ಈ ಮೂಲಂಗಿಯಲ್ಲಿ 66 ಕೆಲೊರಿಗಳಿರುವ ಮೂಲಂಗಿಯಲ್ಲಿ ಬಿ1, 2, 3, 5, 6, 9 ಜೀವಸತ್ವಗಳಿವೆ. ಪ್ರೊಟೀನಿನ ಕಣಜವೂ ಹೌದು. ಸಕ್ಕರೆ, ನಾರು, ಸುಣ್ಣ, ಕಬ್ಬಿಣ, ರಂಜಕ, ಪೊಟಾಸಿಯಂ, ಮ್ಯಾಂಗನೀಸ್, ಜಿಂಕ್, ಫ್ಲೋರೈಡ್‌ಗಳು ಈ ತರಕಾರಿಯಲ್ಲಿವೆ. ನಿತ್ಯದ ಅಡುಗೆಯಲ್ಲದೆ ಸೂಪ್, ಜ್ಯೂಸ್ ತಯಾರಿಕೆಗೂ ಅದು ಉಪಯುಕ್ತವಾಗಿದೆ. ಈರುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು ಮತ್ತು ಲಿಂಬೆರಸ ಬೆರೆಸಿ ಅದರಿಂದ ಆರೋಗ್ಯಕರವಾದ ಸಲಾಡ್ ತಯಾರಿಸಿ ಬಳಸಬಹುದು.
ಚರ್ಮದ ಆರೋಗ್ಯಕರ ತೇವಾಂಶವನ್ನು ಮೂಲಂಗಿ ಕಾಪಾಡಿ ಕಾಂತಿಯುಕ್ತಗೊಳಿಸುತ್ತದೆ. ಒಣಚರ್ಮ, ದದ್ದು, ಬಿರುಕುಗಳ ಶಮನಕ್ಕೆ ಮೂಲಂಗಿಯನ್ನು ಹಾಲಿನಲ್ಲಿ ಅರೆದು ಫೇಸ್‌ಪ್ಯಾಕ್ ಹಾಕುವುದು ಉಪಯುಕ್ತ.
ಜ್ವರದಿಂದ ದೇಹದಲ್ಲಿ ತಾಪಮಾನ ತೀವ್ರವಾಗಿದ್ದರೆ ಹಸಿ ಮೂಲಂಗಿಯ ರಸಕ್ಕೆ ಉಪ್ಪು ಬೆರೆಸಿ ಕುಡಿದರೆ ಇಳಿಮುಖವಾಗುತ್ತದೆ. ಜೇನ್ನೊಣ ಕಡಿತದ ನೋವು ಮತ್ತು ಬಾವು ಇಳಿಯಲು ಮೂಲಂಗಿಯ ರಸದ ಲೇಪನ ಪರಿಣಾಮಕಾರಿಯೆನಿಸಿದೆ.
ಮೂಲಂಗಿಯಲ್ಲಿರುವ ಮೈರೊಸಿನೇಸ್, ಡಯಸ್ಟೇಟ್, ಎಮಿಲೇಸ್, ಎಸ್ಟೆರೇಸ್ ಕಿಣ್ವಗಳು ಪಿತ್ಥಕೋಶದ ಸೋಂಕು ಮತ್ತು ಹುಣ್ಣುಗಳನ್ನು ನಿವಾರಿಸುತ್ತವೆ. ಕಾಮಾಲೆ ಜಾಂಡಿಸ್ ರೋಗ ಬಂದಾಗ ರಸದ ಸೇವನೆ ಮಾಡಿದರೆ ರೋಗವನ್ನು ಶೀಘ್ರವಾಗಿ ಗುಣಪಡಿಸಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.
ಪಿತ್ಥಕೋಶದ ಕಲ್ಲನ್ನು ಕರಗಿಸುತ್ತದೆ. ಪಿತ್ಥ ಜನಕಾಂಗದ ರಕ್ಷಣೆಗೆ ತುಂಬ ಸಹಕಾರಿ. ಆಹಾರದಲ್ಲಿರುವ ಪ್ರೊಟೀನ್ ಮತ್ತು ಕೊಬ್ಬನ್ನು ತ್ವರಿತವಾಗಿ ಅರಗಿಸಲು ಅಗತ್ಯವಾದ ಪಿತ್ಥರಸವನ್ನು ಹೆಚ್ಚು ಸ್ರವಿಸುತ್ತದೆ. ಇದರ ರಸ ಸೇವನೆಯನ್ನು ಆರು ದಿನಗಳ ಕಾಲ ಮಾಡಿದರೆ ಕೊಲೆಸ್ಟ್ರಾಲ್ ಪ್ರಮಾಣ ಕಡಮೆಯಾಗುತ್ತದೆ. ಬೊಜ್ಜು ಇಳಿಯುತ್ತದೆ.
ಜೀರ್ಣಕ್ರಿಯೆಗೆ ನೆರವಾಗುವ ಕಾರ್ಬೋಹೈಡ್ರೇಟ್ಸ್ ಮೂಲಂಗಿಯಲ್ಲಿದೆ. ಹೆಚ್ಚುನೀರನ್ನು ಹೀರಿಕೊಳ್ಳಲು ಕರುಳಿಗೆ ಸಹಕರಿಸುವ ಮೂಲಕ ವಿಸರ್ಜನ ದ್ರವ್ಯಗಳನ್ನು ಮೃದುಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಪೈಲ್ಸ್ ಬಾಧೆಯಿರುವವರಿಗೆ ಉಪಯುಕ್ತ. ಕರುಳಿನ ಚಲನೆಯನ್ನು ಹೆಚ್ಚಿಸುವ ನಾರು ಮೂಲಂಗಿಯಿಂದ ಸಿಗುತ್ತದೆ. ಅದು ಹೊಟ್ಟೆಯ ಹುಳಗಳನ್ನು ಕೊಲ್ಲುತ್ತದೆ.
ಮೂತ್ರ ವಿಸರ್ಜನೆಯನ್ನು ಹೆಚ್ಚಿಸಿ ಉರಿಮೂತ್ರ, ಉರಿಯೂತ, ಮೂತ್ರಕೋಶದ ಸೋಂಕುಗಳನ್ನು ಮೂಲಂಗಿಯ ರಸ ಗುಣಪಡಿಸುತ್ತದೆ. ಹಸಿವು ಹೆಚ್ಚಿಸುತ್ತದೆ. ಅಗ್ನಿ ಮಾಂದ್ಯ, ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ನಿವಾರಿಸುತ್ತದೆ. ದೇಹದ ತೂಕ ನಷ್ಟವಾಗದಂತೆ ನೋಡಿಕೊಳ್ಳುತ್ತದೆ.
ಜವಾಹರಲಾಲ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಶೋಧನೆಗಳು ಮೂಲಂಗಿಯು ಹೊಟ್ಟೆ, ಬಾಯಿ, ಮೂತ್ರಪಿಂಡ ಮತ್ತು ಸ್ತನ ಕ್ಯಾನ್ಸರ್ ರೋಗಗಳ ಜೀವಕೋಶಗಳನ್ನು ನಾಶಪಡಿಸಲು ಶಕ್ತವಾಗಿದೆ ಎನ್ನುತ್ತವೆ.
ಸಿರಿನ ದುರ್ಗಂಧ ದೂರವಿಡಲು ಮೂಲಂಗಿ ಸೇವನೆ ಪರಿಣಾಮಕರವಾಗಿದೆ. ಮೂಗು ಮತ್ತು ಗಂಟಲುಗಳ ಶ್ವಾಸವನ್ನು ಪರಿಶುದ್ಧಗೊಳಿಸುತ್ತದೆ. ಅಸ್ತಮಾ, ಶ್ವಾಸಕೋಶದ ಕೆರಳಿಕೆ, ಅಲರ್ಜಿ, ನೆಗಡಿಯಂತಹ ಸೋಂಕುಗಳಿಗೂ ಅದು ಉತ್ತಮ ಔಷಧವಾಗುತ್ತದೆ.
ರಕ್ತದಲ್ಲಿರುವ ತ್ಯಾಜ್ಯ ವಿಷಗಳನ್ನು ಹೊರದೂಡಲು ಮೂಲಂಗಿ ಸಮರ್ಥವಾಗಿದೆ. ತಾಜಾ ಆಮ್ಲಜನಕವನ್ನು ಪೂರೈಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.
ನಿತ್ಯವೂ ಮೂಲಂಗಿ ಸೇವಿಸುವವರಿಗೆ ಹೃದಯಾಘಾತದ ಸಂಭವ ಕಡಿಮೆ. ರಕ್ತದಲ್ಲಿರುವ ಸಕ್ಕರೆಯ ಗುಣಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದವರಿಗೂ ಉಪಕಾರಿಯಾಗಿದೆ. ಅತಿಸಾರಕ್ಕೂ ಅದರ ಎಲೆಗಳ ಕಷಾಯ ಮದ್ದಾಗುತ್ತದೆ.
ಲ್ಯೂಕೊಡರ್ಮಾದಂತಹ ಚರ್ಮರೋಗಗಳಿಗೆ ಮೂಲಂಗಿಯ ಬೀಜವೂ ಔಷಧವೆನಿಸಿದೆ. ಬೀಜಗಳ ಚೂರ್ಣ ತಯಾರಿಸಿ ವಿನೆಗರ್, ಶುಂಠಿರಸ, ಗೋಮೂತ್ರಗಳ ಮಿಶ್ರಣದಲ್ಲಿ ಬೆರೆಸಿ ಚರ್ಮವ್ಯಾಧಿಗಳಿಗೆ ಲೇಪಿಸಿದರೆ ಗುಣವಾಗುತ್ತದೆ.
ಮೊಳಕೆ ಬರಿಸಿದ ಬೀಜಗಳನ್ನು ಬೇಯಿಸಿ ತಿನ್ನುವುದರಿಂದ ಮೈಗ್ರೇನ್, ಮೊಡವೆ, ರಕ್ತದ ಒತ್ತಡಗಳು ಶಮನವಾಗುತ್ತವೆ.
ಜೇನು ಮತ್ತು ಶುಂಠಿರಸದೊಂದಿಗೆ ಸೇವಿಸಿದರೆ ಅಜೀರ್ಣ ಪರಿಹಾರವಾಗುವುದು. ವಾಕರಿಕೆ ಮತ್ತು ತಲೆನೋವು ತೀವ್ರವಾಗಿ ಬಾಧಿಸಿದಾಗ ಮೂಲಂಗಿಯ ರಸಕ್ಕೆ ಕಾಳುಮೆಣಸಿನ ಹುಡಿ ಬೆರೆಸಿ ಸೇವಿಸಬಹುದು.