ನಗು ನಮ್ಮ ಮನಸ್ಸಿನ ನೋವನ್ನು ಮಾತ್ರ ಕಡಿಮೆ ಮಾಡುವುದಿಲ್ಲ, ದೈಹಿಕ ನೋವನ್ನೂ ತಗ್ಗಿಸುತ್ತದೆ. ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಇತ್ತೀಚೆಗೆ ನಡೆದ ಅಧ್ಯಯನವೊಂದು ಉತ್ತರಿಸಿದೆ. ನಗುವಿಗೂ ದೈಹಿಕ ನೋವಿಗೂ ಸಂಬಂಧವಿದೆ ಎನ್ನುವುದನ್ನು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ.
ಜೋರಾಗಿ ನಕ್ಕರೆ ಅದು ಮೆದುಳಿನಲ್ಲಿ ಎಂಡಾರ್ಫಿನ್ ರಾಸಾಯನಿಕ ಬಿಡುಗಡೆಗೊಳಿಸಿ ನೋವು ನಿವಾರಕದಂತೆ ಕೆಲಸ ಮಾಡುತ್ತದೆ. ಇನ್ನೊಂದು ಸಂಶೋಧನೆಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ, ರೋಗಿಗಳಿಗೆ ತೋರಿಸಲಾಯಿತು. ಈ ದೃಶ್ಯಗಳನ್ನು ನೋಡುತ್ತಿದ್ದ ರೋಗಿಗಳು ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಗಣನೀಯವಾಗಿ ಕಡಿಮೆ ಮಾಡಿದ್ದರು ಎಂದು ತಿಳಿದುಬಂದಿತ್ತು.
ನಿತ್ಯ ನಗುವುದರಿಂದ ಮನಸ್ಸು ಪ್ರಸನ್ನಚಿತ್ತವಾಗಿದ್ದು ಆತಂಕ, ದುಗುಡ ಕಡಿಮೆಗೊಳ್ಳುವವು. ನೆನಪಿನ ಶಕ್ತಿ ವರ್ಧಿಸುವುದು. ಉಸಿರಾಟದಲ್ಲಿ ಶ್ವಾಸಕೋಶಗಳ ಗಾಳಿ ಎಳೆದುಕೊಳ್ಳುವ ಸಾಮಥ್ರ್ಯ ಹೆಚ್ಚುವುದು. ಅದರಂತೆ ಗಾಳಿ ವಿನಿಮಯ ಕೂಡ ಹೆಚ್ಚಿಗೆ ಆಗುವುದು.
ರಕ್ತದ ಏರೊತ್ತಡವು ಕಡಿಮೆಯಾಗುವ ಸಾಧ್ಯತೆಗಳಿವೆ. ಮನೋಒತ್ತಡವುಳ್ಳವರು ತಮ್ಮ ಸುಖ-ದುಃಖ ಹಂಚಿಕೊಂಡಾಗ ಮನಸ್ಸು ನಿರಾಳವಾಗುತ್ತದೆ. ಅದರೊಡನೆ ಹಾಸ್ಯ, ಜೋಕ್ಸ್ ಚೇಷ್ಟೆಗಳಿಂದ ಕೂಡಿದರೆ ಮನಸ್ಸು ಮತ್ತಷ್ಟು ಹಗುರವಾಗಿ ಚೈತನ್ಯ ಶಕ್ತಿ ಒಡಮೂಡುತ್ತದೆ.
ನಿತ್ಯ ನಗುವಿನ ಹರಟೆ ಅನುಭವಗಳನ್ನು ಹಾಸ್ಯಲೇಪನದೊಂದಿಗೆ ಇನ್ನೊಬ್ಬರೊಡನೆ ಹಂಚಿಕೊಂಡಾಗ ನಿಮ್ಮ ಬಗ್ಗೆ ಗೌರವ ಭಾವನೆ ಮೂಡುವುದರೊಂದಿಗೆ ಮನಸ್ಸಿಗೆ ಏಕಾಗ್ರತೆ ಉಂಟಾಗಿ ಕೆಲಸ ಮಾಡಲು ಹುರುಪು ಬರುವುದು. ಅದು ಸಂತೋಷವುಂಟು ಮಾಡಿ ಆತ್ಮವಿಶ್ವಾಸ ವರ್ಧಿಸುತ್ತದೆ ಹಾಗೂ ಆತ್ಮಸೌಂದರ್ಯ ನೀಡುತ್ತದೆ. ಇದರಿಂದ ಸೃಜನಶೀಲ ವಿಚಾರಗಳು ಮನದಲ್ಲಿ ಹುಟ್ಟುತ್ತವೆ.