ನಾವು ಪ್ರತಿದಿನ ಹಾಲು ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳು ಲಭಿಸುತ್ತವೆ. ಆದರೆ ಅದಕ್ಕೆ ಅರಿಶಿನ ಬೆರಸಿ ಕುಡಿಯುವುದರಿಂದ ಇನ್ನು ಹಲವಾರು ದೈಹಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಹಾಲಿಗೆ ಅರಿಶಿನ ಬೆರಸಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ ಬನ್ನಿ.
ಸಂಧಿವಾತ: ಅರಿಶಿನ ಬೆರೆಸಿದ ಹಾಲು ಕುಡಿಯುವುದರಿಂದ ಸಂಧಿವಾತವನ್ನು ಗುಣಪಡಿಸುತ್ತದೆ, ಸ್ನಾಯುಗಳಲ್ಲಿ ಊತವಿದ್ದರೆ ಅದನ್ನು ಕಡಿಮೆ ಮಾಡುತ್ತದೆ. ಸ್ನಾಯು ಮತ್ತು ಕೀಲುಗಳ ನೋವನ್ನು ಕಡಿಮೆ ಮಾಡುವುದರಿಂದ ಅವು ಇನ್ನಷ್ಟು ಫ್ಲೆಕ್ಸಿಬಲ್ ಆಗುತ್ತವೆ.
ಜೀರ್ಣಕ್ರಿಯೆಗೆ ಸಹಕಾರಿ: ಅರಿಶಿನ ಬೆರೆಸಿದ ಹಾಲು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಅಲ್ಸರ್, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಯಿಂದ ದೂರವಿರಬಹುದು. ಅರಿಶಿನ ಪ್ರಬಲ ನಂಜು ನಿರೋಧಕವಾಗಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ, ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಹುಣ್ಣಾಗದಂತೆ ಕೂಡ ನೋಡಿಕೊಳ್ಳುತ್ತದೆ.
ಶೀತ ಮತ್ತು ಕೆಮ್ಮು: ಅರಿಶಿನದಲ್ಲಿರುವ ನಂಜು ನಿರೋಧಕ ಮತ್ತು ಸಂಕೋಚಕ ಗುಣಗಳು ಹಾಲಿನ ಹಿತವಾದ ಪರಿಣಾಮದೊಂದಿಗೆ ಬೆರೆತು ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತವೆ. ಅರಿಶಿನದಲ್ಲಿ ಆ್ಯಂಟಿವೈರಲ್ ಮತ್ತು ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳು ಇರುವುದರಿಂದ ಇದು ಶೀತ ಮತ್ತು ಕೆಮ್ಮಿಗೆ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ.