ರಾಯಚೂರಿನ ಮಾನ್ವಿ ತಾಲೂಕಿನ ಕವಿತಾಳ ಎಂಬ ಗ್ರಾಮದ ನಿವಾಸಿ ಕವಿತಾಮಿಶ್ರಾ ಓದಿದ್ದು ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ, ಜೊತೆಗೆ ಸೈಕಾಲಜಿಯಲ್ಲಿ ಸ್ನಾತಕಪದವಿ. ಕೈತುಂಬ ಸಂಪಾದನೆ ಮಾಡುವ ಕೆಲಸ ಸಿಕ್ಕರೂ ಅದನ್ನು ತೊರೆದು ಭೂತಾಯಿಯನ್ನೇ ನಂಬಿ ಬಂದವರು ಕವಿತಾ.ಏಕಬೆಳೆಪದ್ಧತಿಯನ್ನು ನಂಬಿಕೊಂಡಿರುವುದರಿಂದ ಪ್ರಯೋಜನವಿಲ್ಲ ಎಂಬುದನ್ನು ಅರಿತ ಇರವರು ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರು.
ಬಿರುಬೇಸಿಗೆಯಲ್ಲಿ 50 ಡಿಗ್ರಿ ಸೆಲ್ಷಿಯಸ್ ಗಿಂತಲೂ ಹೆಚ್ಚುವ ತಾಪಮಾನದಲ್ಲೂ ತಮ್ಮ ಹತ್ತುಎಕರೆ ಭೂಮಿಯನ್ನು ಹಸಿರಾಗಿಸಿದವರು ಕವಿತಾ. ಸಾವಯವಕೃಷಿ, ಹನಿ ನೀರಾವರಿಯ ಮೂಲಕ ಹಠ ಹಿಡಿದು ಹತ್ತಾರು ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಕೃಷಿ ಮತ್ತು ರೈತ ವೃತ್ತಿಯ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಪ್ರೀತಿ ಅಪಾರ. ಈ ಕುರಿತು ಅವರು ರೈತರಿಗೆ ನೀಡಿದ ಉಪಯುಕ್ತ ಮಾಹಿತಿ.
ಸಮಗ್ರ ಬೇಸಾಯಪದ್ದತಿಯ ಮಹತ್ವ: ಏಕ ಬೆಳೆಯನ್ನು ನಂಬಿಕೊಂಡಿರುವುದು ಎಂದಿಗೂ ಅಪಾಯ. ಒಂದೇ ಬೆಳೆಯನ್ನು ನಂಬಿಕೊಂಡಿದ್ದರೆ ಅದು ಕೈಕೊಟ್ಟರೆ ರೈತನ ಕತೆ ಏನು? ಆದ್ದರಿಂದಲೇ ನಾನು ಮಿಶ್ರ ಬೆಳೆ ಪದ್ಧತಿಗೆ ಒತ್ತು ನೀಡುವುದಕ್ಕೆ ಯೋಚಿಸಿದೆ. ನಮ್ಮ 10 ಎಕರೆ ಜಮೀನಿನಲ್ಲಿ, 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಸೀಬೆ, 150 ನೇರಳೆ, 150 ಬೆಟ್ಟದ ನೆಲ್ಲಿಕಾಯಿ, 150 ನುಗ್ಗೆ, 100 ಕರಿಬೇವು, 100 ಮಲ್ಲಿಗೆ, 100 ತೆಂಗು, 450 ಸೀತಾಫಲದ ಮರಗಳಿವೆ. ಶ್ರೀಗಂಧ ಮುಖ್ಯ ಬೆಳೆಯಾಗಿದ್ದರೂ ಇದು ಪರಾವಲಂಬಿಯಾದ್ದರಿಂದ ಬೇರೆ ಮರಗಳ ಆಧಾರದ ಮೇಲೆ ಅದು ಬೆಳೆಯುತ್ತದೆ. ಆದ್ದರಿಂದಲೇ ಬೇರೆ ಮರಗಳನ್ನೂ ಬೆಳೆಸಿದ್ದೇನೆ.
ಇದರೊಟ್ಟಿಗೆ ಕುರಿಸಾಕಾಣಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಯನ್ನೂ ಮಾಡುತ್ತೇನೆ. ರೈತನಿಗೆ ಪ್ರತಿ ತಿಂಗಳು ಸಂಬಳ! ಈ ಎಲ್ಲವೂ ಬೇರೆ ಬೇರೆ ಕಾಲದಲ್ಲಿ ಬೆಳೆ ನೀಡುವುದರಿಂದ ರೈತನಿಗೆ ಪ್ರತಿ ತಿಂಗಳೂ ಸಂಬಳದಂತೆ ಒಂದಲ್ಲ ಒಂದು ಬೆಳೆಯ ಆದಾಯ ಕೈಗೆ ಬರುತ್ತದೆ! ಇದರಿಂದ ರೈತನಿಗೆ ಆರ್ಥಿಕ ಹೊರೆ ಬರುವುದಿಲ್ಲ. ಸರ್ಕಾರಿ ನೌಕರರಿಗೆ ನಿವೃತ್ತಿಯಾಗುತ್ತಿದ್ದಂತೆಯೇ ಪೆನ್ಷನ್ ಬರುತ್ತೆ,ಖಾಸಗಿ ಕಂಪನಿಗಳಲ್ಲಿರುವವರಿಗೆ ಪಿಎಫ್, ಗ್ರಾಚ್ಯುಟಿ ಅದರೊಂದಿಗೆ ಉಳಿತಾಯಕ್ಕೂ ನೂರಾರು ದಾರಿಗಳು.
ಆದರೆ ರೈತರಿಗೆ ಪ್ರತಿಯೊಬ್ಬರ ಹೊಟ್ಟೆಗೂ ಅನ್ನ ನೀಡುವ ರೈತ ನಿತ್ರಾಣನಾಗುತ್ತಿದ್ದಂತೆಯೇ ಮಕ್ಕಳ ಮೇಲೋ, ಇನ್ಯಾರದೋ ಮೇಲೋ ಅವಲಂಬಿತನಾಗಬೇಕಾದ ಸ್ಥಿತಿ! ಹಾಗಾಗಬಾರದು ಎಂಬ ಕಾರಣಕ್ಕೇ ಈ ಶ್ರೀಗಂಧವನ್ನು ಬೆಳೆಸಲಾಗಿದೆ. ಇದು ರೈತನನ್ನು ಕೋಟ್ಯಧಿಪತಿಯನ್ನಾಗಿ ಮಾಡಬಲ್ಲದು. ಎಂದು ಹೇಳುತ್ತಾರೆ.
ಒಂದು ಎಕರೆ ಶ್ರೀಗಂಧದಿಂದ ಐದಾರು ಕೋಟಿ ಆದಾಯ: ಒಂದು ಕೆಜಿ ಶ್ರೀಗಂಧಕ್ಕೆ ಈಗ ಸರ್ಕಾರದ ದರವೇ 10-15 ಸಾವಿರ ರೂ. ಇದೆ. ಖಾಸಗಿ ದರ 28,000 ರೂ.ಗೂ ಹೆಚ್ಚು. ಆದ್ದರಿಂದ ಒಂದು ಎಕರೆ ಶ್ರೀಗಂಧದಿಂದ ಐದಾರು ಕೋಟಿ ರೂ. ವರೆಗೂ ರೈತ ಆದಾಯ ಪಡೆಯಬಹುದು. ಇವು ಬೆಳೆಯುವವರೆಗೂ ರೈತರು ಬೇರೆ ಬೆಳೆಗಳಿಗೆ ಮಹತ್ವ ನೀಡಿ, ಅವುಗಳಿಂದ ತಿಂಗಳು ತಿಂಗಳು ಆದಾಯ ಪಡೆಯಬಹುದು. ಬಹಳ ಕಷ್ಟದ, ಅಷ್ಟೇ ಸ್ವಾಭಿಮಾನದ ಬದುಕು ಬದುಕುವವನು ರೈತ. ಈ ಜಗತ್ತಿನಲ್ಲಿ ಯಾರು, ಯಾರಿಗೇ ಮೋಸ ಮಾಡಬಹುದು. ಆದರೆ ರೈತ? ಆತ ಮಾತ್ರ ಯಾರಿಗೂ ಮೋಸ ಮಾಡುವುದಕ್ಕೆ ಸಾಧ್ಯವಿಲ್ಲ.
ತನಗೇ ತಾನು ಮೋಸ ಮಾಡಿಕೊಂಡು ಮತ್ತೊಬ್ಬರಿಗೆ ಅನ್ನ ನೀಡುವ ತ್ಯಾಗಮಯಿ ಆತ. ಆದರೂ ವ್ಯವಸಾಯವನ್ನು ಕಸುಬಾಗಿ ಸ್ವೀಕರಿಸುವುದಕ್ಕೆ ಯಾರೂ ಸಿದ್ಧರಿಲ್ಲ. ರೈತರಿಗೆಕನ್ಯೆಸಿಕ್ಕೋಲ್ಲ! ಎಸಿ ರೂಮಿನಲ್ಲಿ ತಣ್ಣಗೆ ಕೂತು ಕೆಲಸ ಮಾಡುವವರಿಗೆ ಬೇಡಿಕೆ ಜಾಸ್ತಿ. ಬಿರು ಬಿಸಿಲಲ್ಲೂ ಮೈಬಗ್ಗಿ ಕೆಲಸ ಮಾಡುವ ರೈತ ಯಾರಿಗೂ ಬೇಕಿಲ್ಲ. ಆದ್ದರಿಂದಲೇ ಅವರಿಗೆ ಕನ್ಯೆ ಸಿಕ್ಕುತ್ತಿಲ್ಲ. ಆದರೆ ರೈತರೂ ಎಲ್ಲರಂತೂ ಪ್ರತಿ ತಿಂಗಳೂ ಆದಾಯ ಗಳಿಸುತ್ತ,ಒಂದು ಸದೃಢಬದುಕು ಕಂಡುಕೊಂಡರೆ ಆಗ ಈ ವೃತ್ತಿಗೂ ಬೆಲೆ ಬರುತ್ತದೆ. ರೈತವೃತ್ತಿಯಂಥಸಾರ್ಥಕ ವೃತ್ತಿಮತ್ತೊಂದಿಲ್ಲ. ಸಾಲದ ಹೊರೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕವಿತಾ ಅವರ ಮಾತುಗಳು ರೈತರಿಗೆ ಕೊಂಚವಾದರೂ ಆಶಾಕಿರಣ ಅನ್ನಿಸುವುದು ಸತ್ಯ. ತಪ್ಪದೆ ಇಂತಹಾ ಮಾಹಿತಿಯನ್ನು ಶೇರ್ ಮಾಡಿ ಕೃಷಿಯ ಬಗ್ಗೆ ಇತರರಿಗು ತಿಳಿಸಲು ಸಹಕರಿಸಿಸಂಪರ್ಕ: 9448777045 (ಉಮಾಶಂಕರ ಮಿಶ್ರ )ಕೃಪೆ; ಹಳ್ಳಿ ಸುದ್ದಿ