WhatsApp Group Join Now

17 ವರ್ಷಗಳ ಕಾಲ ಭಾರತಾಂಬೆ ಸೇವೆಮಾಡಿ ಈಗ ಭೂತಾಯಿ ಸೇವೆ ಮಾಡುವ ಮೂಲಕ ನಿವೃತ್ತ ಸೈನಿಕರೊಬ್ಬರು ಮಾದರಿ ಕೃಷಿಕರಾಗಿದ್ದಾರೆ. ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬುದನ್ನ ಅರಿತ ಮಾಜಿ ಸೈನಿಕರೊಬ್ಬರು ಸೈನಿಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.

ಸಾವಯವ ಕೃಷಿ, ಮೀನುಗಾರಿಕೆ ಹೈನುಗಾರಿಕೆಯಲ್ಲೂ ಹಸನಾದ ಬದುಕನ್ನು ಸಾಗಿಸುತ್ತಿರುವ ಗದಗ ಜಿಲ್ಲೆಯ ಫಕೀರಪ್ಪ ಆಲೂರ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ. ಫಕೀರಪ್ಪ ಆಲೂರ ಅವರು ಮೂಲತಃ ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದ ನಿವಾಸಿಯಾಗಿದ್ದು, ಕೃಷಿ ಕುಟುಂಬದಲ್ಲಿ ಜನಿಸಿದ ಫಕ್ಕಿರಪ್ಪ 17 ವರ್ಷಗಳ ಕಾಲ ಬಿಎಸ್‍ಎಫ್‍ನಲ್ಲಿ ಆರ್ಮಿಕೋರ್ ಸಪ್ಲೈಯರ್ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ನಂತರ ಸರ್ಕಾರಿ ಕೋಟಾದಲ್ಲಿ ಬೇರೊಂದು ಕೆಲಸಕ್ಕೆ ಕೈಹಾಕದೇ ಗಜೇಂದ್ರಗಡ ತಾಲೂಕಿನ ನರೇಗಲ್ ಬಳಿ 5 ಎಕರೆ ಜಮೀನು ಖರೀದಿಸಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ನಂತರ ಪಕ್ಕದ 10 ಎಕರೆ ಜಮೀನು ಲೀಸ್ ಪಡೆದುಕೊಂಡು ಕೃಷಿಯಲ್ಲಿ ಖುಷಿಕಾಣುತ್ತಿದ್ದಾರೆ.

ಕೈಲಾಗದು ಎಂದು ಕೈಕಟ್ಟಿ ಕೂರದೇ ಬಂಜರು ಭೂಮಿಯಲ್ಲಿ ಉಳುಮೆ ಮಾಡುವ ಮೂಲಕ ಕೃಷಿನಲ್ಲೂ ಸೈ ಎನಿಸಿಕೊಂಡಿದ್ದಾರೆ. ನಮ್ಮ ಜಮೀನಿನಲ್ಲಿ ಕೃಷಿಹೊಂಡ ಮಾಡಿ ಅದರಲ್ಲಿ 4 ಸಾವಿರ ಮೀನು ಸಾಕಾಣಿಕೆ ಮೂಲಕ ಮೀನುಗಾರಿಕೆ ಮಾಡಿದ್ದಾರೆ. 40ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕುವ ಮೂಲಕ ಹೈನುಗಾರಿಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಹೈನುಗಾರಿಕೆ, ತೋಟಗಾರಿಕೆ ಸೇರಿದಂತೆ ಅನೇಕ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಒಟ್ಟು 15 ಎಕರೆ ಜಮೀನಿನಲ್ಲಿ 10 ಎಕರೆ ಕಬ್ಬು, ಎರಡು ಎಕರೆ ವಾಣಿಜ್ಯ ಬೆಳೆಗಳಾದ ಮೆಣಸಿನಕಾಯಿ, ಗೋವಿನ ಜೋಳ, ಹತ್ತಿ, ಸೂರ್ಯಕಾರ್ತಿ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಬರಗಾಲವಾದರೂ ಈ ಎಲ್ಲಾ ಮೂಲಗಳಿಂದ ಪ್ರತಿವರ್ಷ ಲಕ್ಷಾಂತರ ರೂಪಾಯಿ ಆದಾಯ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಆರ್ಮಿನೌಕರಿ ಮುಗಿಸಿ ಬೇರೊಂದು ನೌಕರಿಯತ್ತ ಮುಖ ಮಾಡದೇ ಕೃಷಿಯಲ್ಲಿ ಖುಷಿ ಕಾಣುತ್ತಿರೋದು ಇತರರಿಗೂ ಮಾದರಿಯಾಗಿದೆ.

ಜೈ ಜವಾನ್ ಜೈಕಿಸಾನ್ ಎಂಬುದನ್ನ ಈ ಮಾಜಿ ಸೈನಿಕ ಮತ್ತೊಮ್ಮೆ ಸಾರಲು ಹೊರಟಿದ್ದಾರೆ. 17 ವರ್ಷ ಭಾರತಾಂಬೆ ಸೇವೆ ಸಲ್ಲಿಸಿ ತನಗೆ ಬರುವ ಪೆನ್ಷನ್‍ನಲ್ಲಿ ಟೆನ್ಷನ್ ಇಲ್ಲದೇ ಈಗ ಭೂತಾಯಿ ಸೇವೆ ಸಲ್ಲಿಸುತ್ತಿರುವ ಫಕ್ಕಿರಪ್ಪ ಆಲೂರ ಕಾರ್ಯ ನಿಜಕ್ಕೂ ಶ್ಲಾಘನೀಯ.

WhatsApp Group Join Now

Leave a Reply

Your email address will not be published. Required fields are marked *