ದಿನನಿತ್ಯ ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಆಹಾರ ಸೇವನೆಯ ಆಧಾರದ ಮೇಲೆ ಮನುಷ್ಯನ ಅರೋಗ್ಯ ನಿಂತಿದೆ. ಆರೋಗ್ಯಕರ ಆಹಾರ ಸೇವನೆಯು ಕೂಡ ಪಾರ್ಶ್ವವಾಯುವಿನ ಅಪಾಯವನ್ನೂ ಕಡಿಮೆ ಮಾಡುತ್ತದೆ. ಪಾರ್ಶ್ವವಾಯುವಿಗೆ ಕಾರಣಗಳಲ್ಲಿ ಅಧಿಕ ರಕ್ತದೊತ್ತಡ, ಧೂಮ್ರಪಾನ, ಮಧುಮೇಹ ಮತ್ತು ಸತ್ವಹೀನ ಆಹಾರ ಸೇವನೆ ಇತ್ಯಾದಿಗಳ ಸೇವನೆಯು ಪ್ರಮುಖ ಕಾರಣ. ಆರೋಗ್ಯಕರ ಆಹಾರ ಸೇವನೆ ಮಾಡುವುದು ನಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಪಾರ್ಶ್ವವಾಯುವಿನ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಆಹಾರಗಳ ಮಹತ್ವವನ್ನು ತಿಳಿಸುತ್ತೇವೆ.
ಮೀನಿನ ಸೇವನೆಯಿಂದ ಮೀನಿನಲ್ಲಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್ ಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಣ ಮಾಡುವುದಲ್ಲದೆ ಮತ್ತು ಇದು ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತದೆ. ಸಾಲ್ಮನ್, ಟುನಾ ಮತ್ತು ಬಂಗುಡೆಯಂತಹ ಮೀನುಗಳಲ್ಲಿ ಸಮೃದ್ಧವಾಗಿರುವ ಒಮೆಗಾ-3 ಫ್ಯಾಟಿ ಆ್ಯಸಿಡ್ಗಳು ಆರೋಗ್ಯಕರ ಕೊಬ್ಬು ಆಗಿರುವುದರಿಂದ ಹೃದ್ರೋಗಗಳನ್ನು ದೂರವಿರಿಸುವಲ್ಲಿ ನೆರವಾಗುತ್ತವೆ.
ಓಟ್ಮೀಲ್ ಅಥವಾ ತೋಕೆಗೋಧಿಯ ಆಹಾರವನ್ನು ನಮ್ಮ ಊಟದಲ್ಲಿ ಸೇರಿಸಿ ಕೊಳ್ಳುವುದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ತಗ್ಗಿಸಬಹುದು.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ನ ಅಧಿಕ ಮಟ್ಟವು ಮಿದುಳಿನ ಸುತ್ತಲಿನ ರಕ್ತನಾಳಗಳಲ್ಲಿ ಪಾಚಿ ಸಂಗ್ರಹವಾಗಲು ಕಾರಣವಾಗುತ್ತದೆ ಮತ್ತು ಇದು ಪಾರ್ಶ್ವವಾಯುವನ್ನುಂಟು ಮಾಡುತ್ತದೆ. ಪಾರ್ಶ್ವವಾಯುವಿನಿಂದ ದೂರವಿರಲು ನಿಯಮಿತವಾಗಿ ಮೂರು ಕಪ್ಗಳಷ್ಟು ಓಟ್ಮೀಲ್ ಸೇವನೆ ಮಾಡಬೇಕು.
ಇಡಿಯ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತವೆ. ಹಾಗೂ ಇಡಿಯ ಧಾನ್ಯಗಳಲ್ಲಿ ನಾರು, ವಿಟಾಮಿನ್ ಬಿ,ಫಾಲೇಟ್, ಮ್ಯಾಗ್ನೀಷಿಯಂ ಮತ್ತು ಕಬ್ಬಿಣ ಹೆಚ್ಚಿನ ಪ್ರಮಾಣದಲ್ಲಿದ್ದು,ಇವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ ಮತ್ತು ಪಾರ್ಶ್ವವಾಯುವನ್ನು ತಡೆಯಲು ಸಹ ನೆರವಾಗುತ್ತವೆ.
ಸಿಹಿಗೆಣಸನ್ನು ಸೇವನೆ ಮಾಡುವುದರಿಂದ ಸಿಹಿಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರು ಮತ್ತು ಪೊಟ್ಯಾಷಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುವ ಮೂಲಕ ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತವೆ. ಪೊಟ್ಯಾಷಿಯಂ ಭರಿತ ಸಮೃದ್ಧ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದು ಹಸಿರು ಸೊಪ್ಪುಗಳು, ಸಿಹಿಗೆಣಸು, ಬಟಾಣಿ, ಅಣಬೆ, ಬದನೆಕಾಯಿ ಮತ್ತು ಕುಂಬಳಕಾಯಿ ಇವು ಪೊಟ್ಯಾಷಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಇವುಗಳ ಸೇವನೆ ಉಪಯುಕ್ತ.
ಪೂರ್ಣ ಪ್ರಮಾಣದ ಕೊಬ್ಬು ಇರುವ ಡೇರಿ ಉತ್ಪನ್ನಗಳಲ್ಲಿ ಸ್ಯಾಚ್ಯುರೇಟೆಡ್ ಫ್ಯಾಟ್ ಅಧಿಕ ಪ್ರಮಾಣದಲ್ಲಿರುತ್ತದೆ ಮತ್ತು ಇದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುವ ಮೂಲಕ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೆಚ್ಚು ಕೊಬ್ಬು ಇರುವ ಡೇರಿ ಉತ್ಪನ್ನಗಳ ಸೇವನೆಯನ್ನು ಬಹಳಷ್ಟು ಕಡಿಮೆ ಮಾಡುವುದರ ಮೂಲಕ ಪಾರ್ಶ್ವವಾಯುವನ್ನು ತಡೆಯಬಹುದಾಗಿದೆ.
ಈ ಮೇಲಿನ ಎಲ್ಲ ಆಹಾರ ಕ್ರಮಗಳನ್ನು ತಮ್ಮ ಜೀವನ ಶೈಲಿಯಲ್ಲಿ ರೂಡಿಸಿಕೊಳ್ಳುವುದರ ಮೂಲಕ ಪಾರ್ಶ್ವವಾಯುವನ್ನು ತಡೆಯಬಹುದಾಗಿದೆ.