ಎಲ್ಲದರಲ್ಲೂ ಹಣ ಗಳಿಕೆಯನ್ನೇ ನೋಡುವ ಈ ಕಾಲದಲ್ಲಿ ಜನಸೇವೆ ಮಾಡೋರು ಎಲೆಮರೆ ಕಾಯಿಗಳಂತಿರುತ್ತಾರೆ. ಇದಕ್ಕೆ ಸಾಕ್ಷಿ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯೆ ಸವಿತಾ.
ದಾವಣಗೆರೆಯ ಹರಿಹರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞೆಯಾಗಿರುವ ಸವಿತಾ, ಬಡ ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆ ಜೊತೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪ್ರತಿದಿನ 100 ರಿಂದ 150 ರೋಗಿಗಳನ್ನು ನೋಡುತ್ತಿದ್ದಾರೆ.
ಸವಿತಾ ಮೇಡಂ ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಜಿಲ್ಲೆಯಲ್ಲಿಯೇ ಉತ್ತಮ ವೈದ್ಯೆ ಎನ್ನುವ ಹೆಸರು ಪಡೆದಿರುವ ಸವಿತಾ ಅವರು ಒಂದು ದಿನವೂ ಆಸ್ಪತ್ರೆಗೆ ತಡವಾಗಿ ಬಂದಿಲ್ಲ. ರಜೆ ದಿನಗಳಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಸವಿತಾ ಅವರ ಕೈಗುಣ ತುಂಬಾ ಚೆನ್ನಾಗಿದೆ. ಎಷ್ಟೇ ಜನ ಬಂದರೂ ಸಹನೆ ಕಳೆದುಕೊಳ್ಳೋದಿಲ್ಲ ಎಂದು ರೋಗಿಗಳು ಹೊಗಳುತ್ತಾರೆ.
ದಾವಣಗೆರೆಯವರೇ ಆಗಿರೋ ಸವಿತಾ ಅವರ ಮನೆಯಲ್ಲಿ ಮೂವರು ವೈದ್ಯರಿದ್ದಾರೆ. ಗಂಡ, ಮಾವನ ಜೊತೆ ಸೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ಲಾನ್ ಹೊಂದಿದ್ದೆ. ಆದರೆ ಬಡ ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ಪರಿಸ್ಥಿತಿ ಕಂಡು, ಸರ್ಕಾರಿ ಸೇವೆಗೆ ಬಂದಿದ್ದೇನೆ. ಬಡವರಿಗೆ ಚಿಕಿತ್ಸೆ ನೀಡುತ್ತಾ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇದರಲ್ಲೇ ಸಂತೋಷ ಪಡೆಯುತ್ತಿದ್ದೇನೆ ಎಂದು ಸವಿತಾ ಹೇಳುತ್ತಾರೆ. ಕೃಪೆ: ಪಬ್ಲಿಕ್ ಟಿವಿ.