ಚಳಿಗಾಲದಲ್ಲಿ ಮನಸ್ಸು ಉಲ್ಲಾಸತನ ಕಳೆದುಕೊಂಡು, ದೇಹ ಆಲಸಿಯಾಗಿ, ಕಾಯಿಲೆಗೆ ತುತ್ತಾಗುವುದು ಸ್ವಾಭಾವಿಕ. ಅನಾಸಕ್ತಿ, ಬೇಸರ, ಸಂತಸ ರಹಿತ ಮನಸ್ಸು, ಖಿನ್ನತೆ, ಒಟ್ಟಿನಲ್ಲಿ ಜಡತ್ವ ಚಳಿಗಾಲದ ಕೊಡುಗೆ. ಒಣ ಚರ್ಮ, ಒಡೆದ ತುಟಿ, ಪಾದಗಳಲ್ಲಿ ಬಿರುಕು , ಮೈ ಕೈ ಮತ್ತು ಕೀಲುಗಳಲ್ಲಿ ನೋವು , ನೆಗಡಿ, ಕೆಮ್ಮು , ಗಂಟಲಿನ ಸೋಂಕು, ಅಸ್ತಮಾ, ವೈರಾಣುಗಳ ಬಾದೆ ಕೂಡ ಸಾಮಾನ್ಯ, ಹೃದಯಾಘಾತಗಳು ಹೆಚ್ಚು. ಈಗ ಚಳಿ ಇದೆ. ಮುಂದಿನ ಬೇಸಿಗೆಗೆ ಯೋಗ ಪ್ರಾರಂಭಿಸುತ್ತೇನೆ ಎಂದುಕೊಂಡಿದ್ದರೆ ಈಗಲೇ ನಿಮ್ಮ ಅಭಿಪ್ರಾಯ ಬದಲಿಸಿ. ಯೋಗಕ್ಕೆ ಇದು ಸಕಾಲ. ಚಳಿಗಾಲದಲ್ಲಿ ಹಗಲು ಕಡಿಮೆ. ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳನ್ನು ಯೋಗ, ಆಹಾರದ ಮೂಲಕ ಪರಿಹರಿಸಿಕೊಳ್ಳಬಹುದು.
೧.ಶ್ವಾಸಕೋಶದ ಕಾಯಿಲೆಗಳು – ಕ್ರಮಬದ್ಧವಾದ ಉಸಿರಾಟದಿಂದ, ಆಸನಗಳಿಂದ ಶ್ವಾಸಕೋಶದ ಸಮಸ್ಯೆ ದೂರವಿಡಬಹುದು. ಆಸನಗಳನ್ನು ಸರಿಯಾದ ಕ್ರಮದಲ್ಲಿ ಮಾಡುವುದರಿಂದ ಶ್ವಾಸಕೋಶದ ಮಾಂಸ ಖಂಡಗಳು ಬಲಗೊಳ್ಳುತ್ತವೆ. ದೇಹಕ್ಕೆ ಬೇಕಾದ ಆಮ್ಲಜನಕ ಸರಿಯಾದ ರೀತಿಯಲ್ಲಿ ಪೂರೈಕೆಗಾಗಿ, ಉಪಯೋಗವಾಗುತ್ತದೆ. ದೀರ್ಘ ಉಸಿರಾಟದಿಂದ ಶ್ವಾಸಕೋಶಗಳಲ್ಲಿ ತುಂಬಿಕೊಂಡಿರುವ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕಲು ಸಹಾಯವಾಗುತ್ತದೆ. ಚಳಿಗಾಲದಲ್ಲಿ ಗಂಭೀರವಾಗಿ ಕಾಡುವ ಅಸ್ತಮಾ, ನ್ಯುಮೋನಿಯಾ, ಶ್ವಾಸಕೋಶಗಳ ಉರಿಯೂತ,ನೆಗಡಿ ಮುಂತಾದುವುಗಳಿಗೆ ಆಸನ, ಪ್ರಾಣಾಯಾಮ ಮತ್ತು ಧ್ಯಾನಗಳು ಅದ್ಭುತ ಪರಿಹಾರ ನೀಡುತ್ತವೆ. ೨. ಕೀಲು, ಸ್ನಾಯು ನೋವು ಮತ್ತು ಸಂಧಿವಾತ – ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತಗೊಂಡು, ಮಾಂಸ ಖಂಡಗಳು ಬಿಗಿಗೊಂಡು ನೋವು ಹೆಚ್ಚು. ಚಳಿಗಾಲದಲ್ಲಿ ಚಟುವಟಿಕೆಗಳನ್ನು ಮಾಡಿದರೆ ನೋವು ಇನ್ನೂ ಹೆಚ್ಚುತ್ತದೆ ಎಂದು ತಪ್ಪಾಗಿ ತಿಳಿಯುತ್ತಾರೆ. ಆದರೆ ಇವುಗಳಿಂದಲೇ ನೋವು ಕಡಿಮಯಾಗುತ್ತದೆ. ಪ್ರತಿದಿನ ಯೋಗ ಮಾಡುವುದರಿಂದ ಕೀಳುಗಳಿಗೆ ಚಾಲನೆ ಉಂಟಾಗಿ ಅವು ಸಡಿಲಗೊಳ್ಳುತ್ತವೆ. ಮಾಂಸ ಖಂಡಗಳ ಬಿಗಿತ ಕಡಿಮೆಯಾಗುತ್ತದೆ. ರಕ್ತ ಪರಿಚಲನೆ ಸುಗಮವಾಗಿ, ನೋವು ಶಮನಗಳ್ಳುವುದು.
3. ಮಾನಸಿಕ ಸಮಸ್ಯೆ – ಚಳಿಗಾಲದಲ್ಲಿ ಬಿಸಿಲು ಕಡಿಮೆ ಇರುವುದರಿಂದ ಹಾರ್ಮೋನುಗಳ ಲ್ಲಿ ಬದಲಾವಣೆಗಳು ಉಂಟಾಗುತ್ತವೆ.ಖಿನ್ನತೆ ಮತ್ತು ಋತುಚಕ್ರ ಕಾಣಿಸಿಕೊಳ್ಳುವುದಕ್ಕೆ ಮುಂಚಿನ ಲಕ್ಷಣಗಳಾದ ಮಾನಸಿಕ ಒತ್ತಡ, ನೋವು, ಸೆಳೆತಗಳು ಹೆಚ್ಚುತ್ತವೆ. ಋತುಮಾನದ ಕಾಯಿಲೆಗಳು ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿದ್ದು, ಸೈಕಾಲಜಿ ಟುಡೇ ಪತ್ರಿಕೆಯ ಪ್ರಕಾರ ಅಮೆರಿಕದಲ್ಲಿ ಒಂದು ಕೋಟಿ ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಒಂದು ಪ್ರಕಾರದ ಖಿನ್ನತೆಯಾಗಿದ್ದು, ವರ್ಷದ ಕೆಲವು ತಿಂಗಳುಗಳಲ್ಲಿ, ಚಳಿಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಯೋಗ ಈ ರೋಗದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಅಲ್ಲದೇ ದೇಹದ ಉಷ್ಣತೆ ಹೆಚ್ಚಿಸಿ, ರಕ್ತನಾಳ, ಹೃದಯ ಮತ್ತು ಶ್ವಾಸಕೋಶ ವ್ಯವಸ್ಥೆಗಳನ್ನು ಸದೃಢಗಿಸುತ್ತದೆ. ದೈಹಿಕ ಆರೋಗ್ಯ ಹದಗೆಟ್ಟಿರುವ ಸೂಚನೆಯನ್ನು ಖಿನ್ನತೆ ಸೂಚಿಸುತ್ತದೆ. ಖಿನ್ನತೆಯಿಂದ ರೋಗ ನಿರೋಧಕ ವ್ಯವಸ್ಥೆ ಹದಗೆಡುತ್ತದೆ. ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಉಸಿರನ್ನು ಆಳದಿಂದ ಹೊರಹಾಕುವುದರಿಂದ ಒತ್ತಡ ಕಡಿಮೆ ಮಾಡುವ ಹಾರ್ಮೋನುಗಳು ದೇಹದಲ್ಲಿ ಉತ್ಪಾದನೆಗೊಳ್ಳುತ್ತವೆ. ಪ್ರತಿದಿನ ೬೦ ನಿಮಿಷ ಯೋಗ ಮಾಡುವುದರಿಂದ ಖಿನ್ನತೆ ಕಡಿಮೆ ಆಗುತ್ತದೆ. ಧ್ಯಾನದಿಂದ ಸಿರೇಟೋನಿನ್ ಹೆಚ್ಚಿ ಮನಸ್ಸು ಉಲ್ಲಸಮಯವಾಗುತ್ತದೆ. ಅಧ್ಯಯನಗಳೂ ಇದನ್ನು ದೃಢಪಡಿಸಿವೆ. ೩.ಬೊಜ್ಜು ನಿಯಂತ್ರಣ – ಚಳಿಗಾಲದಲ್ಲಿ ಹೆಚ್ಚು ತಿನ್ನುವುದು, ಕುರು ಕುರು ತಿಂಡಿಯನ್ನು ತಿನ್ನುತ್ತಲೇ ಇರುವುದು ಸಾಮಾನ್ಯ. ಹೀಗಾಗಿ ಶ್ರಮವಿಲ್ಲದೆ ಬೊಜ್ಜು ಶೇಖರಗೊಳ್ಳುತ್ತದೆ. ಪ್ರತಿದಿನದ ಯೋಗ ಈ ಕೊಬ್ಬನ್ನು ಕರಗಿಸಿ, ದೇಹವನ್ನು ಸುಂದರವಾಗುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
೪.ಹೃದಯ ಸಮಸ್ಯೆಗಳು – ಚಳಿಯಲ್ಲಿ ರಕ್ತ ನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತ ಮತ್ತು ಹೃದಯದ ಬಡಿತದಲ್ಲಿ ಏರುಪೇರು ಉಂಟಾಗುತ್ತದೆ. ಹಲವಾರು ಅಧ್ಯಯನಗಳು ಯೋಗವು ಹೃದಯದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ಹೃದಯದ ಬಡಿತ ಕ್ರಮಬದ್ಧಗೊಳಿಸಿ, ಹೃದಯಕ್ಕೆ ಬಲ ಕೊಡುತ್ತದೆ ಎಂದಿದೆ. ಯೋಗದಿಂದ ಚರ್ಮದ ರಂಧ್ರಗಳು ತೆರೆದು, ವಿಷವಸ್ತು ಗಳು ಹೊರಹೋಗಲು ಸಹಾಯವಾಗುತ್ತದೆ. ಯೋಗ ಚರ್ಮಕ್ಕೆ ಹೊಳಪು ನೀಡಿ ಸುಕ್ಕಾಗದಂತೆ ತಡೆಯುತ್ತದೆ. ರಕ್ತದ ಒತ್ತಡ ರಕ್ತದಲ್ಲಿನ ಸಕ್ಕರೆ ಅಂಶವನ್ನು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಅಡ್ರಿನಲ್ ಗ್ರಂಥಿಯ, ಮೂತ್ರಕೋಶ ಮತ್ತು ಪಿತ್ತಜನಕಾಂಗಗಳ ಕೆಲಸ ಉತ್ತಮವಾಗಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಲು ಮತ್ತು ಉತ್ತಮ ನಿದ್ರೆಗೆ ಯೋಗವು ಸಹಕರಿಸುತ್ತದೆ. ಒಟ್ಟಿನಲ್ಲಿ ಚಳಿಗಾಲದ ಆರೋಗ್ಯದ ಸಮಸ್ಯೆಗಳಿಗೆ ಯೋಗ ಸೂಕ್ತ ಪರಿಹಾರವಾಗಿದೆ.