ಜಾಜಿಮಲ್ಲಿಗೆ ಎಂದ ಕೂಡಲೇ ಮಹಿಳೆಯರ ಮನಸ್ಸು ಮುದಗೊಳ್ಳುವುದು. ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿ ಮನಮೋಹಕವಾಗಿರುತ್ತದೆ. ಜಾಜಿ ಮಲ್ಲಿಗೆ ಬಳ್ಳಿಯ ಹೂವು. ಈ ಹೂವನ್ನು ಮನೆ ಅಂಗಳಗಳಲ್ಲಿ ಹಾಗೂ ತೋಟಗಳಲ್ಲಿ ಸುಲಭವಾಗಿ ಬೆಳೆಯಬಲ್ಲದು. ಇದನ್ನು ಸುವಾಸನೆಯುಕ್ತ ಹೂಗಳಿಗೆ ಹಾಗೂ ಸುಗಂಧದ ಎಣ್ಣೆಯ ಸಲುವಾಗಿ ಬೆಳೆಯುತ್ತಾರೆ. ವಿಶ್ವ ಪ್ರಸಿದ್ಧ ಜಾಸ್ಮಿನ್ ತೈಲವನ್ನು ಜಾಜಿ ಮಲ್ಲಿಗೆಯಿಂದ ತಯಾರಿಸುತ್ತಾರೆ. ಜಾಜಿ ಮಲ್ಲಿಗೆಯಲ್ಲಿ ಸಮಗ್ರ ಗಿಡ ಅಂದರೆ ಎಲೆ, ಹೂ, ಬೇರು, ಕಾಂಡ ಎಲ್ಲವು ಉಪಯುಕ್ತ ಗುಣ ಹೊಂದಿವೆ.
ಮಗುವಿಗೆ ಹಾಲುಣಿಸುವುದನ್ನು ಬಿಡಿಸಬೇಕೆಂಬ ಇಚ್ಛೆಯುಳ್ಳ ಸ್ತ್ರೀಯರು ಜಾಜಿ ಮಲ್ಲಿಗೆ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬೇಕು ಇಲ್ಲವೇ ಹೂಗಳನ್ನು ತೆಳುವಾದ ಬಟ್ಟೆಯಲ್ಲಿ ಹರಡಿ ಅದನ್ನು ಎದೆಗೆ ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಕಜ್ಜಿ ತುರಿಗಳಾಗಿರುವಾಗ ಜಾಜಿ ಮಲ್ಲಿಗೆ ಹೂವನ್ನು ಹಾಕಿ ತಯಾರಿಸಿದ ಎಣೆಯನ್ನು ಹಚ್ಚಬೇಕು.
ಬಾಯಿ ಹಣ್ಣಿನ ತೊಂದರೆಯಿಂದ ಬಳಲುವವರು ಜಾಜಿ ಹೂವಿನ ಬಳ್ಳಿಯ ಎಲೆಗಳನ್ನು ಅಗಿದು ತಿನ್ನಬೇಕು. ತಲೆಯಲ್ಲಿ ಹುಳಕಡ್ಡಿಯಾಗಿ ನಾಣ್ಯಾದಾಕಾರದಲ್ಲಿ ಕೂದಲು ಉದುರುತ್ತಿದ್ದರೆ ಜಾಜಿ ಎಲೆಯ ರಸವನ್ನು ಹಚ್ಚಿ ಆ ಜಾಗದಲ್ಲಿ ಉಜ್ಜಿಕೊಳ್ಳಬೇಕು.
ಗಾಯಗಳಾಗಿದ್ದರೆ ಜಾಜಿ ಮಲ್ಲಿಗೆ ಹೂವನ್ನು ಹಾಕಿ ತಯಾರಿಸಿದ ತುಪ್ಪ ಇಲ್ಲವೇ ಎಣ್ಣೆಯನ್ನು ಹಚ್ಚಬೇಕು. ಮುಟ್ಟು ನಿಯಮಿತವಾಗಿ ಆಗದಿದ್ದಲ್ಲಿ ಜಾಜಿ ಎಲೆಯ ರಸವನ್ನು ಒಂದು ಚಿಟಕೆ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬೇಕು. ವಸಡಿನಿಂದ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬೇಕು.
ದೀರ್ಘಕಾಲೀನ ಜ್ವರದಿಂದ ಬಳಲುವವರಿಗೆ ಜಾಜಿ ಬೇರಿನ ಕಷಾಯವನ್ನು ಕುಡಿಯಲು ಕೊಡಬೇಕು. ಕಣ್ಣುರಿ ಉಂಟಾದಾಗ ಜಾಜಿ ಹೂವಿನ ರಸದಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಸಿ ಆ ಬಟ್ಟೆಯನ್ನು ಕಣ್ಣಿನ ಮೇಲೆ ಹಾಕಿಕೊಳ್ಳಬೇಕು. ಸುಟ್ಟಗಾಯಗಳಿಗೆ ಜಾಜಿ ಹೂವು ಅಥವಾ ಎಲೆಯಿಂದ ತಯಾರಿಸಿದ ತುಪ್ಪವನ್ನು ಲೇಪಿಸಿಕೊಳ್ಳಬೇಕು.