ಮೂರು ಕೋಟಿ ರು ವೆಚ್ಚದ ಮನೆ, ಓಡಾಡಲು ಎಸ್ ಯುವಿ ಕಾರು, ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಇಷ್ಟೆಲ್ಲ ಇದ್ದರೂ ಬೀದಿಬದಿಯಲ್ಲಿ ವ್ಯಾಪಾರಿಯಾಗಿ ಮಹಿಳೆಯೊಬ್ಬರು ಕಾಣ ಸಿಗುತ್ತಾರೆ. ಇದೇನು ರಿಯಾಲಿಟಿ ಶೋ ಅಲ್ಲ ಅಥವಾ ಸೋನು ನಿಗಮ್ ರಂತೆ ಚಿತ್ರದ ಪ್ರಚಾರಕ್ಕೆ ಮಾಡಿದ ಮೇಕಪ್ ಕಥೆಯಲ್ಲ, ಇದು ಗುರಗಾಂವ್ ನ ಊರ್ವಶಿ ಯಾದವ್ ಅವರ ಜೀವನದ ಸತ್ಯಕಥೆ. 34 ವರ್ಷದ ಮಾಜಿ ಶಾಲಾ ಶಿಕ್ಷಕಿ ಊರ್ವಶಿ ಯಾದವ್ ಅವರು ಗುರಗಾಂವ್ನ ಬೀದಿಬದಿ ಫಾಸ್ಟ್ ಪುಡ್ ಮಾರಾಟ ಮಾಡುತ್ತಿದ್ದಾರೆ. ಛೋಲೆ- ಕುಲ್ಚೆ ತುಂಬಾ ಜನಪ್ರಿಯಗೊಂಡಿವೆ. ಉದ್ಯೋಗದ ನಿಮಿತ್ತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಗೊಂಡ ಆಕೆಯ ಪತಿ ಅಮಿತ್ ಯಾದವ್ (37) ಅಪಘಾತವೊಂದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಪತಿಯ ಸೊಂಟದ ಭಾಗಕ್ಕೆ ಬಲವಾದ ಏಟು ಬಿದ್ದ ಪರಿಣಾಮ ಶಸ್ತ್ರ ಚಿಕಿತ್ಸೆಗೆ ಅಪಾರವಾದ ಹಣ ಖರ್ಚಾಗಿದೆ.
ಊರ್ವಶಿ ಅವರು ಮರದ ತಳ್ಳುಗಾಡಿ ಖರೀದಿಸಿ ರಸ್ತೆ ಬದಿ ಮಾರಾಟ ಆರಂಭಿಸಿದರು. ಜೊತೆಗೆ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೂಡ ಸೇರಿಕೊಂಡರು. ಆದರೆ, ಅಡುಗೆ ಬಗ್ಗೆ ಇದ್ದ ಆಸಕ್ತಿ, ಕುಟುಂಬ ನಿರ್ವಹಣೆ ಜವಾಬ್ದಾರಿ ಈಕೆಗೆ ಹೊಸ ಉದ್ಯಮಕ್ಕೆ ನಾಂದಿ ಹಾಡಿತು…
ಈ ಬಗ್ಗೆ ಪ್ರತಿಕ್ರಿಯಿಸಿರುವ ಊರ್ವಶಿ, ನನ್ನ ಕುಟುಂಬಕ್ಕೆ ಯಾವುದೇ ರೀತಿಯ ಹಣಕಾಸಿನ ತೊಂದರೆಯಿಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ. ಕೇವಲ ಶಿಕ್ಷಕ ವೃತ್ತಿಯಿಂದ ಅಧಿಕ ಹಣಗಳಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತು ಈ ವೃತ್ತಿಯನ್ನು ಆಯ್ದುಕೊಂಡೆ. ದುಡಿದು ತಿನ್ನಬೇಕು, ಕೂತು ತಿನ್ನಬಾರದು ಎಂಬುದು ನನ್ನ ಉದ್ದೇಶ ಎಂದಿದ್ದಾರೆ
ಅಡುಗೆಯಲ್ಲಿ ಆಸಕ್ತಿ ಇತ್ತು ನನಗೆ ಮೊದಲಿನಿಂದಲೂ ಅಡುಗೆಯಲ್ಲಿ ಆಸಕ್ತಿ ಇತ್ತು. ಹೀಗಾಗಿ ತಳ್ಳುಗಾಡಿಯಲ್ಲಿ ಅಡುಗೆ ಮಾಡಲು ತೊಡಗಿದೆ. ಜನಪ್ರಿಯ ತಿನಿಸುಗಳನ್ನು ಮಾಡಲು ಮುಂದಾದೆ. ಇದೀಗ ಈ ವ್ಯಾಪಾರದಿಂದ ಪ್ರತಿನಿತ್ಯ 2,000 ರೂಪಾಯಿಯಿಂದ 3,000 ರೂ ಆದಾಯ ಬರುತ್ತಿದೆ ಎಂದಿದ್ದಾರೆ.
ಗುರ್ ಗಾಂವ್ ನ ಸೆಕ್ಟರ್ 17ರ ನಿವಾಸಿ ಊರ್ವಶಿ ಯಾದವ್ ಬಗ್ಗೆ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉರ್ವಶಿ ಅವರಿಗೆ ಇಬ್ಬರು ಮಕ್ಕಳಿದ್ದು, ಮಗಳಿಗೆ ಹನ್ನೆರಡು ವರ್ಷ ಹಾಗೂ ಮಗನಿಗೆ ಏಳು ವರ್ಷ. ಇನ್ನು ಮಾವ ನಿವೃತ ಭಾರತೀಯ ವಾಯುದಳದ ಕಮಾಂಡರ್ ಆಗಿದ್ದಾರೆ.
ಮೊದಮೊದಲು ಕಷ್ಟ ಎನಿಸಿತು ಎಸಿ ಕಾರು, ಮನೆಯಲ್ಲಿ ಬೆಳೆದ ನಾನು ಮುಖ ಮುಚ್ಚಿಕೊಂಡು ಕೆಲಸ ಮಾಡುತ್ತಿದ್ದೆ. ಬಿಸಿಲಿನಲ್ಲಿ ನಿಂತು ಅಭ್ಯಾಸ ಇರಲಿಲ್ಲ. ಆದರೆ, ಈಗ ಗ್ರಾಹಕರಿಗೆ ಆಹಾರ ತಯಾರಿಸುವುದು ಅಭ್ಯಾಸವಾಗಿದೆ ಎಂದು ಹೇಳುತ್ತಾರೆ. ಸಂಗ್ರಹ