿ ಸ್ತನಗಳ ಕೆಳಭಾಗದಲ್ಲಿ, ಮಹಿಳೆಯರು ಒಳಲಂಗಗಳನ್ನು ಕಟ್ಟುವ ಸೊಂಟದ ಭಾಗದಲ್ಲಿ ಚರ್ಮವು ಕೆಂಪು, ಕಪ್ಪು, ಕಂದುಬಣ್ಣಕ್ಕೆ ತಿರುಗುವುದು, ಉರಿ ಅಥವಾ ತುರಿಕೆ ಬರುವುದು.
ಹುಳುಕಡ್ಡಿಯಿಂದ ಕೈ ಕಾಲುಗಳ ಉಗುರು ಕಪ್ಪು ಅಥವಾ ಕಂದುಬಣ್ಣಕ್ಕೆ ತಿರುಗುವುದು. ಹಾಲು ಕುಡಿಯುವ ಎಳೆಯ ಮಕ್ಕಳಲ್ಲಿ ನಾಲಿಗೆಯ ಮೇಲೆ, ಬಾಯಿಯ ಒಳಭಾಗದಲ್ಲಿ ಮೊಸರಿನಂತಹ ಬಿಳಿಬಣ್ಣದ ಲೇಪನ ಕಂಡು ಬರಬಹುದು.
ಬರದಂತೆ ತಡೆಯವುದು ಹೇಗೆ: ಸ್ನಾನವಾದ ಮೇಲೆ ಚರ್ಮದ ಯಾವುದೇ ಭಾಗದಲ್ಲಿಯೂ ತೇವಾಂಶವಿರದಂತೆ ಒಣ ಬಟ್ಟೆ ಟವೆಲ್ ಯಿಂದ ಒರೆಸಿಕೊಳ್ಳಿ. ಏಕೆಂದರೆ ತೇವಾಂಶವಿರುವಲ್ಲಿ ಶಿಲೀಂಧ್ರ ಬಹು ಬೇಗ ಮನ ಮಾಡಿಕೊಂಡು ಬರುವ ಸಂಭವವಿರುತ್ತದೆ. ಆದ್ದರಿಂದ ಬರದಂತೆ ತಡೆಯಬವುದಾಗಿದೆ.
ನೀವು ಪ್ರತಿ ನಿತ್ಯವೂ ಸ್ವಚ್ಛಗೊಳಿಸಿರುವ ಟವೆಲ್, ಕಾಲುಚೀಲ ಮತ್ತು ಕರವಸ್ತ್ರಗಳನ್ನೇ ಬಳಸುವುದರಿಂದ ತಡೆಯಬುದು. ಚೆನ್ನಾಗಿ ಒಣಗಿರುವ ತೇವಾಂಶವಿಲ್ಲದ ಒಳ ಉಡುಪುಗಳನ್ನೇ ಧರಿಸುವುದು ಒಳ್ಳೆಯದು. ಅತಿ ಬಿಗಿಯಾದ ಒಳ ಉಡುಪುಗಳ ಬಳಕೆ ಮಾಡದಿರುವುದು ಸೂಕ್ತ.
ಹಾಲು ಕುಡಿಯುವ ಎಳೆಯ ಮಕ್ಕಳಿಗೆ ದಿನವೂ ಸ್ನಾನ ಮಾಡಿಸುವಾಗ, ನಾಲಿಗೆ ಮತ್ತು ಬಾಯಿಯನ್ನು ಸ್ವಚ್ಛಗೊಳಿಸಿ. ಮಧುಮೇಹಿಗಳು ನಿಯಮಿತವಾಗಿ ತಮ್ಮ ರಕ್ತದ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸೂಕ್ತ. ನೀವು ದೀರ್ಘಕಾಲದ ಆ್ಯಂಟಿಬಯಾಟಿಕ್ ಅಥವಾ ಸ್ಟಿರಾಯ್ಡ್ ಬಳಕೆಯ ಮೊದಲು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಿರಿ.
ಮೇಲೆ ಹೇಳಿದ ಗುಣಲಕ್ಷಣಗಳು ಕಂಡಾಗ ಸ್ವಯಂ ಚಿಕಿತ್ಸೆ ಮಾಡದೆ, ನಿಮ್ಮ ಹತ್ತಿರದ ಚರ್ಮರೋಗತಜ್ಞರಿಂದ ಸೂಕ್ತ ಸಲಹೆಯನ್ನು ಪಡೆಯುವುದು ಒಳಿತು.