ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ, ವಿವಾಹವಾಗಿದ್ದರೂ ಸಂತಾನ ಪ್ರಾಪ್ತಿಯಾಗದ ಮಂದಿಯೂ ಪ್ರಾರ್ಥಿಸಿದರೆ ದೈವ ಸಿದ್ಧಿಯಾಗುತ್ತದೆ. ಫಲ ಸಿಗುತ್ತದೆ. ಇಂತಹದ್ದೊಂದು ನಂಬಿಕೆ ಇರುವ ಕ್ಷೇತ್ರವೊಂದು ಇಲ್ಲಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮುಂಡೂರು ಎಂಬಲ್ಲಿನ ಪ್ರಾಕೃತಿಕ ಸೊಬಗಿನ ತಾಣದಲ್ಲಿ ಸದ್ದಿಲ್ಲದೆ ಆರಾಧಿಸಿಕೊಂಡು ಬರುತ್ತಿರುವ ಕ್ಷೇತ್ರ ಶ್ರೀ ಚಾಮುಂಡೇಶ್ವರಿ ದೇವಾಲಯ. ಈ ದೇವಸ್ಥಾನದಲ್ಲಿ ಕಾರಣಾಂತರಗಳಿಂದ ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ ಒದಗಿಬಂದಿರುವುದು, ವಿವಾಹವಾಗಿದ್ದರೂ ಸಂತಾನ ಪ್ರಾಪ್ತಿಯಾಗದ ಮಂದಿ ಇಲ್ಲಿಗೆ ಬಂದು ಪ್ರಾರ್ಥಿಸಿ ಪೂಜಿಸಿದ ತರುವಾಯ ಸಂತಾನ ಪ್ರಾಪ್ತಿಯಾಗಿರುವುದು ಇಲ್ಲಿನ ಕ್ಷೇತ್ರಕ್ಕೆ ರಾಜ್ಯದೆಲ್ಲೆಡೆಯಿಂದಲೂ ಭಕ್ತರು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಕಾಡಿನಂಚಿನಲ್ಲಿರುವ ಈ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆಯು ಅನುದಿನವೂ ನಡೆಯುತ್ತಿದ್ದು, ಕ್ಷೇತ್ರದಲ್ಲಿ ನಾನಾ ಬಗೆಯ ಸೇವೆಗಳು ಭಕ್ತರ ಕೋರಿಕೆಯಂತೆ ಸದಾ ಕಾಲ ನಡೆಯುತ್ತಿವೆ.
ಕ್ಷೇತ್ರಕ್ಕೆ ಶತಮಾನಗಳ ಹಿಂದಿನ ಇತಿಹಾಸ ಇದೆ. ರಾಜ ಮಯೂರವರ್ಮನ ಆಡಳಿತದ ಕಾಲ. ರಾಜ್ಯದಲ್ಲಿ ನಾಡು ಕಾಡು ಸಮಾನವಾಗಿ ಬಳಕೆಯಾಗುತ್ತಿದ್ದ ದಿನಗಳದು. ಕಾಡು ಜನರು ತಮ್ಮ ಬದುಕಿನಲ್ಲಿ ಭದ್ರತೆ ಹಾಗೂ ನೆಮ್ಮದಿಯನ್ನರಸಿ ಆರಾಧಿಸಿಕೊಂಡು ಬರುತ್ತಿದ್ದ ನಾಗ ದೇವರು ಹಾಗೂ ಮಹಾಕಾಳಿ ಸ್ವರೂಪಿಣಿ ಚಾಮುಂಡೇಶ್ವರಿಯ ಪೂಜೆ ಅವರ ಶೈಲಿಯಲ್ಲಿ ಅಸುರ ಕ್ರಿಯೆ ಆಧಾರಿತವಾಗಿ ನಡೆಯುತ್ತಿತ್ತು. ದಟ್ಟಡವಿಯಲ್ಲಿ ತಮ್ಮ ವಾಸ್ತವ್ಯದಲ್ಲಿ ಕಾಡು ಪ್ರಾಣಿಗಳಿಂದ ಜೀವ ರಕ್ಷಣೆ, ಸಾಕು ಪ್ರಾಣಿಗಳ ರಕ್ಷಣೆಗಾಗಿ ಅವರು ಶ್ರದ್ಧೆ ಹಾಗೂ ಭಕ್ತಿಯಿಂದ ಪ್ರಾಣಿ ಬಲಿಯನ್ನರ್ಪಿಸುತ್ತಾ ಆರಾಧಿಸಿಕೊಂಡು ಬಂದ ಈ ತಾಣವೇ ಕಾಲ ಕ್ರಮೇಣದಲ್ಲಿ ಬದಲಾದ ರಾಜ್ಯಾಡಳಿತದ ಸ್ಥಿತಿಗತಿ ಜನ ಜೀವನದ ಬದಲಾವಣೆಯೊಂದಿಗೆ ಕಾಡಿನಲ್ಲೇ ಅನಾಥವಾಗಿ ಉಳಿಯಿತು.
ಕಾಲಕ್ರಮೆಣ ಕಾಡು ಕ್ಷೀಣಿಸುತ್ತಾ ಬಂದು ನಾಡು ವಿಸ್ತರಿಸುತ್ತಾ ಹೋದಂತೆಯೇ ಈಗಿನ ಆನಂದ ಗೌಡರ ಕುಟುಂಬದ ಎರಡು ತಲೆಮಾರು ಹಿಂದೆ ಅವರ ಅಜ್ಜ ದುಗ್ಗ ಗೌಡರ ಕಾಲದಲ್ಲಿ ಜಾನುವಾರುಗಳು ಕಾಡಿನಂಚಿಗೆ ಬಂದವೆಂದರೆ ಅದು ಮತ್ತೆ ಹಿಂತಿರುಗುತ್ತಿರಲಿಲ್ಲ. ಮನೆಯಲ್ಲಿ ಅಸಹಜ ಸಾವುಗಳು ಸಂಭವಿಸಿ ಕಂಗೆಡುವ ಸ್ಥಿತಿ ನಿರ್ಮಾಣವಾಗಿತ್ತು.
ಬೆನ್ನುಬೆನ್ನಿಗೆ ಸಂಭವಿಸಿದ ಕೌಟುಂಬಿಕ ಸಮಸ್ಯೆಗಳ, ನಡೆದ ಜೀವ ಹಾನಿಯ ಮೂಲವನ್ನು ಪ್ರಶ್ನಿಸಲು ದೇವ ಪ್ರಶ್ನೆಯ ಮೊರೆ ಹೋದಾಗ ಕಂಡುಬಂದ ವಿಚಾರವೇ ಕಾಡು ಜನರಿಂದ ಪೂಜಿಸಲ್ಪಟ್ಟಿದ್ದ ಕಾಡ್ಯ ನಾಗನ ಹಾಗೂ ಕಾಳಿ ರೂಪದ ಚಾಮುಂಡೇಶ್ವರಿಯ ಅಸ್ತಿತ್ವ ಹಾಗೂ ಪೂಜಿಸಲ್ಪಡುವ ಅಗತ್ಯತೆ. ಈ ಕಾರಣದಿಂದ ಕಾಡಿನಲ್ಲಿ ಶತಮಾನಗಳ ಹಿಂದೆ ಕಾಡು ಜನರಿಂದ ಪೂಜಿಸಲ್ಪಟ್ಟಿದ್ದ ಕ್ಷೇತ್ರವನ್ನು ಪತ್ತೆ ಹಚ್ಚಿ ಅಲ್ಲಿ ಸರಳ ರೀತಿಯಲ್ಲಿ ಪೂಜಿಸಲು ಪ್ರಾರಂಭಿಸಲಾಯಿತು.
ಯಾವಾಗ ಕಾಡಿನೊಳಗಿದ್ದ ಪೂಜಾ ಸ್ಥಳದಲ್ಲಿ ಪೂಜಾ ಕಾರ್ಯ ನಡೆಯಲು ಪ್ರಾರಂಭವಾಯಿತೋ ಅಲ್ಲಿಂದ ದುಗ್ಗ ಗೌಡರ ಕುಟುಂಬದ ಸಮಸ್ಯೆಯೂ ಕರಗಲಾರಂಭಿಸಿತು. ಬಳಿಕದ ದಿನಗಳಲ್ಲಿ ಪೂಜಿಸಲ್ಪಡುವ ದೇವತೆಗಳಿಗೆ ದೇವಾಲಯದ ನಿರ್ಮಾಣ ಮಾಡಬೇಕೆಂಬ ಪ್ರೇರಣೆ ಲಭಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿಯಾದ ಆನಂದ ಅವರ ನೇತೃತ್ವದಲ್ಲಿ ಸಣ್ಣ ಗುಡಿಯನ್ನು ನಿರ್ಮಿಸಿ ಚಾಮುಂಡೇಶ್ವರಿ ಹಾಗೂ ಮಹಾಕಾಳಿ ದೇವರನ್ನು ಪೂಜಿಸಲಾರಂಭಿಸಲಾಯಿತು.
ಶ್ರೀ ಚಾಮುಂಡೇಶ್ವರಿ ದೇಗುಲದ ಮುಂಭಾಗದಲ್ಲಿನ ಕಾಡಿನಲ್ಲಿ ಶತಮಾನಗಳ ಹಿಂದೆ ಕಾಡು ಜನರು ಪೂಜಿಸುತ್ತಿದ್ದ ಕಾಡ್ಯ ನಾಗ ಹಾಗೂ ಚಾಮುಂಡೇಶ್ವರಿ ಎಂದು ಬಿಂಬಿತವಾಗಿ ಪೂಜಿಸಲ್ಪಡುತ್ತಿದ್ದ ಕಲ್ಲುಗಳು ಈಗಲೂ ಇದ್ದು, ಅಂದಿನ ಕಾಲದಲ್ಲಿ ಪೂಜೆಗೆ ಬಳಸುತ್ತಿದ್ದ ಮಣ್ಣಿನ ಸಲಕರಣಿಗಳು ಕೂಡಾ ಕಾಣಿಸಿಕೊಳ್ಳುತ್ತಿದೆ.